2024 ಭಾರತ ಟಿ20 ತಂಡಕ್ಕೆ ವಿಶ್ವಕಪ್ ಗೆಲುವು ಸೇರಿದಂತೆ ಸಾಧನೆಯ ವರ್ಷ

Update: 2024-11-17 03:33 GMT

ಸಂಜು ಸ್ಯಾಮ್ಸನ್ | ತಿಲಕ್ ವರ್ಮಾ PC: x.com/BCCI

ಹೊಸದಿಲ್ಲಿ: ಭಾರತದ ಟಿ20 ಕ್ರಿಕೆಟ್ ತಂಡ ಭರ್ಜರಿ ಗೆಲುವಿನೊಂದಿಗೆ ಈ ಕ್ಯಾಲೆಂಡರ್ ವರ್ಷವನ್ನು ಪೂರ್ಣಗೊಳಿಸಿದೆ. ಜೋಹಾನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಹಾಗೂ ತಿಲಕ್ ವರ್ಮಾ ಅವರ ನೇತೃತ್ವದಲ್ಲಿ 283 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿದ್ದಲ್ಲದೇ ಭಾರಿ ಅಂತರದ ಜಯವನ್ನೂ ಸಾಧಿಸಿತು. ಇದು ಭಾರತ ತಂಡದ ಎರಡನೇ ಅತಿದೊಡ್ಡ ಮೊತ್ತವಾಗಿದೆ. ಪ್ರಬಲ ದಕ್ಷಿಣ ಆಫ್ರಿಕಾ ವಿರುದ್ಧ 3-1 ಅಂತರದ ಸರಣಿ ಜಯ ಸಾಧಿಸಿದ್ದು, ಭಾರತದ ಪ್ರಾಬಲ್ಯವನ್ನು ಸಾರುತ್ತದೆ.

ಈ ವರ್ಷ ಭಾರತ ಟಿ20 ಕ್ರಿಕೆಟ್ ತಂಡ ವಿಶ್ವಕಪ್ ಗೆಲ್ಲುವ ಸಾಧನೆ ಮಾಡಿದ್ದು ಒಂದೆಡೆಯಾದರೆ, ಆಡಿದ 26 ಪಂದ್ಯಗಳ ಪೈಕಿ 24ನ್ನು ಗೆದ್ದು ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಮೆರೆದಿದೆ. ಜಿಂಬಾಬ್ವೆ ವಿರುದ್ಧ ಒಂದು ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಪಂದ್ಯವನ್ನು ಮಾತ್ರ ಭಾರತ ಸೋತಿದೆ.

ಟಿ20 ಕ್ರಿಕೆಟ್ ನಲ್ಲಿ ಭಾರತದ ಗೆಲುವಿನ ಪ್ರಮಾಣ ಶೇಕಡ 92.31ರಷ್ಟಿದೆ. ಇದು ಎಲ್ಲಾ ಬಗೆಯ ಕ್ರಿಕೆಟ್ ನಲ್ಲಿ ಇತರ ತಂಡಗಳಿಗಿಂತ ಭಾರತ ತಂಡ ಹೊಂದಿದ ಗರಿಷ್ಠ ಯಶಸ್ಸಿನ ದರವಾಗಿದೆ. ಈ ಮೂಲಕ ಭಾರತ ತಂಡ 2018ರಲ್ಲಿ ಪಾಕಿಸ್ತಾನ ಸೃಷ್ಟಿಸಿದ್ದ ದಾಖಲೆಯನ್ನು ಪುಡಿಗಟ್ಟಿದೆ. 2018ರಲ್ಲಿ ಪಾಕಿಸ್ತಾನ 19 ಪಂದ್ಯಗಳಲ್ಲಿ 17ನ್ನು ಗೆದ್ದು ದಾಖಲೆ ಸ್ಥಾಪಿಸಿತ್ತು. 2021ರಲ್ಲಿ ತಮಿಳುನಾಡು ತಂಡ 16 ಪಂದ್ಯಗಳ ಪೈಕಿ 15ನ್ನು ಗೆದ್ದಿತ್ತು.

2024ರಲ್ಲಿ ಏಕದಿನ ವಿಶ್ವಕಪ್ ಸೋತ ಮುಖಭಂಗವನ್ನು ತಪ್ಪಿಸಿಕೊಳ್ಳುವ ರೀತಿಯಲ್ಲಿ ಟಿ20 ವಿಶ್ವಕಪ್ ಜಯಿಸುವಲ್ಲಿ ಭಾರತ ಯಶಸ್ವಿಯಾಯಿತು. ಜತೆಗೆ 11 ವರ್ಷಗಳ ಐಸಿಸಿ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿತು. ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡದಿಂದ ಹೊರನಡೆದರೂ ಯುವ ಪಡೆ ಅದ್ಭುತ ಸಾಧನೆಯ ಮೂಲಕ ಗಮನ ಸೆಳೆದಿದೆ. ಜಿಂಬಾಬ್ವೆ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ವಿರುದ್ಧ ಸರಣಿ ಜಯ ಸಾಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News