ಚೊಚ್ಚಲ ಒಲಿಂಪಿಕ್ಸ್ ಆಡಲು ಭಾರತದ 72 ಕ್ರೀಡಾಪಟುಗಳು ಸಜ್ಜು

Update: 2024-07-24 16:51 GMT

ಎಚ್.ಎಸ್.ಪ್ರಣಯ್ , ನಿಖಾತ್ ಝರೀನಾ 

ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್-2024ರಲ್ಲಿ 16 ಕ್ರೀಡೆಗಳಲ್ಲಿ ಸ್ಪರ್ಧಿಸಲು ಭಾರತವು 117 ಅತ್ಲೀಟ್ ಗಳನ್ನು ಒಳಗೊಂಡ ತಂಡವನ್ನು ಕಳುಹಿಸಿಕೊಟ್ಟಿದ್ದು ಈ ಪೈಕಿ 72 ಅತ್ಲೀಟ್ ಗಳು ಬೇಸಿಗೆ ಗೇಮ್ಸ್ ನಲ್ಲಿ ಪಾದಾರ್ಪಣೆಗೈಯ್ಯಲು ಸಜ್ಜಾಗಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಗಾಗಿ ಇಡೀ ವಿಶ್ವವೇ ಕಾತರದಿಂದಿದೆ. ಭಾರತದ ಯುವ ಅತ್ಲೀಟ್ ಗಳು ಅತ್ಯಂತ ದೊಡ್ಡ ವೇದಿಕೆಯಲ್ಲಿ ಹೊಸ ಅಲೆ ಎಬ್ಬಿಸಲು ಬಯಸಿದ್ದಾರೆ. ಈ ಪ್ರತಿಭಾವಂತ ಅತ್ಲೀಟ್ ಗಳಿಗೆ ದೇಶಕ್ಕೆ ಹೆಮ್ಮೆ ತರುವ ಸಾಮರ್ಥ್ಯವಿದೆ. ಪ್ಯಾರಿಸ್ ನಲ್ಲಿ ಪಾದಾರ್ಪಣೆಗೈಯ್ಯಲು ಕಾಯುತ್ತಿರುವ ಕೆಲವು ಭರವಸೆಯ ಭಾರತೀಯ ಅತ್ಲೀಟ್ ಗಳತ್ತ ಒಂದು ನೋಟ..

ಎಚ್.ಎಸ್.ಪ್ರಣಯ್(ಬ್ಯಾಡ್ಮಿಂಟನ್): ಭಾರತದ ಅಗ್ರ ರ್ಯಾಂಕಿನ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್.ಪ್ರಣಯ್ ಬಿಡಬ್ಲ್ಯುಎಫ್ ವಲಯದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಅಗ್ರ-10 ರ್ಯಾಂಕಿನ ಆಟಗಾರರ ವಿರುದ್ಧ 19 ಗೆಲುವು ದಾಖಲಿಸಿ ಗಮನ ಸೆಳೆದಿದ್ದಾರೆ. ಐದು ಬಾರಿ ಬಿಡಬ್ಲ್ಯುಎಫ್ ವರ್ಲ್ಡ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಪ್ರಣಯ್ಗೆ ಅಗ್ರ ರ್ಯಾಂಕಿನ ಎದುರಾಳಿಯನ್ನು ಗೇಮ್ ಪ್ಲ್ಯಾನ್ ಮೂಲಕ ಸೋಲಿಸುವ ಸಾಮರ್ಥ್ಯವಿದೆ. ಪುರುಷರ ಸಿಂಗಲ್ಸ್ ಡ್ರಾನಲ್ಲಿ 13ನೇ ಶ್ರೇಯಾಂಕ ಪಡೆದಿರುವ ಪ್ರಣಯ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸುಲಭ ಗುಂಪಿನಲ್ಲಿದ್ದಾರೆ. ಆದರೆ ನಿಜವಾದ ಸವಾಲು ನಾಕೌಟ್ ಸುತ್ತಿನಲ್ಲಿ ಎದುರಾಗಲಿದೆ.

32ರ ಹರೆಯದ ಪ್ರಣಯ್ ಪಾಲಿಗೆ ಇದು ಮೊದಲ ಹಾಗೂ ಕೊನೆಯ ಒಲಿಂಪಿಕ್ಸ್ ಆಗಿದೆ. ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಅವರ ಅನುಭವ ಹಾಗೂ ಕೌಶಲ್ಯ ನಿರ್ಣಾಯಕವಾಗಿದೆ.

ಅಂತಿಮ್ ಪಾಂಘಾಲ್(ಕುಸ್ತಿ): ಹರ್ಯಾಣದ ಕಿರಿಯ ವಯಸ್ಸಿನ ಕುಸ್ತಿಪಟು ಅಂತಿಮ್ ಪಾಂಘಾಲ್ ಈಗಾಗಲೇ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದಾರೆ. 2023ರ ಏಶ್ಯನ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಕಂಚಿನ ಪದಕ ಜಯಿಸಿರುವ ಅಂತಿಮ್ ಭರವಸೆಯ ಕುಸ್ತಿಪಟುವಾಗಿದ್ದಾರೆ. 53 ಕೆಜಿ ವಿಭಾಗದಲ್ಲಿ 4ನೇ ಶ್ರೇಯಾಂಕ ಪಡೆದಿರುವ ಅಂತಿಮ್, ಪ್ಯಾರಿಸ್ನಿಂದ ಸ್ವದೇಶಕ್ಕೆ ಪದಕ ತರಬಲ್ಲ ನೆಚ್ಚಿನ ಅತ್ಲೀಟ್ ಆಗಿದ್ದು ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ. ಭಾರತೀಯ ಕುಸ್ತಿಪಟುಗಳು ಕಳೆದ 4 ಆವೃತ್ತಿಯ ಒಲಿಂಪಿಕ್ಸ್ನಲ್ಲಿ ಪದಕಗಳೊಂದಿಗೆ ವಾಪಸಾಗಿರುವ ಹೆಮ್ಮೆಯ ಇತಿಹಾಸ ಹೊಂದಿದ್ದಾರೆ. ಈ ಬಾರಿ ಕಿರಿಯ ಕುಸ್ತಿಪಟು ಅಂತಿಮ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ನಿಖಾತ್ ಝರೀನಾ(ಬಾಕ್ಸಿಂಗ್): ಎರಡು ಬಾರಿಯ ವಿಶ್ವ ಚಾಂಪಿಯನ್ ಹಾಗೂ 2022ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತೆ ನಿಖಾತ್ ಝರೀನಾ, ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕದ ಭರವಸೆ ಮೂಡಿಸಿದ್ದಾರೆ. 2023ರ ಏಶ್ಯನ್ ಗೇಮ್ಸ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಝರೀನಾ ಕಂಚಿನ ಪದಕ ಜಯಿಸಿ ಭಾರತದ ಪ್ರಮುಖ ಬಾಕ್ಸಿಂಗ್ ತಾರೆಯಾಗಿ ಹೊರಹೊಮ್ಮಿದ್ದರು.

ತನ್ನ ಚೊಚ್ಚಲ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ವಿಶ್ವಾಸದಲ್ಲಿರುವ ಝರೀನಾ ಪ್ರಬಲ ಸ್ಪರ್ಧಿಯಾಗಿದ್ದಾರೆ. 28ರ ಹರೆಯದ ಝರೀನಾ, ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಲಿದ್ದು ರಾಷ್ಟ್ರೀಯ ಚಾಂಪಿಯನ್ ನಿಂದ ವಿಶ್ವ ಮಟ್ಟದ ತನಕ ಅವರ ಪಯಣವು ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.

ಧೀರಜ್ ಬೊಮ್ಮದೇವರ(ಆರ್ಚರಿ): ಧೀರಜ್ ಬೊಮ್ಮದೇವರ ಅವರ ಆರ್ಚರಿ ಪಯಣದ ಕತೆ ಸ್ಫೂರ್ತಿದಾಯಕವಾಗಿದೆ. ಕಷ್ಟದ ಹಾದಿಯಲ್ಲಿ ತನ್ನ ವೃತ್ತಿಜೀವನ ಆರಂಭಿಸಿದ ಧೀರಜ್, ಭಾರೀ ಯಶಸ್ಸಿನೊಂದಿಗೆ ಅಂತರ್ರಾಷ್ಟ್ರೀಯ ಮಟ್ಟಕ್ಕೇರಿದ್ದಾರೆ. ತನ್ನ ತಾಯಿಯ ಬೆಂಬಲದಿಂದ ಚಿನ್ನದ ಪದಕ ಜಯಿಸಿದ್ದ ಧೀರಜ್ ತನ್ನ ಒಲಿಂಪಿಕ್ಸ್ ಆಕಾಂಕ್ಷೆಯನ್ನು ಈಡೇರಿಸಿಕೊಂಡಿದ್ದರು. ಧೀರಜ್ ಪುರುಷರ ವೈಯಕ್ತಿಕ ಹಾಗೂ ಟೀಮ್ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.

ಜ್ಯೋತಿ ಯರ್ರಾಜಿ(ಅತ್ಲೆಟಿಕ್ಸ್): ಜ್ಯೋತಿ ಯರ್ರಾಜಿ 100 ಮೀ.ಹರ್ಡಲ್ಸ್ ನಲ್ಲಿ ನಿರಂತರವಾಗಿ ದಾಖಲೆಗಳನ್ನು ಮುರಿಯುತ್ತಾ ಬಂದಿದ್ದಾರೆ. ವೈಯಕ್ತಿಕ ಶ್ರೇಷ್ಠ ಸಾಧನೆ(12.78 ಸೆಕೆಂಡ್)ಯೊಂದಿಗೆ ರಾಷ್ಟ್ರೀಯ ದಾಖಲೆಗಳನ್ನು ಮುರಿದಿದ್ದಾರೆ. ಹಲವು ಸಂದರ್ಭಗಳಲ್ಲಿ ತನ್ನ ಕೌಶಲ್ಯ ಪ್ರದರ್ಶಿಸಿದ್ದಾರೆ. 2023ರ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ನಲ್ಲಿ 12.78 ಸೆಕೆಂಡ್ನಲ್ಲಿ ಗುರಿ ತಲುಪಿ ಕೇವಲ 0.01 ಸೆಕೆಂಡ್ ನಿಂದ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಸಮಯ ತಲುಪುವಲ್ಲಿ ಹಿಂದೆ ಬಿದ್ದಿದ್ದರು. 2023ರ ಏಶ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ ನಂತರ ಇದೀಗ ತನ್ನ ಚೊಚ್ಚಲ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.

ಒಲಿಂಪಿಕ್ಸ್ ವೇದಿಕೆಯಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳಲಿರುವ ಈ ಎಲ್ಲ ಅತ್ಲೀಟ್ಗಳು ಇಡೀ ರಾಷ್ಟ್ರದ ಆಕಾಂಕ್ಷೆಗಳನ್ನು ಹಾಗೂ ಕನಸುಗಳನ್ನು ಹೊತ್ತಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಭಾರತೀಯ ಕ್ರೀಡೆಗಳಲ್ಲಿ ಒಂದು ರೋಮಾಂಚಕ ಅಧ್ಯಾಯವಾಗುವ ಸಾಧ್ಯತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News