ಏಶ್ಯಕಪ್: ನೇಪಾಳದ ವಿರುದ್ಧ ಭಾರತಕ್ಕೆ 10 ವಿಕೆಟ್ ಜಯ, ಸೂಪರ್-4 ಹಂತಕ್ಕೆ ಅರ್ಹತೆ

Update: 2023-09-04 18:12 GMT

Photo: twitter \ @icc 

ಪಲ್ಲೆಕೆಲೆ : ಆರಂಭಿಕ ಬ್ಯಾಟರ್‌ಗಳಾದ ರೋಹಿತ್ ಶರ್ಮಾ(ಔಟಾಗದೆ 74 ರನ್, 59 ಎಸೆತ, 6 ಬೌಂಡರಿ, 5 ಸಿಕ್ಸರ್ )ಹಾಗೂ ಶುಭಮನ್ ಗಿಲ್(ಔಟಾಗದೆ 67 ರನ್, 62 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ನೇಪಾಳ ವಿರುದ್ಧ ಏಶ್ಯಕಪ್‌ನ ಎ ಗುಂಪಿನ ಪಂದ್ಯದಲ್ಲಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಒಟ್ಟು 3 ಅಂಕ ಗಳಿಸಿದ ಭಾರತವು ಸೂಪರ್-4 ಹಂತಕ್ಕೆ ಅರ್ಹತೆ ಪಡೆದಿದೆ.

ಭಾರತ ಗೆಲ್ಲಲು 231 ರನ್ ಗುರಿ ಬೆನ್ನಟ್ಟುತ್ತಿರುವಾಗಲೇ ಮಳೆ ಸುರಿಯಲಾರಂಭಿಸಿತು. ಈ ವೇಳೆ ಭಾರತವು 2.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಿತು. ಪಂದ್ಯ ಮತ್ತೆ ಆರಂಭವಾದಾಗ ಭಾರತಕ್ಕೆ 23 ಓವರ್‌ಗಳಲ್ಲಿ 145 ಪರಿಷ್ಕೃತ ಗುರಿ ನೀಡಲಾಯಿತು. ಭಾರತವು 20.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 147 ರನ್ ಗಳಿಸಿತು.

ಆರಂಭಿಕ ಬ್ಯಾಟರ್‌ಗಳಾದ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಮೊದಲ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 147 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ರೋಹಿತ್ 39 ಎಸೆತಗಳಲ್ಲಿ ತನ್ನ 49ನೇ ಅರ್ಧಶತಕ ಪೂರೈಸಿದರು. ರೋಹಿತ್‌ಗೆ ಸಾಥ್ ನೀಡಿದ ಗಿಲ್ 47 ಎಸೆತಗಳಲ್ಲಿ 7ನೇ ಅರ್ಧಶತಕ ಗಳಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಮಾಡಿದ ನೇಪಾಳ ತಂಡ ಆರಂಭಿಕ ಬ್ಯಾಟರ್ ಆಸಿಫ್ ಶೇಕ್(58 ರನ್, 97 ಎಸೆತ) ಹಾಗೂ ಕೆಳ ಕ್ರಮಾಂಕದ ಸೋಂಪಲ್ ಕಮಿ(48 ರನ್, 56 ಎಸೆತ)ಸಾಹಸದ ನೆರವಿನಿಂದ 48.2 ಓವರ್‌ಗಳಲ್ಲಿ 230 ರನ್ ಗಳಿಸಿ ಆಲೌಟಾಯಿತು.

ಇನಿಂಗ್ಸ್ ಆರಂಭಿಸಿದ ಆಸಿಫ್ ಶೇಕ್ ಹಾಗೂ ಕುಶಾಲ್ ಭುರ್ಟೆಲ್(38 ರನ್, 25 ಎಸೆತ)ಮೊದಲ ವಿಕೆಟ್‌ಗೆ 65 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಆರಂಭಿಕ ಜೊತೆಯಾಟ ಮುರಿದ ನಂತರ ನೇಪಾಳದ ಅಗ್ರ ಸರದಿ ಕುಸಿತಕ್ಕೊಳಗಾಯಿತು. ದಿಪೇಂದ್ರ ಸಿಂಗ್ ಹಾಗೂ ಸೋಂಪಲ್ ಕಮಿ 7ನೇ ವಿಕೆಟ್‌ಗೆ 50 ರನ್ ಜೊತೆಯಾಟದಲ್ಲಿ ತಂಡವು 230 ರನ್ ಗಳಿಸಲು ನೆರವಾದರು. ಪಾಕಿಸ್ತಾನ ವಿರುದ್ಧ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ನೇಪಾಳ ಸತತ 2ನೇ ಸೋಲಿನೊಂದಿಗೆ ಟೂರ್ನಿಯಿಂದ ನಿರ್ಗಮಿಸಿತು.

ಭಾರತದ ಬೌಲಿಂಗ್‌ನಲ್ಲಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ(3-40) ಹಾಗೂ ಮುಹಮ್ಮದ್ ಸಿರಾಜ್(3-61)ತಲಾ 3 ವಿಕೆಟ್‌ಗಳನ್ನು ಪಡೆದರು. ಭಾರತವು ತನ್ನ ಆಡುವ 11ರ ಬಳಗದಲ್ಲಿ ಒಂದು ಬದಲಾವಣೆ ಮಾಡಿತ್ತು. ವೈಯಕ್ತಿಕ ಕಾರಣಕ್ಕೆ ಮುಂಬೈಗೆ ವಾಪಸಾಗಿರುವ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಬದಲಿಗೆ ಮುಹಮ್ಮದ್ ಶಮಿಗೆ ಅವಕಾಶ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News