ದಕ್ಷಿಣ ಆಫ್ರಿಕಾ ವಿರುದ್ಧ ಟಿ20: ಭಾರತಕ್ಕೆ 106 ರನ್ ಗಳ ಭರ್ಜರಿ ಜಯ
ಜೊಹಾನ್ಸ್ ಬರ್ಗ್: ಇಲ್ಲಿನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 106 ರನ್ ಗಳಿಂದ ಜಯ ಸಾದಿಸಿದೆ.
ಇಂದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ವಿಸ್ಪೋಟಕ ಶತಕ ಹಾಗೂ ಕುಲ್‌ದೀಪ್ ಯಾದವ್ 5 ವಿಕೆಟ್ ನರವಿನಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ದ ಏಕಪಕ್ಷೀಯವಾಗಿ ಪಂದ್ಯ ಗೆದ್ದು ಸರಣಿ ಸಮಬಲ ಗೊಳಿಸಿದೆ.
ವಾಂಡರರ್ಸ್ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್ ಬೀಸಿದ್ದ ಭಾರತ ತಂಡ ಹರಿಣಗಳಿಗೆ 202 ರನ್ ಗಳ ಗುರಿ ನೀಡಿತು. ಈ ಕಠಿಣ ಗುರಿ ಪಡೆದು ಬ್ಯಾಟಿಂಗ್ ಇಳಿದ ಹರಿಣ ಬ್ಯಾಟರ್ ಗಳು ಅಕ್ಷರಶಃ ಅಘಾತ ಎದುರಿಸಿದರು. ರೀಝಾ ಹೆಂಡ್ರಿಕ್ಸ್ 8ರನ್ ಗಳಿಸಿರುವಾಗ ಸಿರಾಜ್ ಎಸೆತದಲ್ಲಿ ರನೌಟ್ ಆದರು ಮತ್ತು ಮ್ಯಾಥ್ಯೂ ಬ್ರಿಟ್ಝ್‌ಕೆ 4ರನ್ ಗಳಿಸಿ ಮುಖೇಶ್ ಕುಮಾರ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ನಾಯಕ ಐಡನ್ ಮಾರ್ಕ್ರಮ್ 3 ಬೌಂಡರಿ 2 ಸಿಕ್ಸರ್‌ಗಳ ಸಹಿತ ಸ್ಪೋಟಕ 25ರನ್ ಭಾರಿಸಿ ಮೊತ್ತ ಬೆನ್ನಟ್ಟುವ ಹಾದಿಯಲ್ಲಿ ರವೀಂದ್ರ ಜಡೇಜ ಸ್ಪೀನ್ ಮೋಡಿಗೆ ಬಲಿಯಾದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಅನುಭವಿ ವಿಕೇಟ್ ಕೀಪರ್ ಹೆನ್ರಿಚ್ ಕ್ಲಾಸನ್ ಕೇವಲ 5ರನ್‌ಗೆ ಅರ್ಶದೀಪ್ ಬೌಲಿಂಗ್ ನಲ್ಲಿ ರಿಂಕು ಸಿಂಗ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಬಳಿಕ ಬ್ಯಾಟಿಂಗ್ ಬಂದ ಡೇವಿಡ್ ಮಿಲ್ಲರ್ 2 ಬೌಂಡರಿ 2 ಸಿಕ್ಸರ್ ಸಹಿತ 35ರನ್ ಬಾರಿಸಿ ದಕ್ಷಿಣ ಆಫ್ರಿಕಾ ಪರ ಗರಿಷ್ಠ ರನ್ ಸ್ಕೋರರ್ ಆದರು.
ಮಿಲ್ಲರ್ ಬಳಿಕ ಬ್ಯಾಟಿಂಗ್ ಬಂದ ಯಾವೊಬ್ಬ ಬ್ಯಾಟರ್ ಕೂಡ ಭಾರತೀಯ ಬೌಲರ್‌ಗಳ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಸಾಧ್ಯವಾಗಲಿಲ್ಲ. ಡೊನೋವನ್ ಫೆರೀರಾ 12, ಫೆಹಲುಕ್ವಾಯೋ 0, ಕೇಶವ ಮಹಾರಾಜ್ 1, ನಂದ್ರೆ ಬರ್ಗರ್ 1 ರನ್ ಬಾರಿಸಿದರು. ಕಡೆಯಲ್ಲಿ ಬ್ಯಾಟಿಂಗ್ ಬಂದ ಶಂಸಿ 1ರನ್ ಹಾಗೂ ಲಿಝಾದ್ ವಿಲಿಯಮ್ ಶೂನ್ಯಕ್ಕೆ ಕುಲ್‌ದೀಪ್ ಬೌಲಿಂಗ್ ನಲ್ಲಿ ಎಲ್‌ಬಿಡಬ್ಲ್ಯೂ ಆಗುವುದರೊಂದಿಗೆ 13.5ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಸರ್ವ ಪತನ ಕಂಡಿತು.
ಭಾರತದ ಪರ ಅತ್ಯತ್ತಮ ಬೌಲಿಂಗ್ ಪ್ರದರ್ಶನ ತೋರಿದ ಕುಲ್‌ದೀಪ್ ಯಾದವ್ 2.5 ಓವರ್‌ನಲ್ಲಿ 17 ರನ್ ಗೆ 5ವಿಕೆಟ್ ಪಡೆಯುವದರೊಂದಿಗೆ ಉತ್ತಮ ನಿರ್ವಹಣೆ ತೋರಿದರು. ರವೀಂದ್ರ ಜಡೇಜಾ 2, ಮುಖೇಶ್ ಕುಮಾರ್ ಹಾಗೂ ಅರ್ಶದೀಪ್ ಸಿಂಗ್ ತಲಾ ಒಂದು ವಿಕೆಟ್ ಕಬಳಿಸಿದರು.