4ನೇ ಟ್ವೆಂಟಿ-20: ವಿಂಡೀಸ್ ವಿರುದ್ಧ ಭಾರತ ಜಯಭೇರಿ, ಸರಣಿ ಸಮಬಲ
ಫ್ಲೋರಿಡಾ :ಯಶಸ್ವಿ ಜೈಸ್ವಾಲ್(ಔಟಾಗದೆ 84 ರನ್, 51 ಎಸೆತ, 11 ಬೌಂಡರಿ, 3 ಸಿಕ್ಸರ್) ಹಾಗೂ ಶುಭಮನ್ ಗಿಲ್ (77 ರನ್, 47 ಎಸೆತ, 3 ಬೌಂಡರಿ, 5 ಸಿಕ್ಸರ್) ಭರ್ಜರಿ ಜೊತೆಯಾಟದ ನೆರವಿನಿಂದ ಭಾರತ ಕ್ರಿಕೆಟ್ ತಂಡ ವೆಸ್ಟ್ಇಂಡೀಸ್ ವಿರುದ್ಧ ನಾಲ್ಕನೇ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ 9 ವಿಕೆಟ್ ಗಳಿಂದ ಸುಲಭ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು 2-2ರಿಂದ ಸಮಬಲಗೊಳಿಸಿದೆ.
ಶನಿವಾರ ಗೆಲ್ಲಲೇಬೇಕಾದ ಪಂದ್ಯದಲ್ಲಿ 179 ರನ್ ಗುರಿ ಬೆನ್ನಟ್ಟಿದ ಭಾರತ 17 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಏಕಪಕ್ಷೀಯವಾಗಿ ಪಂದ್ಯವನ್ನು ಗೆದ್ದುಕೊಂಡಿತು.
ಇನಿಂಗ್ಸ್ ಆರಂಭಿಸಿದ ಗಿಲ್ ಹಾಗೂ ಜೈಸ್ವಾಲ್ ಮೊದಲ ವಿಕೆಟ್ಗೆ 165 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಈ ಜೋಡಿಯನ್ನು ಶೆಫರ್ಡ್ 16ನೇ ಓವರ್ನಲ್ಲಿ ಬೇರ್ಪಡಿಸಿದರು.
ಗಿಲ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಎಡಗೈ ಬ್ಯಾಟರ್ ಜೈಸ್ವಾಲ್ 33 ಎಸೆತಗಳಲ್ಲಿ ಟಿ-20ಯಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್ ಶಿಮ್ರಾನ್ ಹೆಟ್ಮೆಯರ್(61 ರನ್, 39 ಎಸೆತ) ಹಾಗೂ ಶಾಯ್ ಹೋಪ್(45 ರನ್, 29 ಎಸೆತ)ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 178 ರನ್ ಗಳಿಸಿತ್ತು.