ನಾಳೆ ಶ್ರೀಲಂಕಾ ವಿರುದ್ಧ ಏಶ್ಯಕಪ್ ಫೈನಲ್: ಐದು ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವ ವಿಶ್ವಾಸದಲ್ಲಿ ಭಾರತ
ಕೊಲಂಬೊ : ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ರವಿವಾರ ಏಶ್ಯಕಪ್ ಫೈನಲ್ ಪಂದ್ಯವನ್ನು ಆಡಲಿದ್ದು, ಆತಿಥೇಯ ಶ್ರೀಲಂಕಾವನ್ನು ಎದುರಿಸಲಿದೆ. ಭಾರತವು ಆರು ತಂಡಗಳು ಭಾಗವಹಿಸಿರುವ ಟೂರ್ನಿಯಲ್ಲಿ ಐದು ವರ್ಷಗಳ ಬಳಿಕ 8ನೇ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.
ಬಾಂಗ್ಲಾದೇಶ ವಿರುದ್ಧದ ಸೂಪರ್-4 ಪಂದ್ಯದ ವೇಳೆ ಆಲ್ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿರುವುದು ಭಾರತೀಯ ತಂಡಕ್ಕೆ ಕಳವಳವುಂಟು ಮಾಡಿದೆ. ಬಲಮಂಡಿರಜ್ಜು ಗಾಯದಿಂದ ಪ್ರಮುಖ ಸ್ಪಿನ್ನರ್ ಮಹೀಶ್ ತೀಕ್ಣಣ ಫೈನಲ್ ಪಂದ್ಯದಿಂದ ಹೊರಗುಳಿದಿರುವುದು ಶ್ರೀಲಂಕಾಕ್ಕೆ ಭಾರೀ ಹಿನ್ನಡೆ ತಂದಿದೆ. ಮಹೀಶ್ ಬದಲಿಗೆ ಲೆಗ್ ಸ್ಪಿನ್ನರ್ ದುಶಾನ್ ಹೇಮಂತ ಆಡಬಹುದು.
ಏಕದಿನ ರ್ಯಾಂಕಿಂಗ್ ನಲ್ಲಿ 8ನೇ ಸ್ಥಾನದಲ್ಲಿರುವ ಶ್ರೀಲಂಕಾ ಏಕದಿನ ವಿಶ್ವಕಪ್ ಗೆ ಕ್ವಾಲಿಫೈಯರ್ ಮೂಲಕ ಅರ್ಹತೆ ಪಡೆದಿತ್ತು. ಕಳೆದ ವಾರ ನಡೆದ ಏಶ್ಯಕಪ್ ಸೂಪರ್-4 ಪಂದ್ಯದಲ್ಲಿ ಭಾರತವನ್ನು 213 ರನ್ ಗೆ ನಿಯಂತ್ರಿಸಿದ್ದ ಲಂಕಾ ಗೆಲುವಿನ ಹೊಸ್ತಿಲಲ್ಲಿ ಎಡವಿತ್ತು. ಭಾರತದ ವಿರುದ್ಧ ಎಲ್ಲ 10 ವಿಕೆಟ್ಗಳು ಸ್ಪಿನ್ನರ್ ಗಳ ಪಾಲಾಗಿದ್ದವು. ರನ್ ಚೇಸಿಂಗ್ ವೇಳೆ ಲಂಕೆಯ ಅಗ್ರ ಸರದಿ ವೈಫಲ್ಯ ಕಂಡ ಕಾರಣ ತಂಡ ಸೋಲುಂಡಿದೆ.
ಭಾರತವು ಕಳೆದ ಐದು ವರ್ಷಗಳಿಂದ ಪ್ರಮುಖ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ರವಿವಾರ ಐದು ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಳ್ಳಲು ರೋಹಿತ್ ಬಳಗಕ್ಕೆ ಅಮೋಘ ಅವಕಾಶ ಲಭಿಸಿದೆ. ಬಾಂಗ್ಲಾ ವಿರುದ್ಧ ಅಂತಿಮ 4 ಪಂದ್ಯವನ್ನು ಸೋತಿರುವ ಭಾರತ ಫೈನಲ್ ಗೆ ಮೊದಲು ಹಿನ್ನಡೆ ಅನುಭವಿಸಿದೆ. ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಸಹಿತ ಐವರು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿತ್ತು.
ವಿಶ್ವಕಪ್ ಗಿಂತ ಮೊದಲು ಏಶ್ಯಕಪ್ ಗೆಲುವು ತಂಡದ ನೈತಿಕ ಬಲವನ್ನು ಹೆಚ್ಚಿಸಲಿದೆ. ಭಾರತವು 2018ರಲ್ಲಿ ಕೊನೆಯ ಬಾರಿ ಏಶ್ಯಕಪ್ ಜಯಿಸಿತ್ತು. ಆಗ ರೋಹಿತ್ ಬಳಗವು ದುಬೈನಲ್ಲಿ ನಡೆದಿದ್ದ ಏಶ್ಯಕಪ್ ಫೈನಲ್ ನಲ್ಲಿ ಬಾಂಗ್ಲಾದೇಶವನ್ನು 3 ವಿಕೆಟುಗಳಿಂದ ಮಣಿಸಿ ಪ್ರಶಸ್ತಿ ಜಯಿಸಿತ್ತು. ಆ ನಂತರ ಭಾರತವು ನಿರ್ಣಾಯಕ ಪಂದ್ಯಗಳು ಹಾಗೂ ಟೂರ್ನಿಗಳಲ್ಲಿ ಎಡವುತ್ತಾ ಬಂದಿದೆ.
ಭಾರತವು 2019ರಲ್ಲಿ 50 ಓವರ್ಗಳ ವಿಶ್ವಕಪ್ ಹಾಗೂ 2022ರಲ್ಲಿ ಟಿ-20 ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಗೆ ತಲುಪಿತ್ತು. ಆದರೆ ಫೈನಲ್ ತಲುಪಿರಲಿಲ್ಲ. 2019ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಹಾಗೂ 2023ರಲ್ಲಿ ಆಸ್ಟ್ರೇಲಿಯ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನು ಸೋತಿತ್ತು.
ಭಾರತವು ಕಳೆದ ವರ್ಷ ಟಿ-20 ಮಾದರಿಯಲ್ಲಿ ನಡೆದಿದ್ದ ಏಶ್ಯಕಪ್ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರಲಿಲ್ಲ. ಆಗ ಶ್ರೀಲಂಕಾ ಚಾಂಪಿಯನ್ ಆಗಿತ್ತು.
ಫೈನಲ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಪುನರಾಗಮನವು ಭಾರತದ ಬ್ಯಾಟಿಂಗ್ ಸರದಿಯನ್ನು ಬಲಿಷ್ಠಗೊಳಿಸಲಿದೆ. ಈ ಇಬ್ಬರ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶ ವಿರುದ್ಧ ಸೂಪರ್-4 ಪಂದ್ಯವನ್ನು ಆಡಿದ್ದ ಭಾರತವು ಸ್ಪಿನ್ನರ್ ಗಳ ಎದುರು ಪರದಾಡಿತ್ತು. ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ಶತಕವನ್ನು ಸಿಡಿಸಿದ್ದರೂ ಭಾರತವು 6 ರನ್ನಿಂದ ಸೋಲುವಂತಾಯಿತು.
ಆರಂಭಿಕ ಮೇಲುಗೈ ಸಾಧಿಸಿದ್ದರೂ ಆ ನಂತರ ರನ್ ನೀಡುತ್ತಿರುವ ತಂಡದ ದೌರ್ಬಲ್ಯವು ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಬಹಿರಂಗವಾಗಿತ್ತು. ಬಾಂಗ್ಲಾವು ಒಂದು ಹಂತದಲ್ಲಿ 59 ರನ್ ಗೆ 4 ವಿಕೆಟ್ ಕಳೆದುಕೊಂಡಿತ್ತು. ಆ ನಂತರದ ಓವರ್ ಗಳಲ್ಲಿ ಭಾರತವು ಸಾಕಷ್ಟು ರನ್ ಬಿಟ್ಟುಕೊಟ್ಟಿದ್ದು ಬಾಂಗ್ಲಾವು 265 ರನ್ ಗಳಿಸುವಲ್ಲಿ ಶಕ್ತವಾಗಿತ್ತು.
ವೇಗದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್ ಹಾಗೂ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಫೈನಲ್ ಪಂದ್ಯಕ್ಕೆ ಲಭ್ಯವಿರಲಿದ್ದು, ಭಾರತವು ಬಾಂಗ್ಲಾ ವಿರುದ್ಧ ಪಂದ್ಯದಲ್ಲಿನ ತಪ್ಪನ್ನು ಸರಿಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಅಕ್ಷರ್ ಗಾಯದ ಸ್ಥಿತಿಗತಿಯನ್ನು ಟೀಮ್ ಮ್ಯಾನೇಜ್ಮೆಂಟ್ ಎಚ್ಚರಿಕೆಯಿಂದ ಗಮನಿಸುತ್ತಿದೆ. ಆಫ್ ಸ್ಪಿನ್ನರ್ ವಾಶಿಂಗ್ಟನ್ ಸುಂದರ್ ಅವರನ್ನು ಅಕ್ಷರ್ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅಕ್ಷರ್ ಅಲಭ್ಯರಾದರೆ 8ನೇ ಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್ ಹಾಗೂ ಸುಂದರ್ ನಡುವೆ ಸ್ಪರ್ಧೆ ಏರ್ಪಡಲಿದೆ. ಠಾಕೂರ್ 8ನೇ ಕ್ರಮಾಂಕದಲ್ಲಿ ಆಡಿದರೆ ತಿಲಕ್ ವರ್ಮಾ 3ನೇ ಸ್ಪಿನ್ ಬೌಲರ್ ಆಗಿ ಆಯ್ಕೆಯಾಗಬಹುದು.
ಭಾರತವು ವಿಶ್ವಕಪ್ ಟೂರ್ನಿಗಿಂತ ಮೊದಲು ಏಶ್ಯಕಪ್ ಫೈನಲ್ ಹಾಗೂ ಆಸ್ಟ್ರೇಲಿಯ ವಿರುದ್ಧ 3 ಪಂದ್ಯಗಳು ಸೇರಿದಂತೆ ಒಟ್ಟು 4 ಏಕದಿನ ಪಂದ್ಯಗಳನ್ನು ಆಡಲಿದೆ. ಏಶ್ಯಕಪ್ ಗೆಲುವು ಸ್ವದೇಶದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗಿಂತ ಮೊದಲು ತಂಡಕ್ಕೆ ಹೊಸ ಉತ್ಸಾಹ ನೀಡಲಿದೆ. ಭಾರತವು ಮುಂಬರುವ ವಿಶ್ವಕಪ್ ಜಯಿಸಿ 10 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಳ್ಳುವ ಆಶಯದಲ್ಲಿದೆ.
ಇದೇ ವೇಳೆ ಶ್ರೀಲಂಕಾ ತಂಡ ಭಾರತ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಏಶ್ಯಕಪ್ ತನ್ನಲ್ಲೇ ಉಳಿಸಿಕೊಳ್ಳಲು ಎದುರು ನೋಡುತ್ತಿದೆ. ಸ್ವದೇಶದಲ್ಲಿ 15 ಏಕದಿನ ಪಂದ್ಯಗಳಲ್ಲಿ ಜಯ ಸಾಧಿಸಿ ಉತ್ತಮ ಲಯದಲ್ಲಿದೆ.
ಕುಶಾಲ್ ಮೆಂಡಿಸ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 5 ಪಂದ್ಯಗಳಲ್ಲಿ ಒಟ್ಟು 253 ರನ್ ಗಳಿಸಿದ್ದು ಸರಣಿಯಲ್ಲಿ 2ನೇ ಗರಿಷ್ಠ ಸ್ಕೋರ್ ಕಲೆ ಹಾಕಿದ್ದಾರೆ. ಪಾಕಿಸ್ತಾನ(91 ರನ್), ಬಾಂಗ್ಲಾದೇಶ(50 ರನ್) ಹಾಗೂ ಅಫ್ಘಾನಿಸ್ತಾನ(92 ರನ್)ವಿರುದ್ಧ ಮೆಂಡಿಸ್ ಅರ್ಧ ಶತಕ ಸಿಡಿಸಿದ್ದು ಈ ಮೂರು ಪಂದ್ಯಗಳನ್ನು ಲಂಕಾ ಜಯಿಸಿದೆ.
ಶ್ರೀಲಂಕಾ ಏಕದಿನ ಹಾಗೂ ಟಿ-20 ಮಾದರಿಯ ಏಶ್ಯಕಪ್ ನಲ್ಲಿ ಈ ತನಕ 12 ಬಾರಿ ಫೈನಲಿಗೆ ತಲುಪಿದ ಸಾಧನೆ ಮಾಡಿದೆ. ಭಾರತವು 10 ಬಾರಿ ಈ ಸಾಧನೆ ಮಾಡಿದರೆ, ಪಾಕ್ ಹಾಗೂ ಬಾಂಗ್ಲಾದೇಶ ತಂಡಗಳು ಕ್ರಮವಾಗಿ 5 ಹಾಗೂ 3 ಬಾರಿ ಈ ಸಾಧನೆ ಮಾಡಿದ್ದವು. ಶ್ರೀಲಂಕಾ ಒಟ್ಟು 5 ಬಾರಿ ಏಶ್ಯಕಪ್ ಗೆದ್ದುಕೊಂಡಿದೆ.
ಭಾರತ 1984, 1988, 1991, 1995, 2010, 2016,2018ರಲ್ಲಿ ಒಟ್ಟು 7 ಬಾರಿ ಪ್ರಶಸ್ತಿ ಜಯಿಸಿ ಯಶಸ್ವಿ ತಂಡ ಎನಿಸಿಕೊಂಡಿದೆ. ಶ್ರೀಲಂಕಾವು 1986, 1997, 2004, 2008, 2014, 2022ರಲ್ಲಿ ಒಟ್ಟು 6 ಬಾರಿ ಏಶ್ಯಕಪ್ ಜಯಿಸಿದೆ.
ಫೈನಲ್ ಪಂದ್ಯಕ್ಕೆ ಮಳೆ ಭೀತಿ
ರವಿವಾರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರವಿವಾರದ ಪಂದ್ಯ ಮೊಟಕುಗೊಳ್ಳಬಹುದು ಇಲ್ಲವೇ ಮಳೆಗಾಹುತಿಯಾಗಬಹುದು. ಫಲಿತಾಂಶ ನಿರ್ಧರಿಸಲು ಸೋಮವಾರ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ.
ಪಂದ್ಯದ ಸಮಯ: ಮಧ್ಯಾಹ್ನ 3:00
► ಪಿಚ್ ಸ್ಥಿತಿಗತಿ
ಪ್ರೇಮದಾಸ ಸ್ಟೇಡಿಯಮ್ನಲ್ಲಿ 9 ದಿನಗಳಲ್ಲಿ ಆರನೇ ಪಂದ್ಯ ನಡೆಯಲಿದೆ. ಪಿಚ್ ಮಂದಗತಿಯಲ್ಲಿದ್ದು ತಿರುವು ನೀಡಲಿದೆ.
► ಅಂಕಿ-ಅಂಶ
- ಒಂದು ವೇಳೆ ಶ್ರೀಲಂಕಾ ಏಶ್ಯಕಪ್ ಜಯಿಸಿದರೆ ಹೆಚ್ಚು ಏಶ್ಯಕಪ್ ಪ್ರಶಸ್ತಿ (7ಬಾರಿ) ಜಯಿಸಿರುವ ಭಾರತದ ದಾಖಲೆ ಸರಿಗಟ್ಟಲಿದೆ.
- ಕೊಲಂಬೊದಲ್ಲಿ 2023ರ ಏಶ್ಯಕಪ್ ನಲ್ಲಿ 6 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡವು ಐದು ಬಾರಿ ಜಯಿಸಿದೆ.
► ತಂಡಗಳು
ಭಾರತ (ಸಂಭಾವ್ಯರು): 1. ರೋಹಿತ್ ಶರ್ಮಾ(ನಾಯಕ), 2. ಶುಭಮನ್ ಗಿಲ್, 3. ವಿರಾಟ್ ಕೊಹ್ಲಿ, 4. ಕೆ.ಎಲ್.ರಾಹುಲ್(ವಿಕೆಟ್ ಕೀಪರ್), 5. ಇಶಾನ್ ಕಿಶನ್/ತಿಲಕ್ ವರ್ಮಾ, 6. ಹಾರ್ದಿಕ್ ಪಾಂಡ್ಯ, 7. ರವೀಂದ್ರ ಜಡೇಜ,8. ಶಾರ್ದೂಲ್ ಠಾಕೂರ್/ವಾಶಿಂಗ್ಟನ್ ಸುಂದರ್, 9. ಕುಲದೀಪ್ ಯಾದವ್, 10. ಮುಹಮ್ಮದ್ ಸಿರಾಜ್, 11. ಜಸ್ಪ್ರೀತ್ ಬುಮ್ರಾ.
ಶ್ರೀಲಂಕಾ (ಸಂಭಾವ್ಯರು): 1. ಕುಶಾಲ್ ಪೆರೇರ, 2. ಪಥುಮ್ ನಿಶಾಂಕ, 3. ಕುಶಾಲ್ ಮೆಂಡಿಸ್(ವಿಕೆಟ್ ಕೀಪರ್), 4. ಸದೀರ ಸಮರವಿಕ್ರಮ, 5. ಚರಿತ್ ಅಸಲಂಕ, 6. ಧನಂಜಯ ಡಿಸಿಲ್ವ, 7. ದಸುನ್ ಶನಕ(ನಾಯಕ), 8. ದುನಿತ್ ವೆಲ್ಲಾಲಗೆ, 9. ದಶುನ್ ಹೇಮಂತ, 10. ಮಥೀಶ ಪಥಿರನ, 11. ಕಸುನ್ ರಜಿಥ.