ದೇಶ ವಿಭಜನೆಯ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲಬೇಕೆಂಬ ಮಾತಿಗೆ ಈಗಲೂ ಬದ್ಧ: ಕೆ.ಎಸ್. ಈಶ್ವರಪ್ಪ

Update: 2024-02-09 12:45 GMT

ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ದೇಶ ವಿಭಜನೆಯ ಮಾತನಾಡುವವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ನಾನು ದಾವಣಗೆರೆಯಲ್ಲಿ ಹೇಳಿದ ಮಾತಿಗೆ ಈಗಲೂ ಬದ್ಧ. ಅವರಿಗೆ ತಾಕತ್ತಿದ್ದರೆ ಕೇಸ್ ಹಾಕಲಿ ಎಂದು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಸಚಿವ ಎಚ್.ಕೆ ಪಾಟೀಲ್ ಹೇಳಿಕೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಡಿ.ಕೆ. ಸುರೇಶ್ ದಕ್ಷಿಣ ಭಾರತವನ್ನು ವಿಭಜಿಸುವ ಹೇಳಿಕೆ ನೀಡಿದ್ದಾರೆ. ವಿನಯ್ ಕುಲಕರ್ಣಿ ಹಾಗೂ ಡಿ.ಕೆ.ಶಿವಕುಮಾರ್ ಬೆಂಬಲ ನೀಡಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಇದನ್ನು ಖಂಡಿಸಿದ್ದಾರೆ. ಹೀಗಿರುವಾಗ ಎಚ್.ಕೆ.ಪಾಟೀಲ್ ಈ ರೀತಿ ಮಾತನಾಡಿರುವುದು ಅಚ್ಚರಿ ತಂದಿದೆ ಎಂದರು.

ಸಚಿವ ಪಾಟೀಲ್ ತಂದೆ ರಾಷ್ಟ್ರ ಭಕ್ತರಾಗಿದ್ದವರು. ಅವರ ಬಗ್ಗೆ ಗೌರವ ಇದೆ. ಅವರು ಕೇಸ್ ಹಾಕಲಿ ಎಂದು ಆಗ್ರಹಿಸುತ್ತೇನೆ. ಆಗ ಕೋರ್ಟ್ ಗೆ ಮಲ್ಲಿಕಾರ್ಜುನ ಖರ್ಗೆ ಸಹ ಬರಬೇಕಾಗುತ್ತದೆ. ನ್ಯಾಯಾಲಯವು ದೇಶ ದ್ರೋಹಿಗಳಿಗೆ ಮನ್ನಣೆ ನೀಡುತ್ತದೆಯೋ, ರಾಷ್ಟ್ರ ಭಕ್ತರಿಗೆ ಮನ್ನಣೆ ನೀಡುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು.

ಚಕ್ರವರ್ತಿ ಸೂಲಿಬೆಲೆ ವಿರುದ್ಧ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಬಗ್ಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ತುಷ್ಟಿಕರಣ ಮಾಡುತ್ತಿದೆ. ಇದರ ಭಾಗವಾಗಿಯೇ ಪರೀಕ್ಷೆ ಸೇರಿದಂತೆ ಎಲ್ಲ ರೀತಿಯಲ್ಲೂ ಅವರಿಗೆ ಅನುಕೂಲ ಮಾಡಿಕೊಡುತ್ತಿದೆ. ಇದು ಸಹ ಅದರ ಒಂದು ಭಾಗವೇ ಆಗಿದೆ. ಅವರು ಎಷ್ಟೇ ಎಫ್‌ಐಆರ್ ದಾಖಲಿಸಲಿ ನಾವು ಹೆದರುವುದಿಲ್ಲ. ರಾಷ್ಟ್ರಭಕ್ತರಾದ ನಾವು ಇದನ್ನು ಎದುರಿಸುತ್ತೇವೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ಹಾವಳಿ ಮುಂದುವರೆದಿದೆ ಎಂಬ ಕೆಂಪಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಕೆಂಪಣ್ಣ ಅವರು ಕಾಂಗ್ರೆಸ್ ಏಜೆಂಟ್ ಎಂದು ಈ ಮೊದಲೇ ನಾನು ಹೇಳಿದ್ದೆ. ಅವರು ಈಗ ಮತ್ತೊಮ್ಮೆ ಕಮಿಷನ್ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಆದರೆ ಯಾವ ಇಲಾಖೆಯಲ್ಲಿ ಯಾವ ಅಧಿಕಾರಿಗಳು ಸಚಿವರು ಕಮಿಷನ್ ಕೇಳಿದ್ದಾರೆ ಎಂದು ಬಹಿರಂಗಪಡಿಸಲಿ. ತಾನು ಕಾಂಗ್ರೆಸ್ ಏಜೆಂಟ್ ಎಂಬ ಆರೋಪದಿಂದ ತಪ್ಪಿಸಿಕೊಳ್ಳಲು ಅವರು ಈಗ ನಾಟಕ ಮಾಡುತ್ತಿದ್ದಾರೆ. ಅವರ ಬಳಿ ದಾಖಲೆ ಇದ್ದರೆ ಸರಕಾರಕ್ಕೆ, ಆಯೋಗಕ್ಕೆ ನೀಡಲಿ. ಹೀಗೆ ಆದರೆ ಅದು ಹತ್ತು ವರ್ಷವಾದರೂ ತನಿಖೆ ಆಗುವುದಿಲ್ಲ ಎಂದರು.

ಕೇಂದ್ರದ ಅನುದಾನ ಬಿಡುಗಡೆ ಕುರಿತು ಶ್ವೇತಪತ್ರ ಹೊರಡಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಈ ತನಕ ಅದನ್ನು ಅವರು ಹೊರಡಿಸಿಲ್ಲ. ಹೊರಡಿಸುವುದು ಇಲ್ಲ. ಶ್ವೇತ ಪತ್ರ ಬಿಡುಗಡೆ ಮಾಡಿದರೆ ವಾಸ್ತವಿಕ ಅಂಶ ತಿಳಿಯುತ್ತದೆ. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಶ್ವೇತಪತ್ರ ಹೊರಡಿಸುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News