ನಾಳೆ ಅಫ್ಘಾನಿಸ್ತಾನ vs ಶ್ರೀಲಂಕಾ: ಸೆಮಿಫೈನಲ್ಗೇರಲು ಉಭಯ ತಂಡಗಳಿಗೂ ಮಹತ್ವದ ಪಂದ್ಯ

Afghanistan vs Sri Lanka tomorrow: An important match for both the teams to reach the semi-finals

Update: 2023-10-29 17:32 GMT

Photo: cricketworldcup.com

ಪುಣೆ: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಸೋಮವಾರ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಸೆಣಸಲಿವೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಮ್ ನಲ್ಲಿ ನಡೆಯುವ ಪಂದ್ಯವು ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಸೆಮಿಫೈನಲ್ ಗೆ ತೇರ್ಗಡೆಗೊಳ್ಳುವ ಆಶೆಯನ್ನು ಜೀವಂತವಾಗಿರಿಸಬೇಕಾದರೆ ಈ ಪಂದ್ಯವನ್ನು ಗೆಲ್ಲುವುದು ಎರಡೂ ತಂಡಗಳಿಗೆ ಅನಿವಾರ್ಯವಾಗಿದೆ.

ಈವರೆಗೆ ಎರಡೂ ತಂಡಗಳು ತಲಾ ಐದು ಪಂದ್ಯಗಳನ್ನು ಆಡಿ ತಲಾ ನಾಲ್ಕು ಅಂಕಗಳನ್ನು ಪಡೆದಿವೆ. ಗೆಲ್ಲುವ ತಂಡದ ಸೆಮಿಫೈನಲ್ ಆಶೆ ಜೀವಂತವಾಗಿರುತ್ತದೆ. ಆದರೂ, ಸೋಲುವ ತಂಡವು ಹೊರಬೀಳಬೇಕೆಂದೇನೂ ಇಲ್ಲ. ಆದರೆ ಅದರ ಸೆಮಿಫೈನಲ್ ಸಾಧ್ಯತೆಗಳು ಇತರ ತಂಡಗಳ ಫಲಿತಾಂಶವನ್ನು ಆಧರಿಸುತ್ತದೆ.

ಈ ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಗಳಿಸಿರುವ ವಿಜಯವು ಅಫ್ಘಾನಿಸ್ತಾನದ ಆತ್ಮವಿಶ್ವಾಸವನ್ನು ಭಾರೀ ಪ್ರಮಾಣದಲ್ಲಿ ವೃದ್ಧಿಸಿದೆ. ಅದೇ ವೇಳೆ, ಶ್ರೀಲಂಕಾ ಕೂಡ ಆಸ್ಟ್ರೇಲಿಯ ವಿರುದ್ಧ ಆಕರ್ಷಕ ವಿಜಯ ಗಳಿಸಿದೆ. ಹಾಗಾಗಿ, ಸೋಮವಾರದ ಪಂದ್ಯವನ್ನು ಗೆಲ್ಲುವ ಸಮಾನ ಅವಕಾಶ ಎರಡೂ ತಂಡಗಳಿಗೆ ಇದೆ.

ವಿಶ್ವಕಪ್ಗಳಲ್ಲಿ ಶ್ರೀಲಂಕಾ ಸುದೀರ್ಘ ಇತಿಹಾಸವನ್ನು ಹೊಂದಿದೆಯಾದರೂ, ಅಫ್ಘಾನಿಸ್ತಾನವು ಕಳೆದ ಹಲವು ವರ್ಷಗಳಲ್ಲಿ ನಿರಂತರವಾಗಿ ತನ್ನ ಬಲವನ್ನು ಹೆಚ್ಚಿಸಿಕೊಂಡು ಬರುತ್ತಿದೆ.

ಅಫ್ಘಾನಿಸ್ತಾನದ ಬೌಲಿಂಗ್ ಹೆಚ್ಚಾಗಿ ಸ್ಪಿನ್ನರ್ಗಳನ್ನೇ ನಂಬಿದೆ. ರಶೀದ್ ಖಾನ್, ಮುಜೀಬುರ್ರಹ್ಮಾನ್, ಮುಹಮ್ಮದ್ ನಬಿ ಮತ್ತು ನೂರ್ ಅಹ್ಮದ್ ತಂಡದ ಸ್ಪಿನ್ ವಿಭಾಗಕ್ಕೆ ಬಲ ತುಂಬಿದ್ದಾರೆ. ಆದರೆ, ಬೌಲಿಂಗ್ನಲ್ಲಿ ಸಮತೋಲನ ತರಲು ಮಾರಕ ವೇಗಿಯೊಬ್ಬನ ಅಗತ್ಯವೂ ಇದೆ.

ಮಹತ್ವದ ಸಂದರ್ಭಗಳಲ್ಲಿ ವಿಕೆಟ್ಗಳನ್ನು ಉರುಳಿಸುವ ಜಾಣ್ಮೆಯನ್ನು ವೇಗಿ ನವೀನುಲ್ ಹಕ್ ಹೊಂದಿದ್ದಾರೆ. ಅಫ್ಘಾನಿಸ್ತಾನದ ವಿಜಯಗಳಲ್ಲಿ ಅವರು ಸೂಕ್ತ ಸಮಯಗಳಲ್ಲಿ ವಿಕೆಟ್ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಜೋಸ್ ಬಟ್ಲರ್ ವಿಕೆಟ್ ಪಡೆದಿದ್ದರು.

ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ ಈ ವಿಶ್ವಕಪ್ನಲ್ಲಿ ಎರಡು ಬಾರಿ ತಂಡವನ್ನು ವಿಜಯದತ್ತ ಮುನ್ನಡೆಸಿದ್ದಾರೆ. ನಿಯಮಿತ ನಾಯಕ ದಸುನ್ ಶನಕ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಮೆಂಡಿಸ್ ತಂಡದ ನಾಯಕತ್ವ ವಹಿಸಿದ್ದಾರೆ.

ತಂಡಗಳು

ಅಫ್ಘಾನಿಸ್ತಾನ: ಹಶ್ಮತುಲ್ಲಾ ಶಾಹಿದಿ (ನಾಯಕ), ರಹ್ಮಾನುಲ್ಲಾ ಗುರ್ಬಾಝ್, ಇಬ್ರಾಹೀಮ್ ಝದ್ರಾನ್, ರಹ್ಮತ್ ಶಾ, ಅಝ್ಮತುಲ್ಲಾ ಉಮರ್ಝಾಯ್, ಇಕ್ರಮ್ ಅಲಿಖಿಲ್ (ವಿಕೆಟ್ಕೀಪರ್), ಮುಹಮ್ಮದ್ ನಬಿ, ರಶೀದ್ ಖಾನ್, ಮುಜೀಬುರ್ರಹ್ಮಾನ್, ನವೀನುಲ್ ಹಕ್, ನೂರ್ ಅಹ್ಮದ್, ಫಝಲ್ಹಕ್ ಫಾರೂಖಿ, ರಿಯಾಝ್ ಹಸನ್, ಅಬ್ದುಲ್ ರಹ್ಮಾನ್, ನಜೀಬುಲ್ಲಾ ಝದ್ರಾನ್.

ಶ್ರೀಲಂಕಾ: ಕುಸಾಲ್ ಮೆಂಡಿಸ್ (ನಾಯಕ ಹಾಗೂ ವಿಕೆಟ್ಕೀಪರ್), ಪತುಮ್ ನಿಸ್ಸಂಕ, ಕುಸಾಲ್ ಪೆರೇರ, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಆ್ಯಂಜೆಲೊ ಮ್ಯಾಥ್ಯೂಸ್, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮದುಶಂಕ, ದುಶನ್ ಹೇಮಂತ, ಚಾಮಿಕ ಕರುಣಾರತ್ನೆ, ದಿಮುತ್ ಕರುಣಾರತ್ನೆ, ದುಶ್ಮಂತ ಚಮೀರ ಮತ್ತು ದುನೀತ್ ವೆಲ್ಲಲಗೆ.

ಮುಖಾಮುಖಿ

ಏಕದಿನ ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು 11 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 7 ಪಂದ್ಯಗಳನ್ನು ಶ್ರೀಲಂಕಾ ಗೆದ್ದರೆ, ಅಫ್ಘಾನಿಸ್ತಾನ ಮೂರು ಬಾರಿ ಜಯಭೇರಿ ಬಾರಿಸಿದೆ. ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

ವಿಶ್ವಕಪ್ಗಳಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿರುವುದು ಕೇವಲ ಎರಡು ಬಾರಿ. ಆ ಎರಡೂ ಪಂದ್ಯಗಳನ್ನು ಶ್ರೀಲಂಕಾ ಗೆದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News