2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಕಟ್ಟುನಿಟ್ಟಿನ ಭದ್ರತಾ ಕ್ರಮ ಕಾಯ್ದುಕೊಳ್ಳಬೇಕು: ಬಸಿತ್ ಅಲಿ

Update: 2024-08-13 22:06 IST
2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಕಟ್ಟುನಿಟ್ಟಿನ ಭದ್ರತಾ ಕ್ರಮ ಕಾಯ್ದುಕೊಳ್ಳಬೇಕು: ಬಸಿತ್ ಅಲಿ
  • whatsapp icon

ಲಾಹೋರ್ : ನಮ್ಮ ದೇಶದಲ್ಲಿ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಪಾಕಿಸ್ತಾನವು 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ತಯಾರಿ ನಡೆಸುತ್ತಿರುವಾಗಲೇ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಒತ್ತಿ ಹೇಳಿದ್ದಾರೆ.

1996ರಲ್ಲಿ ಭಾರತ ಹಾಗೂ ಶ್ರೀಲಂಕಾ ಸಹ ಆತಿಥ್ಯದಲ್ಲಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಿದ ನಂತರ ಪಾಕಿಸ್ತಾನದಲ್ಲಿ ನಡೆಯಲಿರುವ ಮೊದಲ ಐಸಿಸಿ ಸ್ಪರ್ಧಾವಳಿ ಇದಾಗಿದೆ.

ಮುಂಬರುವ ಬಾಂಗ್ಲಾದೇಶ, ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ಸರಣಿಗಳಲ್ಲಿ ಯಾವುದೇ ರೀತಿಯ ಭದ್ರತಾಲೋಪವು ಚಾಂಪಿಯನ್ಸ್ ಟ್ರೋಫಿಯನ್ನು ಯಶಸ್ವಿಯಾಗಿ ಆಯೋಜಿಸುವ ಪಾಕಿಸ್ತಾನದ ಅವಕಾಶವನ್ನು ಗೊಂದಲಕ್ಕೀಡು ಮಾಡಲಿದೆ ಎಂದು ಅಲಿ ಹೇಳಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಆತಿಥ್ಯವಹಿಸಿರುವ ಪಾಕಿಸ್ತಾನಕ್ಕೆ ಬಾಂಗ್ಲಾದೇಶದ ನಂತರ ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ಆಗಮಿಸಲಿವೆ. ನಾವು ಭದ್ರತೆಯ ಬಗ್ಗೆ ಗಮನ ಹರಿಸಬೇಕು. ಈ ಸರಣಿಯಲ್ಲಿ ಯಾವುದೇ ಘಟನೆ ನಡೆದರೂ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಾರದು. ಬಲೂಚಿಸ್ತಾನ ಹಾಗೂ ಪೇಶಾವರದಲ್ಲಿ ನಮ್ಮ ಸೈನಿಕರು ಹುತಾತ್ಮರಾಗುತ್ತಿದ್ದಾರೆ. ಇದು ಏಕೆ ನಡೆಯುತ್ತಿದೆ ಎಂದು ಸರಕಾರವೇ ಉತ್ತರಿಸಬಹುದು ಎಂದು ಅಲಿ ಹೇಳಿದ್ದಾರೆ.

ಹಿಂದಿನ ಘಟನೆಗಳನ್ನು ಉಲ್ಲೇಖಿಸಿ ವಿದೇಶಿ ತಂಡಗಳು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ಭೀತಿ ವ್ಯಕ್ತಪಡಿಸಿದ್ದವು. 2021ರಲ್ಲಿ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಏಕದಿನ ಸರಣಿಗೆ ಮೊದಲು ತನ್ನ ಪ್ರವಾಸವನ್ನು ರದ್ದುಪಡಿಸಿತ್ತು. ಆ ನಂತರ ಇಂಗ್ಲೆಂಡ್ ಕೂಡ ಇದೇ ದಾರಿ ಅನುಸರಿಸಿತ್ತು.

ಚಿಕ್ಕ ಭದ್ರತಾ ಉಲ್ಲಂಘನೆಯಾಗದಂತೆ ನಾವು ಖಚಿತಪಡಿಸಬೇಕು. ನಮ್ಮ ಪ್ರಧಾನಮಂತ್ರಿ ಹಾಗೂ ಅಧ್ಯಕ್ಷರಿಗೆ ನೀಡುವ ಭದ್ರತೆಯನ್ನು ವಿದೇಶಿ ತಂಡಗಳಿಗೆ ನೀಡಬೇಕು. ಪಿಸಿಬಿ ಅಧ್ಯಕ್ಷರು ಇದನ್ನು ಅರಿತುಕೊಂಡಿದ್ದಾರೆಂದು ಭಾವಿಸುವೆ ಎಂದು ಅಲಿ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News