ಐಪಿಎಲ್ ಹರಾಜಿನಲ್ಲಿ ಪಾಲ್ಗೊಂಡ ನಂತರ ಧೋನಿ ಜೊತೆಗೆ ಟೆನಿಸ್ ಆಡಿದ ರಿಷಭ್ ಪಂತ್

Update: 2023-12-20 17:12 GMT

ಪಂತ್ , ಧೋನಿ | Photo: @CricCrazyJohns \ X

ಹೊಸದಿಲ್ಲಿ: ಐಪಿಎಲ್-2024ಕ್ಕಾಗಿ ದುಬೈನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ ನಂತರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಟೆನಿಸ್ ನಲ್ಲಿ ತನ್ನ ಕೈಚಳಕ ತೋರಿದರು.

ಪಂತ್ ಅವರು ತನಗೆ ಆದರ್ಶರಾಗಿರುವ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಅವರೊಂದಿಗೆ ಟೆನಿಸ್ ಆಡುತ್ತಿರುವುದು ಕಂಡುಬಂದಿದೆ. ಒಳಾಂಗಣ ಟೆನಿಸ್ ಅಂಗಣದಲ್ಲಿ ಪಂತ್ ಹಾಗೂ ಧೋನಿ ಮಂಗಳವಾರ ಸಂಜೆ ಟೆನಿಸ್ ಆಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಲೆ ಮೇಲಿಂದ ಶಕ್ತಿಯುತ ಸ್ಮ್ಯಾಶ್ ನೀಡಿ ಪಂತ್ ಸಂಭ್ರಮಿಸುತ್ತಿರುವುದು, ಇದರಿಂದ ಧೋನಿ ಆಶ್ಚರ್ಯಚಕಿತರಾಗಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.

ಪಂತ್ ಅವರು ದುಬೈನಲ್ಲಿ ಮಂಗಳವಾರ ದಿನವಿಡೀ ನಡೆದ ಮಿನಿ ಐಪಿಎಲ್ ಹರಾಜಿನಲ್ಲಿ ಟೀಮ್ ಡೈರೆಕ್ಟರ್ ಸೌರವ್ ಗಂಗುಲಿ ಹಾಗೂ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ಭಾಗವಹಿಸಿದ್ದರು.

ವಿಕೆಟ್ ಕೀಪರ್-ಬ್ಯಾಟರ್ ಪಂತ್ ಕಳೆದ ವರ್ಷ ಭೀಕರ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ 2023ರಲ್ಲಿ ಒಂದೂ ಪಂದ್ಯವನ್ನು ಆಡಿಲ್ಲ. ಸ್ಪರ್ಧಾತ್ಮಕ ಕ್ರಿಕೆಟ್ ನಲ್ಲಿ ಆಡಲು ನನಗೆ ಇನ್ನೂ ಕೆಲವು ತಿಂಗಳುಗಳ ಅಗತ್ಯವಿದೆ ಎಂದು ಪಂತ್ ಹೇಳಿದ್ದಾರೆ.

ನಾನು ಕೆಲವೇ ತಿಂಗಳ ಹಿಂದೆ ಏನು ಮಾಡುತ್ತಿದ್ದೆನೋ ಅದಕ್ಕಿಂತ ಈಗ ಚೆನ್ನಾಗಿದ್ದೇನೆಂದು ಅನಿಸುತ್ತಿದೆ. ನಾನು ಈಗಲೂ 100 ಶೇಕಡ ಫಿಟ್ನೆಸ್ ಪಡೆಯುವತ್ತ ಸಾಗುತ್ತಿದ್ದೇನೆ. ಕೆಲವು ತಿಂಗಳುಗಳಲ್ಲಿ ಶೇ.100ರಷ್ಟು ಫಿಟ್ ಇರುವ ವಿಶ್ವಾಸದಲ್ಲಿದ್ದೇನೆ ಎಂದು ಪಂತ್ ಹೇಳಿದರು.

26ರ ಹರೆಯದ ಪಂತ್ ಸದ್ಯ ಹಲವು ರೀತಿಯ ಗಾಯಗಳಿಗಾಗಿ ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಪಂತ್ ಮಾರ್ಚ್ ನಲ್ಲಿ ಆರಂಭವಾಗುವ 2024ರ ಐಪಿಎಲ್ ಸಮಯಕ್ಕೆ ಸರಿಯಾಗಿ ಮರಳುವ ನಿರೀಕ್ಷೆಯಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News