ಏಶ್ಯಕಪ್: ಅಫ್ಘಾನ್ ವಿರುದ್ಧ ರೋಚಕ ಜಯ ಸಾಧಿಸಿದ ಶ್ರೀಲಂಕಾ

Update: 2023-09-05 17:17 GMT

Photo: twitter \  @ICC

ಲಾಹೋರ್, ಸೆ.5: ಆಲ್‌ರೌಂಡರ್ ಮುಹಮ್ಮದ್ ನಬಿ (65 ರನ್, 32 ಎಸೆತ), ನಾಯಕ ಹಶ್ಮತುಲ್ಲಾ ಶಾಹಿದಿ(59 ರನ್, 66 ಎಸೆತ) ಹಾಗೂ ರಹಮತ್ ಶಾ(45 ರನ್, 40 ಎಸೆತ) ಅವರ ದಿಟ್ಟ ಹೋರಾಟದ ಹೊರತಾಗಿಯೂ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧ ಏಶ್ಯಕಪ್‌ನ ಬಿ ಗುಂಪಿನ ಪಂದ್ಯದಲ್ಲಿ ಕೇವಲ 2ರನ್‌ನಿಂದ ಸೋಲನುಭವಿಸಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 292 ರನ್ ಗುರಿ ಪಡೆದಿದ್ದ ಅಫ್ಘಾನಿಸ್ತಾನ 37.4 ಓವರ್‌ಗಳಲ್ಲಿ 289 ರನ್‌ಗೆ ಆಲೌಟಾಗಿ ಗೆಲುವಿನ ಹೊಸ್ತಿಲಲ್ಲಿ ಎಡವಿತು. ಆಲ್‌ರೌಂಡರ್ ರಶೀದ್ ಖಾನ್ ಔಟಾಗದೆ 27 ರನ್ ಗಳಿಸಿದರು. ಕೇವಲ 24 ಎಸೆತಗಳಲ್ಲಿ 50 ರನ್(3 ಸಿಕ್ಸರ್, 6 ಬೌಂಡರಿ) ಪೂರೈಸಿದ ನಬಿ ವೇಗವಾಗಿ ಅರ್ಧಶತಕ ಸಿಡಿಸಿದ ಅಫ್ಘಾನ್‌ನ ಮೊದಲ ಆಟಗಾರ ಎನಿಸಿಕೊಳ್ಳುವ ಮೂಲಕ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ಕೆತ್ತಿದರು. ಇದು ನಬಿ ಗಳಿಸಿದ 16ನೇ ಅರ್ಧಶತಕವಾಗಿದೆ.

ಶ್ರೀಲಂಕದ ಪರ ಕಸುನ್ ರಜಿತ(4-79)ಯಶಸ್ವಿ ಬೌಲರ್ ಎನಿಸಿಕೊಂಡರು. ಧನಂಜಯ ಡಿಸಿಲ್ವ(2-12) ಹಾಗೂ ಡುನಿತ್ ವೆಲ್ಲಲಗೆ(2-36)ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಇದಕ್ಕೂ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ ಅಗ್ರ ಕ್ರಮಾಂಕದ ಆಟಗಾರ ಕುಶಾಲ್ ಮೆಂಡಿಸ್ ಅವರ 92 ರನ್(84 ಎಸೆತ, 6 ಬೌಂಡರಿ, 3 ಸಿಕ್ಸರ್) ನೆರವಿನಿಂದ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತು. ಪಥುಮ್ ನಿಶಾಂಕ(41 ರನ್), ಚರಿತ್ ಅಸಲಂಕ(36 ರನ್), ಡುನಿತ್ ವೆಲ್ಲಲಗೆ(ಔಟಾಗದೆ 33), ಡಿ.ಕರುಣರತ್ನೆ(32 ರನ್)ಹಾಗೂ ಮಹೀಶ್ ತೀಕ್ಷಣ(28 ರನ್) ಎರಡಂಕೆಯ ಸ್ಕೋರ್ ಗಳಿಸಿದರು. ಅಫ್ಘಾನ್ ಪರ ಗುಲ್ಬದಿನ್ ನೈಬ್(4-60)ಹಾಗೂ ರಶೀದ್ ಖಾನ್ (2-63)ಆರು ವಿಕೆಟ್‌ಗಳನ್ನು ಹಂಚಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News