ಸೋಲಿನಿಂದ ಕುಗ್ಗಿರುವ ಆರ್‌ಸಿಬಿಗೆ ಮತ್ತೆ ಆಘಾತ: ಐಪಿಎಲ್‌ನಿಂದ ಅನಿರ್ದಿಷ್ಟಾವಧಿಗೆ ವಿರಾಮ ಪಡೆದ ಮ್ಯಾಕ್ಸ್‌ವೆಲ್!
ಬೆಂಗಳೂರು: ಸದ್ಯ ನಡೆಯುತ್ತಿರುವ ಐಪಿಎಲ್ 2024 ಕ್ರೀಡಾಕೂಟದಿಂದ ಅನಿರ್ದಿಷ್ಟಾವಧಿ ವಿರಾಮ ತೆಗೆದುಕೊಳ್ಳಲು RCB ತಂಡದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ನಿರ್ಧರಿಸಿದ್ದಾರೆ.
ಸೋಮವಾರ ರಾತ್ರಿ ಸನ್ ರೈಸರ್ಸ್ ಹೈದರಾಬಾದ್ ತಂಡದೆದುರು RCB ತಂಡವು ಕಹಿ ಸೋಲು ಅನುಭವಿಸಿದ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ವಿಷಯವನ್ನು ಬಹಿರಂಗಪಡಿಸಿದರು. ಬ್ಯಾಟಿಂಗ್ ನಲ್ಲಿ ತಾನು ತೋರುತ್ತಿರುವ ಕಳಪೆ ನಿರ್ವಹಣೆಗೆ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಗ್ಲೆನ್ ಮ್ಯಾಕ್ಸ್ ವೆಲ್, ಸನ್ ರೈಸರ್ಸ್ ಹೈದರಾಬಾದ್ ತಂಡದ ಎದುರು ಆಡಿದ RCB ತಂಡದ ಭಾಗವಾಗಿರಲಿಲ್ಲ. ಅವರ ಬದಲಿಗೆ ಈ ಪಂದ್ಯದಲ್ಲಿ ವಿಲ್ ಜಾಕ್ಸ್ ಆಡಿದ್ದರು.
ಪಂದ್ಯ ಮುಕ್ತಾಯಗೊಂಡ ನಂತರ, ನಾನೇ RCB ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಅವರಿಗೆ ನನ್ನ ಬದಲು ಬೇರೆ ಆಟಗಾರನನ್ನು ಪ್ರಯತ್ನಿಸುವಂತೆ ಸೂಚಿಸಿದ್ದೆ ಎಂದು ಅವರು ಹೇಳಿದರು.
ಸದ್ಯ ನಾನು ಮಾನಸಿಕ ಹಾಗೂ ದೈಹಿಕವಾಗಿ ಸ್ವಸ್ಥನಾಗಿಲ್ಲ ಎಂದು ಹೇಳಿದ ಮ್ಯಾಕ್ಸ್ ವೆಲ್, ಸದ್ಯ ನಾನು ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದರು. ಎಷ್ಟು ಸಮಯದ ಕಾಲ ತಾನು ವಿರಾಮ ತೆಗೆದುಕೊಳ್ಳಲಿದ್ದೇನೆ ಎಂಬುದರ ಕುರಿತು ಆಸ್ಟ್ರೇಲಿಯಾದ ಆಲ್ ರೌಂಡರ್ ಆದ ಮ್ಯಾಕ್ಸ್ ವೆಲ್ ನಿರ್ದಿಷ್ಟವಾಗಿ ಏನನ್ನೂ ಹೇಳಲಿಲ್ಲ.