ಸತತ ಮೂರನೇ ಪ್ರಮುಖ ಪಂದ್ಯಾವಳಿ ಗೆಲ್ಲುವ ವಿಶ್ವಾಸದಲ್ಲಿ ಅರ್ಜೆಂಟೀನ
ಮಿಯಾಮಿ : ಕೊಪಾ ಅಮೆರಿಕ ಫುಟ್ಬಾಲ್ ಪಂದ್ಯಾವಳಿಯಲ್ಲಿ ರವಿವಾರ ನಡೆಯಲಿರುವ ಫೈನಲ್ನಲ್ಲಿ ಬಲಿಷ್ಠ ಕೊಲಂಬಿಯಾ ತಂಡದ ಸವಾಲನ್ನು ಎದುರಿಸಲಿರುವ ಅರ್ಜೆಂಟೀನ ತಂಡ ಸತತ ಮೂರನೇ ಪ್ರಮುಖ ಪಂದ್ಯಾವಳಿಯಲ್ಲಿ ಜಯಶಾಲಿಯಾಗಿ ದಕ್ಷಿಣ ಅಮೆರಿಕ ಫುಟ್ಬಾಲ್ನಲ್ಲಿ ಅಭೂತಪೂರ್ವ ಸಾಧನೆ ಮಾಡುವ ಅದಮ್ಯ ವಿಶ್ವಾಸದಲ್ಲಿದೆ.
ಫುಟ್ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ ನೇತೃತ್ವದಲ್ಲಿ ಅರ್ಜೆಂಟೀನ ತಂಡ 2021ರಲ್ಲಿ ಕೊಪಾ ಅಮೆರಿಕ ಟ್ರೋಫಿ ಜಯಿಸಿತ್ತು. 2022ರಲ್ಲಿ ಖತರ್ನಲ್ಲಿ ಫಿಫಾ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಇದೀಗ ವಾರಾಂತ್ಯದಲ್ಲಿ ಕೊಲಂಬಿಯಾ ವಿರುದ್ಧ ಫೈನಲ್ ಪಂದ್ಯಕ್ಕೆ ಸಜ್ಜಾಗಿದೆ.
ಫೈನಲ್ನಲ್ಲಿ ಜಯಶಾಲಿಯಾದರೆ ಅರ್ಜೆಂಟೀನ ತಂಡವು ಅಂತರ್ರಾಷ್ಟ್ರೀಯ ಫುಟ್ಬಾಲ್ ಇತಿಹಾಸದಲ್ಲಿ ಎರಡು ಕೊಪಾ ಅಮೆರಿಕ ಪ್ರಶಸ್ತಿಗಳ ನಡುವೆ ವಿಶ್ವಕಪ್ ಗೆದ್ದ ಎರಡನೇ ತಂಡ ಎನಿಸಿಕೊಳ್ಳಲಿದೆ. ಸ್ಪೇನ್ ತಂಡ 2008(ಯುರೋ ಕಪ್), 2010(ವಿಶ್ವಕಪ್) ಹಾಗೂ 2012ರಲ್ಲಿ (ಯುರೋ ಕಪ್) ಈ ಸಾಧನೆ ಮಾಡಿತ್ತು.
ಅರ್ಜೆಂಟೀನ ತಂಡ ಕೊಲಂಬಿಯಾವನ್ನು ಸೋಲಿಸಿದರೆ 16ನೇ ಬಾರಿ ಕೊಪಾ ಅಮೆರಿಕ ಟ್ರೋಫಿಯನ್ನು ಎತ್ತಿ ಹಿಡಿಯಲಿದೆ. ಈ ಮೂಲಕ ಉರುಗ್ವೆ(15)ದಾಖಲೆಯನ್ನು ಮುರಿಯಲಿದೆ.
ಸತತ 28 ಪಂದ್ಯಗಳಲ್ಲಿ ಸೋಲನ್ನೇ ಕಾಣದೆ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಕೊಲಂಬಿಯಾ ತಂಡ ಮಿಯಾಮಿಯ ಹಾರ್ಡ್ ರಾಕ್ ಸ್ಟೇಡಿಯಮ್ನಲ್ಲಿ ಹೈವೋಲ್ಟೇಜ್ ಪಂದ್ಯವನ್ನಾಡಲು ಸಿದ್ಧತೆ ನಡೆಸಿದೆ. ಕೊಲಂಬಿಯಾ ಫೈನಲ್ ಹಾದಿಯಲ್ಲಿ ಸಾಕಷ್ಟು ಸವಾಲನ್ನು ಎದುರಿಸಿದ್ದು, ಸೆಮಿ ಫೈನಲ್ನಲ್ಲಿ ದ್ವಿತೀಯಾರ್ಧದುದ್ದಕ್ಕೂ 10 ಆಟಗಾರರಿದ್ದರೂ ಉರುಗ್ವೆ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿತ್ತು.
ಕೊಲಂಬಿಯಾ 2022ರಲ್ಲಿ ಅರ್ಜೆಂಟೀನ ವಿರುದ್ಧ ಕೊನೆಯ ಬಾರಿ ಪಂದ್ಯ ಆಡಿತ್ತು. ಆಗ ಅದು ಲೌಟಾರೊ ಮಾರ್ಟಿನೆಝ್ ಅವರ ಗೋಲಿನಿಂದಾಗಿ ಕಡಿಮೆ ಅಂತರದಿಂದ ಸೋತಿತ್ತು. ಮಾರ್ಟಿನೆಝ್ ಪ್ರಸಕ್ತ ಕೊಪಾ ಅಮೆರಿಕ ಟೂರ್ನಿಯಲ್ಲಿ 4 ಗೋಲು ಗಳಿಸಿದ್ದಾರೆ.
2021ರ ಕೊಪಾ ಅಮೆರಿಕ ಸೆಮಿ ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ಹಾಗೂ ಅರ್ಜೆಂಟೀನ ತಂಡಗಳು ಸೆಣಸಾಡಿದ್ದವು. ಆಗ ಪಂದ್ಯವು ನಿಗದಿತ ಸಮಯದಲ್ಲಿ 1-1ರಿಂದ ಡ್ರಾನಲ್ಲಿ ಕೊನೆಗೊಂಡಿತ್ತು.
ಎರಡು ಬಲಿಷ್ಠ ತಂಡಗಳು ಮಿಯಾಮಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಅರ್ಜೆಂಟೀನ ಹಾಗೂ ಕೊಲಂಬಿಯಾ ಬೆಂಬಲಿಗರ ಸಮ್ಮುಖದಲ್ಲಿ ಪ್ರಶಸ್ತಿಗಾಗಿ ಜಿದ್ದಾಜಿದ್ದಿ ಹೋರಾಟ ನಡೆಸುವ ನಿರೀಕ್ಷೆ ಇದೆ.
ತೀವ್ರ ಪೈಪೋಟಿಯನ್ನು ನಿರೀಕ್ಷಿಸಲಾಗುತ್ತಿರುವ ಈ ಪಂದ್ಯದಲ್ಲಿ ವಿಶ್ವದ ನಂ.1 ರ್ಯಾಂಕಿನ ಅರ್ಜೆಂಟೀನ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಂಡುಬಂದಿದೆ.
ಬ್ರೆಝಿಲ್ನಲ್ಲಿ 2014ರ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನದಿಂದ ಜಗತ್ತನ್ನು ಸೂರೆಗೈದಿರುವ ಜೇಮ್ಸ್ ರೊಡ್ರಿಗಝ್ ತನ್ನ 34ರ ವಯಸ್ಸಿನಲ್ಲಿ ಕೊಲಂಬಿಯಾದ ಪರ ಶ್ರೇಷ್ಠ ಫುಟ್ಬಾಲ್ ಆಡುವ ಭರವಸೆ ಮೂಡಿಸಿದ್ದಾರೆ. ಸರಣಿಶ್ರೇಷ್ಠ ಪ್ರಶಸ್ತಿ ಗಿಟ್ಟಿಸುವ ರೇಸ್ನಲ್ಲಿದ್ದಾರೆ.
ಕೊಲಂಬಿಯಾ ತಂಡವು 2001ರಲ್ಲಿ ಏಕೈಕ ಕೊಪಾ ಅಮೆರಿಕ ಟ್ರೋಫಿ ಜಯಿಸಿತ್ತು.
ಅರ್ಜೆಂಟೀನ ತಂಡಕ್ಕೆ ರವಿವಾರದ ಪಂದ್ಯದಲ್ಲಿ ಭಾವನಾತ್ಮಕ ಅಂಶವಿದೆ. 36ರ ಹರೆಯದ ಏಂಜೆಲ್ ಡಿ ಮಾರಿಯಾ ತನ್ನ ರಾಷ್ಟ್ರೀಯ ತಂಡದ ಪರ ವಿದಾಯದ ಪಂದ್ಯವನ್ನಾಡಲಿದ್ದಾರೆ. ನಿಕೊಲಸ್ ಒಟಾಮೆಂಡಿ ಕೂಡ ನಿವೃತ್ತಿಯಾಗುವ ನಿರೀಕ್ಷೆ ಇದೆ. ಸ್ಟಾರ್ ಫುಟ್ಬಾಲ್ ಆಟಗಾರ ಮೆಸ್ಸಿ ಪಾಲಿಗೆ ಇದು ಕೊನೆಯ ಪಂದ್ಯಾವಳಿಯೇ ಎನ್ನುವುದು ಸ್ಪಷ್ಟವಾಗಿಲ್ಲ. 2026ರ ವಿಶ್ವಕಪ್ ವೇಳೆಗೆ ಮೆಸ್ಸಿಗೆ 39 ವರ್ಷವಾಗಿರುತ್ತದೆ.
ಪಂದ್ಯದ ಸಮಯ: ಜು.15,ಸೋಮವಾರ, ಬೆಳಗ್ಗೆ 5:30.
(ಭಾರತೀಯ ಕಾಲಮಾನ)