4 ನೇಶನ್ಸ್ ಟೂರ್ನಮೆಂಟ್; ಇಂಗ್ಲೆಂಡನ್ನು 3-3 ಡ್ರಾದಲ್ಲಿ ಹಿಡಿದಿಟ್ಟ ಭಾರತೀಯ ಜೂನಿಯರ್ ಮಹಿಳೆಯರು
ಡಸಲ್‍ಡಾರ್ಫ್ (ಜರ್ಮನಿ): ಜರ್ಮನಿಯ ಡಸಲ್‍ಡಾರ್ಫ್‍ನಲ್ಲಿ ನಡೆಯುತ್ತಿರುವ 4 ನೇಶನ್ಸ್ ಟೂರ್ನಮೆಂಟ್‍ನಲ್ಲಿ ರವಿವಾರ ಭಾರತೀಯ ಜೂನಿಯರ್ ಮಹಿಳಾ ಹಾಕಿ ತಂಡವು ಇಂಗ್ಲೆಂಡ್ ವಿರುದ್ಧ 3-3ರ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಆರನೇ ನಿಮಿಷದಲ್ಲಿ ಹೀನಾ ಬಾನು, 49ನೇ ನಿಮಿಷದಲ್ಲಿ ಋತುಜಾ ದಾದಾಸೊ ಪಿಸಲ್ ಮತ್ತು 53ನೇ ನಿಮಿಷದಲ್ಲಿ ಮಮ್ತಾಝ್ ಖಾನ್ ಭಾರತದ ಪರವಾಗಿ ಗೋಲುಗಳನ್ನು ಬಾರಿಸಿದರು.
ಇಂಗ್ಲೆಂಡ್ ಪರವಾಗಿ ಲೆ ಹುರೇ ಮಾರ್ತ 4 ಮತ್ತು 19ನೇ ನಿಮಿಷಗಳಲ್ಲಿ ಮತ್ತು ಅಲೆಕ್ಸಾಂಡರ್ ಬೆತ್ 9ನೇ ನಿಮಿಷದಲ್ಲಿ ಗೋಲುಗಳನ್ನು ಬಾರಿಸಿದರು.
ಇಂಗ್ಲೆಂಡ್ ಆರಂಭದಲ್ಲೇ ಗೋಲು ಗಳಿಸುವ ಮೂಲಕ ಉತ್ತಮ ಆರಂಭವನ್ನು ಮಾಡಿತು. ಮಾರ್ತ ನಾಲ್ಕನೇ ನಿಮಿಷದಲ್ಲಿ ಫೀಲ್ಡ್ ಗೋಲನ್ನು ಬಾರಿಸಿದರು. ಭಾರತವೂ ಹಿಂದೆ ಬೀಳಲಿಲ್ಲ. ತಕ್ಷಣ ಪ್ರತಿಕ್ರಿಯಿಸಿದ ಹೀನಾ 6ನೇ ನಿಮಿಷದಲ್ಲಿ ಫೀಲ್ಡ್ ಗೋಲೊಂದನ್ನು ದಾಖಲಿಸಿದರು.
ಬಳಿಕ, ಬೆತ್ ಪೆನಾಲ್ಟಿ ಕಾರ್ನರೊಂದನ್ನು ಗೋಲಾಗಿ ಪರಿವರ್ತಿಸಿ ತನ್ನ ತಂಡಕ್ಕೆ ಮುನ್ನಡೆ ಒದಗಿಸಿದರು. ಅರ್ಧಾವಧಿಯಲ್ಲಿ ಇಂಗ್ಲೆಂಡ್ 3-1ರಿಂದ ಮುಂದಿತ್ತು.
ಮೂರನೇ ಕ್ವಾರ್ಟರ್‍ನಲ್ಲಿ ಯಾರೂ ಗೋಲು ಬಾರಿಸಲಿಲ್ಲ. ನಾಲ್ಕನೇ ಕ್ವಾರ್ಟರ್‍ನಲ್ಲಿ ಅದ್ಭುತ ಫೀಲ್ಡ್ ಗೋಲು ಬಾರಿಸಿದ ಋತುಜಾ ಭಾರತವನ್ನು ಮರಳಿ ಸ್ಪರ್ಧೆಗೆ ತಂದರು. ಅಂತಿಮವಾಗಿ, ಪೆನಾಲ್ಟಿ ಕಾರ್ನರೊಂದನ್ನು ಗೋಲಾಗಿ ಪರಿವರ್ತಿಸಿದ ಮಮ್ತಾಝ್ ಗೋಲು ಪಟ್ಟಿಯನ್ನು 3-3ರಲ್ಲಿ ಸಮಬಲಗೊಳಿಸಿದರು.
ಇನ್ನು ಭಾರತವು ಮಂಗಳವಾರ ಸ್ಪೇನ್ ತಂಡವನ್ನು ಎದುರಿಸಲಿದೆ.