ವಿಶ್ವಕಪ್ ನಲ್ಲಿ 12.50 ಲಕ್ಷ ಕ್ರಿಕೆಟ್ ಅಭಿಮಾನಿಗಳು ಹಾಜರು: ಐಸಿಸಿ
ಹೊಸದಿಲ್ಲಿ : ಆತಿಥೇಯ ಭಾರತವನ್ನು ಆರು ವಿಕೆಟ್ ಗಳ ಅಂತರದಿಂದ ಮಣಿಸಿರುವ ಆಸ್ಟ್ರೇಲಿಯ ಆರನೇ ಬಾರಿ ಪ್ರತಿಷ್ಠಿತ ಪ್ರಶಸ್ತಿಯನ್ನು ಬಾಚಿಕೊಳ್ಳುವುದರೊಂದಿಗೆ ರವಿವಾರ 13ನೇ ಆವೃತ್ತಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಮುಕ್ತಾಯವಾಗಿತ್ತು. ಅಕ್ಟೋಬರ್ 5ರಿಂದ ನ.19ರ ತನಕ ಭಾರತದಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಮೆಂಟ್ನಲ್ಲಿ ದಾಖಲೆಯ 1.25 ಮಿಲಿಯನ್(12.50 ಲಕ್ಷ)ಅಭಿಮಾನಿಗಳು ಸ್ಟೇಡಿಯಮ್ಗೆ ಆಗಮಿಸಿ ಪಂದ್ಯ ವೀಕ್ಷಿಸಿದ್ದರು ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಮಂಗಳವಾರ ಪ್ರಕಟಿಸಿದೆ.
ಒಟ್ಟು 12,50,307 ಪ್ರೇಕ್ಷಕರು ಹಾಜರಾಗಿದ್ದರು. ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ ಆತಿಥ್ಯದಲ್ಲಿ ನಡೆದಿದ್ದ 2015ರ ವಿಶ್ವಕಪ್ನಲ್ಲಿ ನಿರ್ಮಾಣವಾಗಿದ್ದ ದಾಖಲೆ(1.016 ಮಿಲಿಯನ್)ಮುರಿದುಬಿದ್ದಿದೆ ಎಂದು ಐಸಿಸಿ ತಿಳಿಸಿದೆ.
ರನ್ನರ್ಸ್ ಅಪ್ ತಂಡ ಭಾರತವು ಆಡದ ಕೆಲವು ಆರಂಭಿಕ ಪಂದ್ಯಗಳಲ್ಲಿ ಕೆಲವು ಸ್ಟೇಡಿಯಮ್ಗಳಲ್ಲಿ ಪ್ರೇಕ್ಷಕರ ಕೊರತೆ ಎದ್ದು ಕಂಡುಬಂದಿದ್ದರೂ ಒಟ್ಟಾರೆ ಪ್ರೇಕ್ಷಕರ ಅಂಕಿ-ಅಂಶಗಳು ಆರು ಪಂದ್ಯಗಳು ಉಳಿದಿರುವಂತೆಯೇ ಒಂದು ಮಿಲಿಯನ್ ಅನ್ನು ದಾಟಿತ್ತು.
ಏಕದಿನ ಅಂತರ್ರಾಷ್ಟ್ರೀಯ ಟೂರ್ನಮೆಂಟ್ ಅತ್ಯಂತ ಯಶಸ್ಸು ಕಂಡಿದೆ. ದಿಗ್ಬ್ರಮೆಗೊಳಿಸುವ ಪ್ರೇಕ್ಷಕರ ಹಾಜರಾತಿಯು ಕ್ರಿಕೆಟ್ನ ನಿರಂತರ ಆಕರ್ಷಣೆಯನ್ನು ಪ್ರದರ್ಶಿಸುತ್ತದೆ. ಏಕದಿನ ಕ್ರಿಕೆಟ್ ಮಾದರಿ ನೀಡುತ್ತಿರುವ ಉತ್ಸಾಹವನ್ನು ತೋರಿಸುತ್ತದೆ ಎಂದು ಐಸಿಸಿ ಇವೆಂಟ್ಸ್ ಮುಖ್ಯಸ್ಥ ಕ್ರಿಸ್ ಟೆಟ್ಲಿ ಹೇಳಿದ್ದಾರೆ.
ಈ ಪಂದ್ಯಾವಳಿಯು ಹಲವು ಪ್ರಸಾರ ಹಾಗೂ ಡಿಜಿಟಲ್ ವೀಕ್ಷಕರ ದಾಖಲೆಗಳನ್ನು ಮುರಿದಿದೆ. ಇದು ಕ್ರೀಡೆಯ ಸಂಭ್ರಮಾಚರಣೆಯಲ್ಲಿ ಜಾಗತಿಕವಾಗಿ ಕ್ರಿಕೆಟ್ ಅಭಿಮಾನಿಗಳನ್ನು ಒಂದುಗೂಡಿಸುವ ಸ್ಫರ್ಧೆಯಾಗಿದೆ ಎಂದು ಟೆಟ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.