ಬುಧವಾರದಿಂದ ಏಶ್ಯಕಪ್: ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ನೇಪಾಳ ಎದುರಾಳಿ
ಮುಲ್ತಾನ್: ಏಶ್ಯಕಪ್ ಕ್ರಿಕೆಟ್ ಟೂರ್ನಮೆಂಟ್ ಬುಧವಾರ ಆತಿಥೇಯ ಪಾಕಿಸ್ತಾನ ಹಾಗೂ ನೇಪಾಳ ತಂಡಗಳ ಮುಖಾಮುಖಿಯೊಂದಿಗೆ ಆರಂಭವಾಗಲಿದೆ. ಫೈನಲ್ ಸೇರಿದಂತೆ ಒಟ್ಟು 13 ಪಂದ್ಯಗಳು ಆ.30ರಿಂದ ಸೆ.17ರ ತನಕ ಪಾಕಿಸ್ತಾನ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.
ಅಕ್ಟೋಬರ್ 5ರಂದು ಆರಂಭವಾಗಲಿರುವ ವಿಶ್ವಕಪ್ ಟೂರ್ನಿಗಿಂತ ಮೊದಲು ಏಶ್ಯಕಪ್ ನಲ್ಲಿ ಭಾಗವಹಿಸುವ 6 ತಂಡಗಳ ಪೈಕಿ ನೇಪಾಳ ಹೊರತುಪಡಿಸಿ ಉಳಿದ 5 ತಂಡಗಳಿಗೆ ಈ ಟೂರ್ನಿಯು ಅತ್ಯಂತ ಮಹತ್ವದ್ದಾಗಿದೆ.
ಏಶ್ಯಕಪ್ ನಲ್ಲಿ ಭಾರತವು 7 ಬಾರಿ ಚಾಂಪಿಯನ್ ಆಗಿ ಯಶಸ್ವಿ ತಂಡ ಎನಿಸಿಕೊಂಡಿದ್ದು, 8ನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.
ಕೆ.ಎಲ್. ರಾಹುಲ್ ತಂಡಕ್ಕೆ ಸೇರ್ಪಡೆಯಾಗಿದ್ದರೂ, ಮೊದಲೆರಡು ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ಸೆಪ್ಟಂಬರ್ 2ರಂದು ಪಲ್ಲೆಕಲೆಯಲ್ಲಿ ಬಹುನಿರೀಕ್ಷಿತ ಭಾರತ ಹಾಗೂ ಪಾಕ್ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಶ್ರೇಯಸ್ ಅಯ್ಯರ್ ಆಡುವ ನಿರೀಕ್ಷೆ ಇದೆ. ಅಯ್ಯರ್, ಜಸ್ಪ್ರೀತ್ ಬುಮ್ರಾ ಹಾಗೂ ಪ್ರಸಿದ್ಧ ಕೃಷ್ಣ ಅವರ ಫಿಟ್ನೆಸ್ ಕುರಿತ ಆತಂಕ ಕಾಡುತ್ತಿದೆ.
ಏಕದಿನ ಕ್ರಿಕೆಟ್ ಟಿ-20ಗಿಂತ ಭಿನ್ನವಾಗಿದ್ದು, 50 ಓವರ್ ಗಳ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ಜೊತೆಗೆ 10 ಓವರ್ ಬೌಲಿಂಗ್ ಕೂಡ ಮಾಡಬೇಕಾಗುತ್ತದೆ. ಭಾರತ ಏಶ್ಯಕಪ್ ನಲ್ಲಿ ಬಲಿಷ್ಠ ತಂಡವಾಗಿದ್ದು, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳೂ ಎಲ್ಲರ ಗಮನ ಸೆಳೆಯುತ್ತಿವೆ.
ಆರು ಬಾರಿ ಏಶ್ಯಕಪ್ ಪ್ರಶಸ್ತಿಗಳನ್ನು ಜಯಿಸಿರುವ ಶ್ರೀಲಂಕಾ ತಂಡ ಸಂಪೂರ್ಣ ತಂಡವನ್ನು ಕಣಕ್ಕಿಳಿಸಲು ಪರದಾಡುತ್ತಿದೆ. ದುಷ್ಮಂತ ಚಾಮೀರ, ವನಿಂದು ಹಸರಂಗ, ಲಹಿರು ಕುಮಾರ ಹಾಗೂ ದಿಲ್ಶನ್ ಮದುಶಂಕ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.
ಗಾಯಗೊಂಡಿರುವ ತಮೀಮ್ ಇಕ್ಬಾಲ್ ಟೂರ್ನಿಗೆ ಲಭ್ಯವಿಲ್ಲದ ಕಾರಣ ಶಾಕಿಬ್ ಅಲ್ ಹಸನ್ ಅರು ವರ್ಷಗಳ ನಂತರ ಬಾಂಗ್ಲಾದೇಶದ ಏಕದಿನ ಕ್ರಿಕೆಟ್ ನಾಯಕನಾಗಿ ಮರಳಿದ್ದಾರೆ. ಪಾಕಿಸ್ತಾನ ತಂಡದಲ್ಲಿ ಯಾವುದೇ ಗಾಯದ ಸಮಸ್ಯೆ ಇಲ್ಲ. ಪಾಕ್ ತಂಡವು ಏಶ್ಯಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ವಿಶ್ವಕಪ್ ಅಭಿಯಾನಕ್ಕಿಂತ ಮೊದಲು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿದೆ. ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿರುವ ಬಾಬರ್ ಆಝಂ ನಾಯಕತ್ವದ ಪಾಕಿಸ್ತಾನ ತಂಡ ಐಸಿಸಿ ಏಕದಿನ ರ್ಯಾಂಕಿಂಗ್ ನಂ.1 ಸ್ಥಾನಕ್ಕೇರಿದೆ.