ನಾಳೆ (ಸೆ.10) ಭಾರತ-ಪಾಕಿಸ್ತಾನ ನಡುವೆ ಏಶ್ಯಕಪ್ ಸೂಪರ್-4 ಪಂದ್ಯ; ಮಳೆಯ ಆತಂಕ

Update: 2023-09-09 14:05 GMT

ಸಾಂದರ್ಭಿಕ ಚಿತ್ರ.

ಕೊಲಂಬೊ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಏಶ್ಯಕಪ್‌ನ ಸೂಪರ್-4 ಪಂದ್ಯವನ್ನಾಡಲು ರವಿವಾರ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಪಲ್ಲೆಕೆಲೆಯಲ್ಲಿ ಉಭಯ ತಂಡಗಳ ನಡುವೆ ನಡೆದಿದ್ದ ಲೀಗ್ ಹಂತದ ಪಂದ್ಯವು ಮಳೆಗೆ ಕೊಚ್ಚಿ ಹೋಗಿತ್ತು. ಈ ಪಂದ್ಯದಲ್ಲೂ ಮಳೆ ಭೀತಿ ಎದುರಾಗಿದೆ. ಶೇ.90ರಷ್ಟು ಮಳೆ ಸುರಿಯುವ ಸಾಧ್ಯತೆಯಿದೆ. ಹೀಗಾಗಿ ಈ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಗಿದೆ.

ನೇಪಾಳ ವಿರುದ್ಧ ಭಾರತದ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಕೊಲಂಬೊದಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಗದೆ ಇದ್ದರೆ ಭಾರತವು ಏಕದಿನ ವಿಶ್ವಕಪ್‌ಗೆ ಕೆ.ಎಲ್. ರಾಹುಲ್ ಹಾಗೂ ಜಸ್‌ಪ್ರಿತ್ ಬುಮ್ರಾ ಅವರ ಸಿದ್ಧತೆಯ ಪರೀಕ್ಷೆ ನಡೆಸಲಿದೆ. ರಾಹುಲ್ ಮಾರ್ಚ್‌ನಿಂದ ಏಕದಿನ ಪಂದ್ಯವನ್ನು ಆಡಿಲ್ಲ. ಬುಮ್ರಾ ಜುಲೈನಿಂದ ಬೌಲಿಂಗ್ ಮಾಡಿಲ್ಲ. ರಾಹುಲ್‌ರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಳ್ಳಲು ಭಾರತದ ಟೀಮ್ ಮ್ಯಾನೇಜ್‌ಮೆಂಟ್ ಇಶಾನ್ ಕಿಶನ್‌ರನ್ನು ಕೈಬಿಡಬಹುದು. ಕಿಶನ್ ಏಕದಿನ ಕ್ರಿಕೆಟ್‌ನಲ್ಲಿ ಕಳೆದ 4 ಇನಿಂಗ್ಸ್‌ಗಳಲ್ಲಿ 4 ಅರ್ಧಶತಕಗಳನ್ನು ಸಿಡಿಸಿ ಉತ್ತಮ ಟಚ್‌ನಲ್ಲಿದ್ದಾರೆ.

4 ತಿಂಗಳು ಸಕ್ರಿಯ ಕ್ರಿಕೆಟ್‌ನಿಂದ ದೂರವುಳದಿದ್ದ ರಾಹುಲ್ ಭಾರತದ ಆಡುವ ಬಳಗ ಸೇರಲು ಸಜ್ಜಾಗಿದ್ದಾರೆ. ರಾಹುಲ್ ಅವರು ಆಯ್ಕೆಗಾರರು ಹಾಗೂ ಟೀಮ್ ಮ್ಯಾನೇಜ್‌ಮೆಂಟ್‌ನ ವಿಶ್ವಾಸ ಗಳಿಸಿದ್ದಾರೆ. ಆಡುವ ಬಳಗಕ್ಕೆ ರಾಹುಲ್ ಹಾಗೂ ಕಿಶನ್‌ರನ್ನು ಸೇರಿಸಲಾಗುವುದು ಎಂದು ನಾಯಕ ರೋಹಿತ್ ಶರ್ಮಾ ಇತ್ತೀಚೆಗೆ ಹೇಳಿದ್ದರು. ಆದರೆ ಪಾಕ್ ವಿರುದ್ಧ ರವಿವಾರದ ಪಂದ್ಯದಲ್ಲಿ ರಾಹುಲ್‌ಗೆ ತನ್ನ ಫಿಟ್ನೆಸ್ ಹಾಗೂ ಫಾರ್ಮ್ ಸಾಬೀತುಪಡಿಸಲು ಮೊದಲ ಆದ್ಯತೆ ನೀಡಬಹುದು. ಮೊದಲ ಮಗುವಿನ ತಂದೆಯಾಗಿರುವ ಬುಮ್ರಾ ಮುಂಬೈಗೆ ವಾಪಸಾದ ಕಾರಣ ನೇಪಾಳ ವಿರುದ್ಧ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಸೂಪರ್-4 ಸುತ್ತಿನಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ಅವರು ರಾಹುಲ್ ಜೊತೆ ಆಡುವ ಬಳಗ ಸೇರಲು ಸಿದ್ಧರಾಗಿದ್ದಾರೆ. ಇವರಿಬ್ಬರಿಗೆ ಮುಹಮ್ಮದ್ ಶಮಿ ಹಾಗೂ ಇಶಾನ್ ಕಿಶನ್ ದಾರಿ ಮಾಡಿಕೊಡಬೇಕಾಗಿದೆ.

ಬಾಂಗ್ಲಾದೇಶ ವಿರುದ್ಧ ಲಾಹೋರ್‌ನಲ್ಲಿ ನಡೆದಿದ್ದ ಸೂಪರ್-4 ಪಂದ್ಯದಲ್ಲಿ ವೇಗಿ ನಸೀಂ ಶಾ ಗಾಯದ ಭೀತಿ ಎದುರಿಸಿದ್ದರು. ಫಿಜಿಯೋರಿಂದ ಚಿಕಿತ್ಸೆ ಪಡೆದು ಮೈದಾನಕ್ಕೆ ವಾಪಸಾಗಿದ್ದರು. ಶಾ ಭಾರತ ವಿರುದ್ಧ ಪಂದ್ಯಕ್ಕೆ ಫಿಟ್ ಆಗುವ ನಿರೀಕ್ಷೆ ಇದೆ.

ಪಿಚ್ ಹಾಗೂ ವಾತಾವರಣ

ಎಲ್ಲರ ಕಣ್ಣು ಆಕಾಶದತ್ತ ನೆಟ್ಟಿದೆ. ಪ್ರೇಮದಾಸ ಸ್ಟೇಡಿಯಮ್‌ನ ಪಿಚ್‌ನಲ್ಲಿ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್) ಫೈನಲ್ ಪಂದ್ಯ ಆಡಲಾಗಿತ್ತು. ಪಿಚ್ ವೇಗಿಗಳು ಹಾಗೂ ಸ್ಪಿನ್ನರ್ ಇಬ್ಬರಿಗೂ ನೆರವಾಗುವ ಸಾಧ್ಯತೆಯಿದೆ.

ಭಾರತ(ಸಂಭಾವ್ಯರು): 1. ಶುಭಮನ್ ಗಿಲ್, 2. ರೋಹಿತ್ ಶರ್ಮಾ(ನಾಯಕ), 3. ವಿರಾಟ್ ಕೊಹ್ಲಿ, 4. ಶ್ರೇಯಸ್ ಅಯ್ಯರ್, 5. ಕೆ.ಎಲ್.ರಾಹುಲ್(ವಿಕೆಟ್‌ಕೀಪರ್), 6. ಹಾರ್ದಿಕ್ ಪಾಂಡ್ಯ,7. ರವೀಂದ್ರ ಜಡೇಜ, 8. ಶಾರ್ದೂಲ್ ಠಾಕೂರ್, 9. ಕುಲದೀಪ್ ಯಾದವ್, 10. ಜಸ್‌ಪ್ರೀತ್ ಬುಮ್ರಾ, 11. ಮುಹಮ್ಮದ್ ಸಿರಾಜ್.

ಪಾಕಿಸ್ತಾನ(ಸಂಭಾವ್ಯರು): 1. ಫಖರ್ ಝಮಾನ್, 2. ಇಮಾಮುಲ್‌ಹಕ್, 3. ಬಾಬರ್ ಆಝಂ(ನಾಯಕ), 4. ಮುಹಮ್ಮದ್ ರಿಝ್ವಾನ್(ವಿಕೆಟ್‌ಕೀಪರ್),5. ಅಘಾ ಸಲ್ಮಾನ್, 6. ಇಫ್ತಿಕಾರ್ ಅಹ್ಮದ್, 7. ಶಾದಾಬ್ ಖಾನ್, 8. ಮುಹಮ್ಮದ್ ನವಾಝ್/ಫಹೀಂ ಅಶ್ರಫ್, 9. ಶಾಹೀನ್ ಶಾ ಅಫ್ರಿದಿ, 10. ನಸೀಂ ಶಾ, 11. ಹಾರಿಸ್ ರವೂಫ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News