ಶಿಕಾರಿಪುರದಲ್ಲೇ ಅಪ್ಪ - ಮಕ್ಕಳ ಶಿಕಾರಿ ಮಾಡುತ್ತೇನೆ : ವಿಜಯೇಂದ್ರ ವಿರುದ್ಧ ಕೆ.ಎಸ್. ಈಶ್ವರಪ್ಪ ವಾಗ್ದಾಳಿ

Update: 2024-04-16 07:23 GMT
ಬಿ.ವೈ.ವಿಜಯೇಂದ್ರ / ಕೆ.ಎಸ್‌.ಈಶ್ವರಪ್ಪ

ಶಿವಮೊಗ್ಗ : ಶಿಕಾರಿಪುರದಲ್ಲೇ ಅಪ್ಪ - ಮಕ್ಕಳ ಶಿಕಾರಿ  ಮಾಡುತ್ತೇನೆ ಎಂದು ಕೆ.ಎಸ್ ಈಶ್ವರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ವಿಜಯೇಂದ್ರ  ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ವಿಜಯೇಂದ್ರನ ಪುಕ್ಸಟ್ಟೆ ಮಾತುಗಳಿಗೆ ನಾನು ಬೆಲೆ ಕೊಡಲ್ಲ.ರಾಜ್ಯಾಧ್ಯಕ್ಷ ಆಗಿರುವುದಕ್ಕೆ ನಿನಗೇನು ಯೋಗ್ಯತೆ ಇದೆ. ನಲವತ್ತು ವರ್ಷ ಪಕ್ಷಕ್ಕಾಗಿ ನಾನು ಶ್ರಮ ಹಾಕಿದ್ದೇನೆ. ನಿಮ್ಮಪ್ಪನ ಶ್ರಮದಿಂದ ನೀನು ರಾಜ್ಯಾಧ್ಯಕ್ಷನಾಗಿದ್ದೀಯಾ.ಈ ರೀತಿ ಮಾತಾಡೋಕೆ ನಿನಗೆ ಯೋಗ್ಯತೆ ಇಲ್ಲ" ಎಂದು ತಿರುಗೇಟು ನೀಡಿದರು.

"ಜಿಲ್ಲೆಯ ಜನಕ್ಕೆ ನಾನು ಏನು ಮಾಡಿದ್ದೇನೆ ಅನ್ನೋದು ಗೊತ್ತಿದೆ. ಶಿಕಾರಿಪುರದಲ್ಲಿ 60 ಸಾವಿರ ಇದ್ದ ಅಂತರ 10 ಸಾವಿರಕ್ಕೆ ಇಳಿದಿದೆ.  ಪಕ್ಷಕ್ಕೆ ನಿನ್ನ ಕೊಡುಗೆ ಏನು. ನೀನು ಇನ್ನು ಬಚ್ಚಾ. ನೆನಪಿಟ್ಟುಕೋ. ನನ್ನನ್ನು ಟೀಕೆ ಮಾಡುವ ಯೋಗ್ಯತೆ ನಿನಗೆ ಇಲ್ಲ. ಬಾಯಿಗೆ ಬಂದಂತೆ ಮಾತನಾಡಲು ಅವಕಾಶ ಕೊಟ್ಟಿಲ್ಲ" ಎಂದರು.

ಪಕ್ಷೇತರವಾಗಿ ನಿಂತ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವುದು ಏನು ಬಂತು. ಏನು ಕ್ರಮ ತಗೆದುಕೊಳ್ಳುತ್ತೀಯಾ, ತಗೋ. ಇಂತಹ ಗೊಡ್ಡು ಬೆದರಿಕೆಗೆ ನಾನು ಹೆದರಲ್ಲ. ಜನ ನನ್ನ ಜೊತೆ ಇದ್ದಾರೆ. ಅಪ್ಪ - ಮಕ್ಕಳ ಶಿಕಾರಿ ನಾನು ಮಾಡುತ್ತೇನೆ ಎಂದು ಹೇಳಿದರು.

ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯರ್ಥವಾಗುತ್ತಿದೆ. ಇವತ್ತು ಕೋರ್ಟ್ ಮುಂಭಾಗದಲ್ಲಿ ವಕೀಲರನ್ನ ಭೇಟಿ ಮಾಡಿದ್ದೇನೆ. ವಕೀಲರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News