ದಾಖಲೆಯ 16ನೇ ಬಾರಿ ಕೋಪಾ-ಅಮೆರಿಕ ಪ್ರಶಸ್ತಿ ಗೆದ್ದ ಅರ್ಜೆಂಟೀನ
ಮಿಯಾಮಿ ಗಾರ್ಡನ್ಸ್ (ಅಮೆರಿಕ): ಫೈನಲ್ ಪಂದ್ಯದ ಉತ್ತರಾರ್ಧದಲ್ಲಿ ಲಿಯೊನೆಲ್ ಮೆಸ್ಸಿ ಗಾಯಗೊಂಡರೂ ಎದೆಗುಂದದ ಅರ್ಜೆಂಟೀನ ತಂಡ, ಲಾಟರೊ ಮಾರ್ಟಿನೆಝ್ 112ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಕೊಲಂಬಿಯಾ ತಂಡವನ್ನು 1-0 ಅಂತರದಲ್ಲಿ ಮಣಿಸುವ ಮೂಲಕ ಸತತ ಎರಡನೆ ಅವಧಿಗೆ ಕೋಪಾ-ಅಮೆರಿಕ ಟ್ರೋಫಿಗೆ ಮುತ್ತಿಟ್ಟಿತು.
ಪಂದ್ಯದ 64ನೇ ನಿಮಿಷದಲ್ಲಿ ಗಾಯಕ್ಕೊಳಗಾದ ಲಿಯೊನೆಲ್ ಮೆಸ್ಸಿ, ಮೈದಾನದಿಂದ ಹೊರ ನಡೆದರು. ಈ ಸಂದರ್ಭದಲ್ಲಿ ತಂಡದ ಹೊಣೆಯನ್ನು ಹೆಗಲಿಗೇರಿಸಿಕೊಂಡ ಲಾಟರೊ ಮಾರ್ಟಿನೆಝ್, ಪಂದ್ಯದ 112ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಅರ್ಜೆಂಟೀನಾ ತಂಡವು ದಾಖಲೆಯ 16ನೇ ಬಾರಿ ಕೋಪಾ-ಅಮೆರಿಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.
ಹಾರ್ಡ್ ರಾಕ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಜನಜಂಗುಳಿಯಿಂದಾಗಿ ಒಂದು ಗಂಟೆ, 20 ನಿಮಿಷ ತಡವಾಗಿ ಪ್ರಾರಂಭಗೊಂಡ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು ಸತತ ಮೂರನೆ ಪ್ರಮುಖ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಫೆಬ್ರವರಿ 2022ರಲ್ಲಿ ಅಲ್ಬಿಸೆಲೆಸ್ಟೆ ತಂಡದ ವಿರುದ್ಧ ಪರಾಭವಗೊಂಡ ನಂತರ, ಇದುವರೆಗೂ 28 ಪಂದ್ಯಗಳಲ್ಲಿ ಅಜೇಯವಾಗುಳಿದಿದ್ದ ಕೊಲಂಬಿಯಾ ತಂಡವನ್ನು ಮಣಿಸುವ ಮೂಲಕ ಅದರ ಅಜೇಯ ಓಟಕ್ಕೆ ಅರ್ಜೆಂಟೀನಾ ತಂಡ ಮೂಗುದಾರ ಹಾಕಿತು.