ರೋಚಕ ಪಂದ್ಯದಲ್ಲಿ 113ಕ್ಕೆ ಕುಸಿದ ಆಫ್ರಿಕಾ ತಂಡಕ್ಕೆ 4 ರನ್ ಜಯ
ಹೊಸದಿಲ್ಲಿ: ಟಿ20 ವಿಶ್ವಕಪ್ ಪಂದ್ಯಾವಳಿಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಬಾಂಗ್ಲಾದೇಶದ ಗೆಲುವಿಗೆ ಬೇಕಾದದ್ದು ಕೇವಲ 11 ರನ್ ಗಳು. ಆದರೆ ಕೇಶವ್ ಮಹಾರಾಜ್ ಬಾಂಗ್ಲಾ ಬ್ಯಾಟ್ಸ್ಮನ್ ಗಳನ್ನು ಯಶಸ್ವಿಯಾಗಿ ಕಟ್ಟಿಹಾಕಿ ತಂಡಕ್ಕೆ ನಾಲ್ಕು ರನ್ ಗಳ ರೋಚಕ ಜಯ ಸಾಧಿಸಲು ನೆರವಾದರು.
ಮೊಹ್ಮದುಲ್ಲಾ (20) ಮತ್ತು ತೌಹೀದ್ ಹಿದಾಯ್ (37) ಅವರ ಅದ್ಭುತ ಬ್ಯಾಟಿಂಗ್ ನಿಂದಾಗಿ ಕೊನೆಯವರೆಗೂ ಹೋರಾಡಿದ ಬಾಂಗ್ಲಾದೇಶ ತಂಡ ವೀರೋಚಿತ ಸೋಲು ಕಂಡಿತು.
ಆ್ಯನ್ರಿಚ್ ನೋರ್ಜೆ (2/17), ಕಗಿಸೊ ರಬಡಾ (2/19) ಮತ್ತು ಮಾರ್ಕೊ ಜಾಸೆನ್ (0/17) ಬೌಲಿಂಗ್ ನಲ್ಲಿ ಮಿತವ್ಯಯ ಸಾಧಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸವಾಲುದಾಯಕ ಪಿಚ್ ನಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡು 6 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದ ದಕ್ಷಿಣ ಆಫ್ರಿಕಾ ಅಲ್ಪಮೊತ್ತಕ್ಕೆ ಕುಸಿದರೂ ಅಂತಿಮವಾಗಿ ಗೆಲುವಿನ ನಗೆ ಬೀರಿತು. ಕೊನೆಯ ಎರಡು ಎಸೆತಗಳಲ್ಲಿ ಗೆಲುವಿಗೆ ಆರು ರನ್ ಬೇಕಿದ್ದಾಗ ಕೇಶವ್ ಮಹಾರಾಜ್ (3/27) ಬೌಲಿಂಗ್ ನಲ್ಲಿ ಮೊಹ್ಮದುಲ್ಲಾ ಅವರ ಭರ್ಜರಿ ಹೊಡೆತವನ್ನು ಬೌಂಡರಿ ಲೈನ್ ಬಳಿ ಏಡನ್ ಮ್ಯಾಕ್ರಮ್ ಅದ್ಭುತವಾಗಿ ಕ್ಯಾಚ್ ಮಾಡಿದರು. ಮಹಾರಾಜ್ ಕೊನೆಯ ಓವರ್ ನಲ್ಲಿ ಮೂರು ಫುಲ್ಟಾಸ್ ಗಳನ್ನು ಎಸೆದರೂ, ಬಾಂಗ್ಲಾದೇಶ ಅದರ ಪ್ರಯೋಜನ ಪಡೆಯುವಲ್ಲಿ ವಿಫಲವಾಗಿ 7 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.