ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಬರುವುದು ಶೇ.50 ದೃಢಪಟ್ಟಿದೆ: ಲತೀಫ್

Update: 2024-08-29 15:17 GMT

 ರಶೀದ್ ಲತೀಫ್ | PC : X 

ಲಾಹೋರ್: ಏಳು ವರ್ಷಗಳ ಅಂತರದ ನಂತರ ಚಾಂಪಿಯನ್ಸ್ ಟ್ರೋಫಿಯು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ಐಸಿಸಿ)ಕ್ಯಾಲೆಂಡರ್‌ಗೆ ಮರಳುತ್ತಿದ್ದು, ಪಾಕಿಸ್ತಾನವು ಮುಂದಿನ ವರ್ಷ ಫೆಬ್ರವರಿ 19ರಿಂದ ಮಾರ್ಚ್ 9ರ ತನಕ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವಹಿಸಲು ಸಜ್ಜಾಗಿದೆ.

ಆದರೆ ಉಭಯ ದೇಶಗಳ ನಡುವಿನ ಉದ್ವಿಗ್ನ ರಾಜಕೀಯ ಸಂಬಂಧಗಳಿಂದಾಗಿ ಈ ಪಂದ್ಯಾವಳಿಯಲ್ಲಿ ಭಾರತದ ಭಾಗವಹಿಸುವಿಕೆ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದಿದೆ. ಪಂದ್ಯಾವಳಿಯ ಹೈಬ್ರಿಡ್ ಮಾದರಿಯ ಭಾಗವಾಗಿ ಭಾರತವು ತನ್ನ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಲು ಬಯಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆ. ಇದು ಈಗ ಐವತ್ತು ಪ್ರತಿಶತ ದೃಢೀಕರಿಸಲ್ಪಟ್ಟಿದೆ ಎಂದು ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್-ಬ್ಯಾಟರ್ ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ.

ಜಯ್ ಶಾ ಅವರು ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರರ್ಥ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಅವರಿಗೆ ಬೆಂಬಲ ನೀಡಿದೆ. ಈ ಬೆಳವಣಿಗೆಯು ಭಾರತ ತಂಡವು ಪಾಕಿಸ್ತಾನಕ್ಕೆ ಬರುತ್ತಿದೆ ಎಂಬುದನ್ನು 50 ಪ್ರತಿಶತ ದೃಢಿಕರೀಸಿದೆ ಎಂದು ಮಾಜಿ ವಿಕೆಟ್‌ಕೀಪರ್ ಲತೀಫ್ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ.

2019ರಿಂದ ಬಿಸಿಸಿಐನ ಗೌರವ ಕಾರ್ಯದರ್ಶಿಯಾಗಿರುವ ಜಯ್ ಶಾ ಡಿಸೆಂಬರ್ 1ರಂದು ಗ್ರೆಗ್ ಬಾರ್ಕ್ಲೇ ಅವರಿಂದ ಐಸಿಸಿ ಅಧ್ಯಕ್ಷ ಪಟ್ಟವನ್ನು ವಹಿಸಿಕೊಳ್ಳಲಿದ್ದಾರೆ.

1996ರಲ್ಲಿ ವಿಶ್ವಕಪ್ ಟೂರ್ನಿಯನ್ನು ಜಂಟಿಯಾಗಿ ಆಯೋಜಿಸಿದ ನಂತರ ಪಾಕಿಸ್ತಾನವು ಐಸಿಸಿಯ ಯಾವುದೇ ಪ್ರಮುಖ ಟೂರ್ನಿಯ ಆತಿಥ್ಯವಹಿಸಿಲ್ಲ. 2023ರ ಏಶ್ಯಕಪ್‌ಗೆ ಪಾಕಿಸ್ತಾನವು ನಿಯೋಜಿತ ಆತಿಥೇಯ ದೇಶವಾಗಿತ್ತು. ಆದರೆ ಭಾರತವು ಏಶ್ಯಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಭಾರತ ಕ್ರಿಕೆಟ್ ತಂಡವು 2008ರಲ್ಲಿ ಏಶ್ಯಕಪ್‌ಗಾಗಿ ಪಾಕಿಸ್ತಾನಕ್ಕೆ ಕೊನೆಯ ಬಾರಿ ಪ್ರಯಾಣಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News