ಏಶ್ಯ ಕಪ್ ಸೂಪರ್ 4 ಪಂದ್ಯ; ಲಂಕಾ ಗೆಲುವಿಗೆ 252 ರನ್ ಗುರಿ

Update: 2023-09-14 17:30 GMT

Photo- PTI

ಕೊಲಂಬೊ: ಪಾಕಿಸ್ತಾನ ವಿರುದ್ಧದ ಏಶ್ಯ ಕಪ್ ಸೂಪರ್ 4 ಪಂದ್ಯವೊಂದರಲ್ಲಿ ಗುರುವಾರ ಶ್ರೀಲಂಕಾ ಗೆಲುವಿಗೆ 42 ಓವರ್‍ಗಳಲ್ಲಿ 252 ರನ್‍ಗಳನ್ನು ಗಳಿಸುವ ಗುರಿಯನ್ನು ನೀಡಲಾಗಿದೆ.

ಇಲ್ಲಿನ ಆರ್. ಪ್ರೇಮದಾಸ ಸ್ಟೇಡಿಯಮ್‍ನಲ್ಲಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.

ಪಂದ್ಯ ಆರಂಭವಾಗುವುದಕ್ಕೂ ಮೊದಲೇ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಪಂದ್ಯದ ಆರಂಭವನ್ನು ವಿಳಂಬಿಸಲಾಗಿತ್ತು. ಬಳಿಕ ಪಂದ್ಯ ಆರಂಭವಾಯಿತಾದರೂ ಪದೇ ಪದೇ ಮಳೆ ಕಾಡಿತು. ಹಾಗಾಗಿ, ಆಗಾಗ ಆಟವನ್ನು ನಿಲ್ಲಿಸಬೇಕಾಯಿತು.

ನಿರಂತರ ಮಳೆಯ ಹಿನ್ನೆಲೆಯಲ್ಲಿ ಪಂದ್ಯದ ಓವರ್‍ಗಳ ಸಂಖ್ಯೆಯನ್ನು 42ಕ್ಕೆ ಇಳಿಸಲಾಯಿತು.

ಪಾಕಿಸ್ತಾನವು 42 ಓವರ್‍ಗಳಲ್ಲಿ 7 ವಿಕೆಟ್‍ಗಳ ನಷ್ಟಕ್ಕೆ 252 ರನ್‍ಗಳನ್ನು ಗಳಿಸಿತು. ಮುಹಮ್ಮದ್ ರಿಝ್ವಾನ್ ಮತ್ತು ಅಬ್ದುಲ್ಲಾ ಶಫೀಕ್‍ರ ಭವ್ಯ ಅರ್ಧ ಶತಕಗಳ ನೆರವಿನಿಂದ ಪಾಕಿಸ್ತಾನಕ್ಕೆ ಈ ಮೊತ್ತವನ್ನು ತಲುಪಲು ಸಾಧ್ಯವಾಯಿತು.

ಪಾಕಿಸ್ತಾನದ ಪರವಾಗಿ ಮುಹಮ್ಮದ್ ರಿಝ್ವಾನ್ 86 ರನ್‍ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ಅದೇ ವೇಳೆ, ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ 52 ರನ್‍ಗಳ ದೇಣಿಗೆ ನೀಡಿದರು.

ಬಳಿಕ, ಇಫ್ತಿಕಾರ್ ಅಹಮ್ಮದ್ 40 ಎಸೆತಗಳಲ್ಲಿ 47 ರನ್‍ಗಳನ್ನು ಬಾರಿಸಿದರು.

ನಾಯಕ ಬಾಬರ್ ಅಝಮ್ 29 ರನ್‍ಗಳನ್ನು ಗಳಿಸಿ ನಿರ್ಗಮಿಸಿದರು.

ಶ್ರೀಲಂಕಾದ ಪರವಾಗಿ ಮತೀಶ ಪತಿರಣ ಮೂರು ವಿಕೆಟ್‍ಗಳನ್ನು ಉರುಳಿಸಿದರೆ, ಪ್ರಮೋದ್ ಮಡೂಶನ್ ಎರಡು ವಿಕೆಟ್‍ಗಳನ್ನು ಪಡೆದರು.

ಡಕ್‍ವರ್ತ್-ಲೂಯಿಸ್ ನಿಯಮದ ಪ್ರಕಾರ, ಶ್ರೀಲಂಕಾಗೆ 42 ಓವರ್‍ಗಳಲ್ಲಿ 252 ರನ್‍ಗಳನ್ನು ಗಳಿಸುವ ಪರಿಷ್ಕøತ ಗುರಿಯನ್ನು ನೀಡಲಾಯಿತು.

ಪಾಕಿಸ್ತಾನ ಮತ್ತು ಶ್ರೀಲಂಕಾಗಳು ತಲಾ ಒಂದು ಗೆಲುವಿನ ಮೂಲಕ ತಲಾ ಎರಡು ಅಂಕಗಳನ್ನು ಗಳಿಸಿವೆ. ಫೈನಲ್ ತಲುಪಲು ಈ ಪಂದ್ಯವನ್ನು ಗೆಲ್ಲುವುದು ಎರಡೂ ತಂಡಗಳಿಗೆ ಅಗತ್ಯವಾಗಿದೆ. ಇಲ್ಲಿ ಗೆದ್ದ ತಂಡವು ರವಿವಾರ ನಡೆಯುವ ಫೈನಲ್‍ನಲ್ಲಿ ಭಾರತವನ್ನು ಎದುರಿಸುತ್ತದೆ

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News