ಏಶ್ಯಕಪ್: ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶಕ್ಕೆ ಜಯ; ಸೂಪರ್-4 ಆಸೆ ಜೀವಂತ
ಲಾಹೋರ್, ಸೆ.3: ಮೆಹಿದಿ ಹಸನ್(112 ರನ್, 119) ಹಾಗೂ ನಜ್ಮುಲ್ ಹುಸೇನ್(104 ರನ್, 105 ಎಸೆತ) ಆಕರ್ಷಕ ಶತಕದ ಕೊಡುಗೆ, ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಬಾಂಗ್ಲಾದೇಶ ಕ್ರಿಕೆಟ್ ತಂಡ ರವಿವಾರ ನಡೆದ ಏಶ್ಯಕಪ್‌ನ ಗ್ರೂಪ್ ಬಿ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 89 ರನ್ ಅಂತರದಿಂದ ಮಣಿಸಿದೆ.
ಶ್ರೀಲಂಕಾ ವಿರುದ್ಧ ಮೊದಲ ಪಂದ್ಯವನ್ನು ಸೋತಿರುವ ಬಾಂಗ್ಲಾದೇಶ ಈ ಗೆಲುವಿನ ಮೂಲಕ ರನ್ ರೇಟ್ ಹೆಚ್ಚಿಸಿಕೊಂಡಿದ್ದು ಟೂರ್ನಿಯ ಸೂಪರ್-4 ಹಂತಕ್ಕೆ ತಲುಪುವ ಆಸೆಯನ್ನು ಜೀವಂತವಾಗಿಸಿಕೊಂಡಿದೆ.
ಗೆಲ್ಲಲು 335 ರನ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 44.3 ಓವರ್‌ಗಳಲ್ಲಿ 245 ರನ್ ಗಳಿಸಿ ಆಲೌಟಾಗಿದೆ. ಅಫ್ಘಾನ್ ಪರ ಆರಂಭಿಕ ಬ್ಯಾಟರ್ ಇಬ್ರಾಹೀಂ ಝದ್ರಾನ್(75 ರನ್, 74 ಎಸೆತ) ಹಾಗೂ ನಾಯಕ ಹಶ್ಮತುಲ್ಲಾ ಶಾಹಿದಿ (51 ರನ್, 60 ಎಸೆತ)ಅರ್ಧಶತಕ ಗಳಿಸಿದರೂ ಗೆಲುವಿಗೆ ಇದು ಸಾಕಾಗಲಿಲ್ಲ. ರಹಮತ್ ಶಾ 33 ರನ್ ಗಳಿಸಿದರು.
ಬಾಂಗ್ಲಾದೇಶದ ಬೌಲಿಂಗ್ ವಿಭಾಗದಲ್ಲಿ ತಸ್ಕಿನ್ ಅಹ್ಮದ್(4-44) ಹಾಗೂ ಶರಿಫುಲ್ ಇಸ್ಲಾಮ್(3-36) ಏಳು ವಿಕೆಟ್‌ಗಳನ್ನು ಹಂಚಿಕೊಂಡರು.
ಇದಕ್ಕೂ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ ಮೆಹಿದಿ ಹಸನ್(112 ರನ್, 119 ಎಸೆತ, 7 ಬೌಂಡರಿ, 3 ಸಿಕ್ಸರ್) ಹಾಗೂ ನಜ್ಮುಲ್ ಹುಸೇನ್(104 ರನ್, 105 ಎಸೆತ, 9 ಬೌಂಡರಿ, 2 ಸಿಕ್ಸರ್)ಶತಕದ ಕೊಡುಗೆಯ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 334 ರನ್ ಗಳಿಸಿತು.
63 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶದ ಆರಂಭ ಆಶಾದಾಯಕವಾಗಿರಲಿಲ್ಲ. ಆಗ 3ನೇ ವಿಕೆಟ್‌ಗೆ 194 ರನ್ ಜೊತೆಯಾಟ ನಡೆಸಿದ ನಜ್ಮುಲ್ ಹುಸೇನ್ ಹಾಗೂ ಮೆಹಿದಿ ಹಸನ್ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.