ಆರನೇ ಬಾರಿ 200, ಅದಕ್ಕಿಂತ ಹೆಚ್ಚು ರನ್ ಚೇಸ್ |ಮುಂಬೈ ಇಂಡಿಯನ್ಸ್ ದಾಖಲೆಯನ್ನು ಮುರಿದ ಪಂಜಾಬ್ ಕಿಂಗ್ಸ್
ಹೊಸದಿಲ್ಲಿ: ಅಹ್ಮದಾಬಾದ್ನಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಆತಿಥೇಯ ಗುಜರಾತ್ ಟೈಟಾನ್ಸ್ ವಿರುದ್ಧ ಮೂರು ವಿಕೆಟ್ ಗಳ ಅಂತರದಿಂದ ರೋಚಕ ಜಯ ದಾಖಲಿಸಿತ್ತು. ಈ ಗೆಲುವಿನ ಮೂಲಕ ಪಂಜಾಬ್ ತಂಡ ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಬಾರಿ 200 ಅಥವಾ ಅದಕ್ಕಿಂತ ಅಧಿಕ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಸಾಧನೆ ಮಾಡಿದೆ. ಟಿ-20 ಟೂರ್ನಮೆಂಟ್ ನಲ್ಲಿ ಪಂಜಾಬ್ ಕ್ರಿಕೆಟ್ ತಂಡ ಆರನೇ ಬಾರಿ ಈ ಸಾಧನೆ ಮಾಡಿದೆ.
ಪಂಜಾಬ್ ಕಿಂಗ್ಸ್ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಮುರಿದಿದೆ. ಮುಂಬೈ ಐದು ಬಾರಿ 200 ಅಥವಾ ಅದಕ್ಕಿಂತ ಹೆಚ್ಚು ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು.
ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ) ಹಾಗೂ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)200 ಅಥವಾ ಅದಕ್ಕಿಂತ ಹೆಚ್ಚು ಮೊತ್ತವನ್ನು ತಲಾ ಮೂರು ಬಾರಿ ಯಶಸ್ವಿಯಾಗಿ ಬೆನ್ನಟ್ಟಿದ ಸಾಧನೆ ಮಾಡಿವೆ.
ನಾಯಕ ಶುಭಮನ್ ಗಿಲ್ ಪ್ರಸಕ್ತ ಐಪಿಎಲ್ನಲ್ಲಿ ಗಳಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್(ಔಟಾಗದೆ 89 ರನ್) ಹಾಗೂ ರಾಹುಲ್ ಟೆವಾಟಿಯ(23 ರನ್, 8 ಎಸೆತ)ನೆರವಿನಿಂದ ಗುಜರಾತ್ ಟೈಟಾನ್ಸ್ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತ್ತು.
ಇದಕ್ಕೆ ಉತ್ತರವಾಗಿ ಪಂಜಾಬ್ ಕಿಂಗ್ಸ್ ತಂಡ ಶಶಾಂಕ್ ಸಿಂಗ್ ಅವರ ಸ್ಫೋಟಕ ಇನಿಂಗ್ಸ್(ಔಟಾಗದೆ 61)ನೆರವಿನಿಂದ ಪ್ರಬಲ ಬ್ಯಾಟಿಂಗ್ ಪ್ರದರ್ಶನ ನೀಡಿತು. ಶಶಾಂಕ್ಗೆ ಅಶುತೋಷ್ ಶರ್ಮಾ(31 ರನ್)ಉತ್ತಮ ಸಾಥ್ ನೀಡಿದರು.
ಈ ಗೆಲುವಿನ ಮೂಲಕ ಪಂಜಾಬ್ ಮೂಲದ ಫ್ರಾಂಚೈಸಿಯು ಐಪಿಎಲ್-2024ರ ಅಂಕಪಟ್ಟಿಯಲ್ಲಿ ನಾಲ್ಕು ಅಂಕ ಗಳಿಸಿ ಐದನೇ ಸ್ಥಾನ ಪಡೆದಿದೆ. ಇದೇ ವೇಳೆ ಗುಜರಾತ್ ತಂಡ ಕೂಡ ನಾಲ್ಕಂಕ ಹೊಂದಿದ್ದರೂ ಆರನೇ ಸ್ಥಾನಕ್ಕೆ ಕುಸಿದಿದೆ.