ಏಶ್ಯಕಪ್: ಭಾರತ-ಪಾಕಿಸ್ತಾನ ನಡುವಿನ ಸೂಪರ್-4 ಪಂದ್ಯಕ್ಕೆ ಮೀಸಲು ದಿನ ನಿಗದಿ

Update: 2023-09-08 15:29 GMT

Photo: twitter/usmansidhuoffic

ಹೊಸದಿಲ್ಲಿ: ಈಗಿನ ಹವಾಮಾನವನ್ನು ಪರಿಗಣಿಸಿ ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಂಸಿಸಿ)ಭಾರತ ಹಾಗೂ ಪಾಕಿಸ್ತಾನ ನಡುವಿನ ಏಶ್ಯಕಪ್ ಸೂಪರ್-4 ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲು ಶುಕ್ರವಾರ ನಿರ್ಧರಿಸಿದೆ.

ಭಾರತ-ಪಾಕಿಸ್ತಾನ ನಡುವಿನ ಅತ್ಯಂತ ಮಹತ್ವದ ಪಂದ್ಯವು ಕೊಲಂಬೊದಲ್ಲಿ ಸೆಪ್ಟಂಬರ್ 10ರಂದು ನಿಗದಿಯಾಗಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಇತರ ಸೂಪರ್-4 ಪಂದ್ಯಗಳಿಗೆ ಯಾವುದೇ ಮೀಸಲು ದಿನ ನಿಗದಿಪಡಿಸಲಾಗಿಲ್ಲ.

ಒಂದು ವೇಳೆ ಭಾರತ-ಪಾಕಿಸ್ತಾನದ ನಡುವೆ ಸೆ.10ರಂದು ನಡೆಯುವ ಪಂದ್ಯಕ್ಕೆ ಮಳೆ ಅಡ್ಡಿಯಾದರೆ, ಪಂದ್ಯ ಎಲ್ಲಿ ಸ್ಥಗಿತವಾಗಿದೆಯೋ ಅಲ್ಲಿಂದಲೇ ಮರುದಿನ ಪುನರಾರಂಭವಾಗಲಿದೆ. ಈ ಮೂಲಕ ಪಂದ್ಯದ ಫಲಿತಾಂಶವನ್ನು ಶತಾಯಗತಾಯ ಪಡೆಯಲು ನಿರ್ಧರಿಸಲಾಗಿದೆ. ಅಂತಹ ಸಂದರ್ಭದಲ್ಲಿ ಪ್ರೇಕ್ಷಕರು ಪಂದ್ಯದ ಟಿಕೆಟ್‌ಗಳನ್ನು ಹಾಗೆಯೇ ಇಟ್ಟುಕೊಂಡು ಮೀಸಲು ದಿನದಂದು ಕ್ರೀಡಾಂಗಣಕ್ಕೆ ಆಗಮಿಸಿ ಪಂದ್ಯ ವೀಕ್ಷಿಸಬಹುದು ಎಂದು ಎಸಿಸಿ ತಿಳಿಸಿದೆ.

ಕೊಲಂಬೊದ ಪ್ರೇಮದಾಸ ಸ್ಟೇಡಿಯಮ್‌ನಲ್ಲಿ ಸೆ.10, 2023ರಂದು ನಿಗದಿಯಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಶ್ಯಕಪ್ ಸೂಪರ್-4 ಪಂದ್ಯಕ್ಕೆ ಮೀಸಲು ದಿನ ನಿಗದಿಪಡಿಸಲಾಗಿದೆ. ಒಂದು ವೇಳೆ ಪ್ರತಿಕೂಲ ಹವಾಮಾನದಿಂದಾಗಿ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಸ್ಥಗಿತಗೊಂಡರೆ ಪಂದ್ಯವು ಸೆ.11ರಂದು ಮುಂದುವರಿಯಲಿದೆ ಎಂದು ಎಸಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಸೆಪ್ಟಂಬರ್ 17ರಂದು ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ನಡೆಯಲಿರುವ ಏಶ್ಯಕಪ್ ಫೈನಲ್ ಪಂದ್ಯಕ್ಕೆ ಭಾರೀ ಮಳೆ ಅಡ್ಡಿಯಾಗಬಹುದು ಎಂಬ ಭೀತಿಯಲ್ಲಿ ಈಗಾಗಲೇ ಮೀಸಲು ದಿನ ನಿಗದಿಪಡಿಸಲಾಗಿದೆ.

ದ್ವೀಪರಾಷ್ಟ್ರದಲ್ಲಿ ಪ್ರೇಕ್ಷಕರ ನೀರಸ ಪ್ರತಿಕ್ರಿಯೆಯಿಂದಾಗಿ ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಪಿಸಿಬಿಯ ಆಡಳಿತ ಮಂಡಳಿಯ ಅಧ್ಯಕ್ಷ ಝಾಕಾ ಅಶ್ರಫ್ ಇತ್ತೀಚೆಗೆ ಎಸಿಸಿ ಚೇರ‌್ಮನ್ ಜಯ್ ಶಾಗೆ ಪತ್ರ ಬರೆದು ಆಗ್ರಹಿಸಿದ್ದರು.

ಸಾಂಪ್ರದಾಯಿಕ ಎದುರಾಳಿಗಳ ನಡುವೆ ಗ್ರೂಪ್ ಲೀಗ್ ಪಂದ್ಯವು ಭಾರೀ ಮಳೆಯಿಂದಾಗಿ ರದ್ದಾಗಿತ್ತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 266 ರನ್ ಗಳಿಸಿದ ನಂತರ ಜೋರಾಗಿ ಮಳೆ ಸುರಿದು ಪಂದ್ಯ ಕೊಚ್ಚಿಹೋಗಿತ್ತು.

ರವಿವಾರ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೂ ಮಳೆಯ ಭೀತಿ ಎದುರಾಗಿದ್ದು, ಶೇಕಡಾ 90ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News