ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್‌ಗೆ 10 ಕೋಟಿ ರೂ. ಹಾಗೂ ಕಾರು ಬಹುಮಾನ

Update: 2024-08-13 16:21 GMT

ಅರ್ಷದ್ ನದೀಮ್ | PC : X \ @iffiViews 

ಕರಾಚಿ : ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಸದ್ಯ ಪಾಕಿಸ್ತಾನದ ಜನಪ್ರಿಯ ಕ್ರೀಡಾಪಟುವಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ನದೀಮ್ ತನ್ನ ದೇಶಕ್ಕೆ ಒಲಿಂಪಿಕ್ಸ್‌ನಲ್ಲಿ ಮೊತ್ತ ಮೊದಲ ವೈಯಕ್ತಿಕ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಫೈನಲ್‌ನಲ್ಲಿ 92.97 ಮೀ.ದೂರಕ್ಕೆ ಜಾವೆಲಿನ್ ಎಸೆದು ಒಲಿಂಪಿಕ್ಸ್ ದಾಖಲೆ ನಿರ್ಮಿಸಿದ್ದ ನದೀಮ್ ಅವರು ಪ್ರತಿಸ್ಪರ್ಧಿ ಭಾರತದ ನೀರಜ್ ಚೋಪ್ರಾರನ್ನು ಹಿಂದಿಕ್ಕಿದ್ದರು. ನೀರಜ್ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಗೆದ್ದಿದ್ದರು.

ಪಂಜಾಬ್‌ನ ಖನೇವಾಲ್‌ನ ಗ್ರಾಮೀಣ ಪ್ರದೇಶದಿಂದ ಬಂದಿರುವ ನದೀಮ್‌ಗೆ ತರಬೇತಿ ನಡೆಸಲು ಹಾಗೂ ಸ್ಪರ್ಧೆಗಳಿಗೆ ವಿದೇಶಕ್ಕೆ ಪ್ರಯಾಣಿಸಲು ಪೂರಕ ವಾತಾವರಣ ಇರಲಿಲ್ಲ. ನದೀಮ್‌ಗೆ ಆರಂಭದಲ್ಲಿ ವಿದೇಶದಲ್ಲಿ ಸ್ಪರ್ಧಿಸಲು ಗ್ರಾಮಸ್ಥರು ಹಾಗೂ ಸಂಬಂಧಿಕರು ಹಣವನ್ನು ದೇಣಿಗೆ ನೀಡಿದ್ದರು.

ಆದರೆ ಇದೀಗ ನದೀಮ್‌ಗೆ ನಗದು ಬಹುಮಾನದ ಸುರಿಮಳೆಯೇ ಹರಿದುಬರುತ್ತಿದೆ. ಪಾಕಿಸ್ತಾನದ ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಝ್ ಷರೀಫ್ ಅವರು ಮಂಗಳವಾರ ಮಿಯಾನ್ ಚನ್ನುನಲ್ಲಿರುವ ನದೀಮ್ ಅವರ ಮನೆಗೆ ಭೇಟಿ ನೀಡಿ ಪಾಕಿಸ್ತಾನದ 10 ಕೋಟಿ ರೂ. ಗಳನ್ನು ನೀಡಿದರು. ವಿಶೇಷ ನೋಂದಣಿ ಸಂಖ್ಯೆ ಪಾಕ್-92.97(ನದೀಮ್ ಒಲಿಂಪಿಕ್ಸ್ ಸಾಧನೆ)ಹೊಂದಿರುವ ಹೋಂಡಾ ಸಿವಿಕ್ ಕಾರನ್ನು ನದೀಮ್‌ಗೆ ಉಡುಗೊರೆಯಾಗಿ ನೀಡಲಾಗಿದೆ.

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್‌ಗೆ ಪಾಕಿಸ್ತಾನದಲ್ಲಿ ನಗದು ಪ್ರಶಸ್ತಿಗಳು ಹಾಗೂ ಇತರ ಅಮೂಲ್ಯ ಬಹುಮಾನಗಳನ್ನು ನೀಡುತ್ತಿದ್ದರೂ ನದೀಮ್ ಅವರ ಮಾವ ಜಾವೆಲಿನ್ ಎಸೆತಗಾರನಿಗೆ ಎಮ್ಮೆಯನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.

ಎಮ್ಮೆಯನ್ನು ಉಡುಗೊರೆಯಾಗಿ ನೀಡುವುದು ನಮ್ಮ ಹಳ್ಳಿಯಲ್ಲಿ ಅತ್ಯಂತ ಮೌಲ್ಯಯುತ ಹಾಗೂ ಗೌರವಾನ್ವಿತ ಎಂದು ಪರಿಗಣಿಸಲಾಗಿದೆ. ನದೀಮ್ ಕೂಡ ತನ್ನ ಹಳ್ಳಿಯ ಬಗ್ಗೆ ಹೆಮ್ಮೆಪಡುತ್ತಾರೆ. ಯಶಸ್ಸಿನ ಹೊರತಾಗಿಯೂ ನದೀಮ್ ಅವರ ಮನೆ ಇನ್ನೂ ಹಳ್ಳಿಯಲ್ಲೇ ಇದೆ. ಅವರು ತನ್ನ ಹೆತ್ತವರು ಹಾಗೂ ಸಹೋದರರೊಂದಿಗೆ ವಾಸಿಸುತ್ತಿದ್ದಾರೆ ಎಂದು ನದೀಮ್ ಅವರ ಮಾವ ಮುಹಮ್ಮದ್ ನವಾಝ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News