ಸಿಎಎಸ್ ಗೆ ಮೇಲ್ಮನವಿ: ಫೋಗಟ್ ಬೆಳ್ಳಿ ಪದಕದ ಆಸೆ ಜೀವಂತ

Update: 2024-08-08 04:26 GMT

PC: x.com/INCKerala

ಪ್ಯಾರೀಸ್: ದೇಹತೂಕ ಕಾಪಾಡಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಕೂಟದಿಂದ ಅನರ್ಹಗೊಂಡಿರುವ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಈ ನಿರ್ಧಾರದ ವಿರುದ್ಧ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ (ಸಿಎಎಸ್)ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅಗತ್ಯಕ್ಕಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ್ದ ಹಿನ್ನೆಲೆಯಲ್ಲಿ ಫೈನಲ್ ಸ್ಪರ್ಧೆಯಲ್ಲಿ ಆಡದಂತೆ ಅವರನ್ನು ಅನರ್ಹಗೊಳಿಸಲಾಗಿತ್ತು.

ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ ಮೊಟ್ಟಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಫೋಗಟ್ ಅವರ ಸಾಧನೆಯ ಮೇಲೆ ಅನರ್ಹತೆಯ ಕರಿನೆರಳು ಕವಿದಿತ್ತು. ಫೋಗಟ್ ಸಿಎಎಸ್ ಗೆ ಮೇಲ್ಮನವಿ ಸಲ್ಲಿಸಿ, ಚಿನ್ನದ ಪದಕಕ್ಕಾಗಿ ಸ್ಪರ್ಧಿಸಲು ಅವಕಾಶ ಕೋರಿದ್ದಾರೆ. ಇದಕ್ಕೆ ಅನುಮತಿ ನೀಡದಿದ್ದರೆ, ಜಂಟಿ ಬಳ್ಳಿಪದಕವನ್ನು ನೀಡುವಂತೆ ಕೋರಿದ್ದಾರೆ. ಗುರುವಾರ ಈ ಮೇಲ್ಮನವಿ ಬಗ್ಗೆ ಮಧ್ಯಂತರ ತೀರ್ಪು ನೀಡುವ ನಿರೀಕ್ಷೆ ಇದ್ದು, ಮೂಲ ನಿರ್ಧಾರವನ್ನು ಬದಲಿಸುವ ಸಾಧ್ಯತೆಯೂ ಇದೆ.

ಒಲಿಂಪಿಕ್ ಕೂಟದ ಕಟ್ಟುನಿಟ್ಟಿನ ಸಂರಚನೆ ಕಾರಣದಿಂದಾಗಿ ಚಿನ್ನದ ಪದಕಕ್ಕೆ ಸ್ಪರ್ಧಿಸುವ ಅವಕಾಶವನ್ನು ನೀಡುವ ಸಾಧ್ಯತೆ ಕಡಿಮೆ. ಏಕೆಂದರೆ ಚಿನ್ನದ ಪದಕಕ್ಕಾಗಿ ಇರುವ ಸ್ಪರ್ಧೆಯ ಮರು ವೇಳಾಪಟ್ಟಿ ಸಿದ್ಧಪಡಿಸುವುದು ಸವಾಲುದಾಯಕ. ಆದರೆ ಅಧಿಕೃತ ಪ್ರಸಾರಸಂಸ್ಥೆಯಾಗಿರುವ ಜಿಯೊಸಿನಿಮಾ ಪ್ರಕಾರ, ವಿನೇಶ್ ಜಂಟಿ ಬೆಳ್ಳಿಪದಕಕ್ಕಾಗಿ ಮನವಿ ಸಲ್ಲಿಸಿದ್ದಾರೆ.

ಸಿಎಎಸ್ ಎನ್ನುವುದು 1984ರಲ್ಲಿ ಸ್ಥಾಪಿತವಾದ ಸ್ವತಂತ್ರ ಸಂಸ್ಥೆಯಾಗಿದ್ದು, ಕ್ರೀಡಾಸಂಬಂಧಿ ವ್ಯಾಜ್ಯಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸುತ್ತದೆ. ಸ್ವಿಡ್ಜರ್ಲೆಂಡ್ ನ ಲೌಸನ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿಎಎಸ್, ನ್ಯೂಯಾರ್ಕ್ ಹಾಗೂ ಸಿಡ್ನಿಯಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಹೊಂದಿದ್ದು, ಒಲಿಂಪಿಕ್ ಆತಿಥ್ಯ ವಹಿಸುವ ದೇಶಗಳಲ್ಲಿ ತಾತ್ಕಾಲಿಕ ಕೋರ್ಟ್ ಗಳನ್ನು ಹೊಂದಿರುತ್ತದೆ.

ಇದಕ್ಕೂ ಮುನ್ನ ಭಾರತದ ಕುಸ್ತಿ ಫೆಡರೇಷನ್ ಕೂಡಾ ವಿನೇಶ್ ಅನರ್ಹತೆ ವಿರುದ್ಧ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ನಲ್ಲಿ ಮೇಲ್ಮನವಿ ಸಲ್ಲಿಸಿರುವುದಾಗಿ ಐಓಎ ಮುಖ್ಯಸ್ಥೆ ಪಿ.ಟಿ.ಉಷಾ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News