ಒಂದೇ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಅವರ ಎರಡು ದಾಖಲೆ ಮುರಿದ ಅಶ್ವಿನ್
ರಾಂಚಿ: ಸತತ ಎರಡು ಎಸೆತಗಳಲ್ಲಿ 2 ವಿಕೆಟ್ ಸಹಿತ ಐದು ವಿಕೆಟ್ ಗೊಂಚಲು ಕಬಳಿಸಿದ ಭಾರತದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸ್ಪಿನ್ ಲೆಜೆಂಡ್ ಅನಿಲ್ ಕುಂಬ್ಳೆ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ 3ನೇ ದಿನವಾದ ರವಿವಾರ ಅಶ್ವಿನ್ ಈ ಸಾಧನೆ ಮಾಡಿದರು. ಇಂದಿನ ಪಂದ್ಯಕ್ಕಿಂತ ಮೊದಲು ಭಾರತದಲ್ಲಿ ಆಡಿರುವ ಟೆಸ್ಟ್ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ದಾಖಲೆಯು ಕುಂಬ್ಳೆ ಹೆಸರಲ್ಲಿತ್ತು. ಇದೀಗ ಅಶ್ವಿನ್ ಈ ದಾಖಲೆ ತನ್ನದಾಗಿಸಿಕೊಂಡಿದ್ದಾರೆ.
ಕುಂಬ್ಳೆ ಭಾರತದಲ್ಲಿ ಆಡಿರುವ 63 ಪಂದ್ಯಗಳಲ್ಲಿ 350 ವಿಕೆಟ್‌ಗಳನ್ನು ಕಬಳಿಸಿದ್ದರು. ಅಶ್ವಿನ್ 59 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 352 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಬೆನ್ ಡಕೆಟ್(15 ರನ್)ಹಾಗೂ ಒಲಿ ಪೋಪ್(0)ವಿಕೆಟ್‌ಗಳನ್ನು ಸತತ ಎಸೆತಗಳಲ್ಲಿ ಉರುಳಿಸಿದ ಅಶ್ವಿನ್ ಅವರು ಕರ್ನಾಟಕದ ಸ್ಪಿನ್ ದಂತಕತೆ ಕುಂಬ್ಳೆ ಅವರ ದಾಖಲೆ (350 ವಿಕೆಟ್)ಮುರಿದರು.
15.5 ಓವರ್‌ಗಳಲ್ಲಿ 51 ರನ್‌ಗೆ ಐದು ವಿಕೆಟ್ ಗೊಂಚಲು ಪಡೆದಿರುವ ಅಶ್ವಿನ್ ಇಂಗ್ಲೆಂಡ್ ತಂಡ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 145 ರನ್‌ಗೆ ಆಲೌಟಾಗುವಲ್ಲಿ ಮುಖ್ಯ ಪಾತ್ರವಹಿಸಿದರು. ಅಶ್ವಿನ್‌ಗೆ ಇನ್ನೋರ್ವ ಸ್ಪಿನ್ನರ್ ಕುಲದೀಪ್ ಯಾದವ್(4-22)ಉತ್ತಮ ಸಾಥ್ ನೀಡಿದರು.
ಸ್ವದೇಶದಲ್ಲಿ ಐದು ವಿಕೆಟ್ ಗೊಂಚಲು ಪಡೆಯುವ ವಿಚಾರದಲ್ಲೂ ಲೆಗ್ ಸ್ಪಿನ್ನರ್ ಕುಂಬ್ಳೆ ಅವರ ದಾಖಲೆಯನ್ನೂ ಚೆನ್ನೈ ಸ್ಪಿನ್ನರ್ ಮುರಿದರು. ಅಶ್ವಿನ್ 26ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದರೆ, ಕುಂಬ್ಳೆ 25 ಬಾರಿ ಈ ಸಾಧನೆ ಮಾಡಿದ್ದರು. ಕುಂಬ್ಳೆ 7 ಬಾರಿ 10 ವಿಕೆಟ್ ಗೊಂಚಲು ಪಡೆದಿದ್ದರೆ, ಅಶ್ವಿನ್ ಆರು ಬಾರಿ ಈ ಸಾಧನೆ ಮಾಡಿದ್ದರು.
ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಅವರು 100 ವಿಕೆಟ್‌ಗಳನ್ನು ಕಬಳಿಸಿದ ಭಾರತದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದರು.
ಭಾರತದಲ್ಲಿ ಆಡಿರುವ ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತೀಯ ಬೌಲರ್‌ಗಳು:
ಆರ್.ಅಶ್ವಿನ್-352
ಅನಿಲ್ ಕುಂಬ್ಳೆ-350
ಹರ್ಭಜನ್ ಸಿಂಗ್-265
ಕಪಿಲ್‌ದೇವ್-219
ರವೀಂದ್ರ ಜಡೇಜ-210.