ಪದಕ ಕೊಳ್ಳೆ ಹೊಡೆದ ಅತ್ಲೀಟ್ ಗಳು: ಸಾಬ್ಳೆ , ತಜಿಂದರ್ಪಾಲ್ ಗೆ ಚಿನ್ನ

ಏಶ್ಯನ್ ಗೇಮ್ಸ್ನಲ್ಲಿ 8ನೇ ದಿನವಾದ ರವಿವಾರ ಭಾರತದ ಪಾಲಿಗೆ ‘ಸೂಪರ್ ಸಂಡೆ’ ಆಗಿದ್ದು, ಅತ್ಲೀಟ್ಗಳು ಭರ್ಜರಿ ಪದಕದ ಬೇಟೆಯಾಡಿದರು. ಅತ್ಲೀಟ್ಗಳ ಅಮೋಘ ಪ್ರದರ್ಶನದ ಫಲವಾಗಿ ಭಾರತ ಒಂದೇ ದಿನ 3 ಚಿನ್ನ ಸಹಿತ ಒಟ್ಟು 15 ಪದಕಗಳನ್ನು ಜಯಿಸಿದ್ದು ಒಟ್ಟು ಪದಕದ ಗಳಿಕೆಯು 50ರ ಗಡಿ ದಾಟಿತು. ಅವಿನಾಶ್ ಸಾಬ್ಳೆ ಪುರುಷರ 3,000 ಮೀ. ಸ್ಟೀಪಲ್ಚೇಸ್ ಸ್ಪರ್ಧೆಯಲ್ಲಿ ಏಶ್ಯನ್ ಗೇಮ್ಸ್ ದಾಖಲೆಯೊಂದಿಗೆ ಸ್ವರ್ಣ ಪದಕ ಸಂಪಾದಿಸಿದರು. ಶಾಟ್ಪುಟ್ ಸ್ಪರ್ಧೆಯಲ್ಲಿ ತಜಿಂದರ್ಪಾಲ್ ಸಿಂಗ್ ತೂರ್ ಚಿನ್ನದ ಪದಕ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅತ್ಲೆಟಿಕ್ಸ್ನಲ್ಲಿ ಭಾರತವು ಎರಡು ಚಿನ್ನ, 4 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಬಾಚಿಕೊಂಡಿದೆ. ಶೂಟರ್ಗಳು ಪ್ರಸಕ್ತ ಗೇಮ್ಸ್ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಪುರುಷರ ಹಾಗೂ ಮಹಿಳೆಯರ ಟೀಮ್ ವಿಭಾಗದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಬಾಚಿಕೊಂಡರು. ಗಾಲ್ಫ್ನಲ್ಲಿ ಅದಿತಿ ಅಶೋಕ್, ಲಾಂಗ್ಜಂಪ್ನಲ್ಲಿ ಮುರಳಿ ಶ್ರೀಶಂಕರ್, ಪುರುಷರ 1,500 ಮೀ. ಓಟದಲ್ಲಿ ಅಜಯ್ಕುಮಾರ್, ಮಹಿಳೆಯರ 1,500 ಮೀಟರ್ ಓಟದಲ್ಲಿ ಹರ್ಮಲನ್ ಬೈನ್ಸ್ ಬೆಳ್ಳಿ ಗೆದ್ದರು. ಮಹಿಳೆಯರ 100 ಮೀ. ಹರ್ಡಲ್ಸ್ನಲ್ಲಿ ಸ್ಟಾರ್ ಅತ್ಲೀಟ್ ಜ್ಯೋತಿ ಕಂಚು ಜಯಿಸಿದ್ದರು. ಆದರೆ ಚೀನಾದ ಸ್ಪರ್ಧಿ ಯಾನಿ ಯು ಅನರ್ಹಗೊಂಡ ಕಾರಣ ಜ್ಯೋತಿ ಬೆಳ್ಳಿ ಪದಕ ತನ್ನದಾಗಿಸಿಕೊಂಡರು. ಇದೇ ವೇಳೆ ಫೈನಲ್ನಲ್ಲಿ ಚೀನಾದ ವಿರುದ್ದ ಸೋಲುಂಡಿರುವ ಭಾರತದ ಬ್ಯಾಡ್ಮಿಂಟನ್ ತಂಡ ಐತಿಹಾಸಿಕ ಬೆಳ್ಳಿ ಪದಕ ಜಯಿಸಿತು.

Update: 2023-10-01 18:30 GMT

ಶಾಟ್ ಪುಟ್: ಚಿನ್ನ ಉಳಿಸಿಕೊಂಡ ತಜಿಂದರ್ ಪಾಲ್ ಸಿಂಗ್



ಹಾಂಗ್ಝೌ: ಹಾಲಿ ಚಾಂಪಿಯನ್ ಭಾರತದ ತಜಿಂದರ್ಪಾಲ್ ಸಿಂಗ್ ತೂರ್ ಏಶ್ಯನ್ ಗೇಮ್ಸ್ನಲ್ಲಿ ಶಾಟ್ಪುಟ್ ಸ್ಪರ್ಧೆಯ ಫೈನಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸ್ವರ್ಣ ಪದಕವನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2018ರ ಜಕಾರ್ತ ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ತೂರ್ ಅವರು ರವಿವಾರ ನಡೆದ ಪುರುಷರ ಶಾಟ್ಪುಟ್ ಫೈನಲ್ನಲ್ಲಿ ತನ್ನ ಆರನೇ ಹಾಗೂ ಅಂತಿಮ ಪ್ರಯತ್ನದಲ್ಲಿ ಶಾಟ್ಪುಟ್ ಅನ್ನು 20.36 ಮೀ.ದೂರಕ್ಕೆ ಎಸೆದು ಮೊದಲ ಸ್ಥಾನಕ್ಕೆ ಜಿಗಿದರು. ಚಿನ್ನ ತನ್ನದಾಗಿಸಿಕೊಂಡರು. 28ರ ಹರೆಯದ ತೂರ್ ಫೈನಲ್ನಲ್ಲಿ ಸೌದಿ ಅರೇಬಿಯದ ಎದುರಾಳಿಯ ಸವಾಲನ್ನು ದಿಟ್ಟವಾಗಿ ಎದುರಿಸಿದರು. ತೂರ್ ಅವರಿಗೆ 2018ರ ಜಕಾರ್ತ ಗೇಮ್ಸ್ನಲ್ಲಿ ನಿರ್ಮಿಸಿದ್ದ ತನ್ನದೇ ಏಶ್ಯನ್ ಗೇಮ್ಸ್ ದಾಖಲೆ(20.75 ಮೀ.)ಯನ್ನು ಮುರಿಯಲು ಸಾಧ್ಯವಾಗಲಿಲ್ಲ.

3,000 ಮೀ. ಸ್ಟೀಪಲ್ ಚೇಸ್: ಚಿನ್ನ ಗೆದ್ದ ಭಾರತದ ಮೊದಲ ಅತ್ಲೀಟ್ ಅವಿನಾಶ್ ಸಾಬ್ಳೆ



ಹಾಂಗ್ಝೌ: ಹಾಂಗ್ಝೌ ಏಶ್ಯನ್ ಗೇಮ್ಸ್ ನಲ್ಲಿ ರವಿವಾರ ಅವಿನಾಶ್ ಸಾಬ್ಳೆ ಪುರುಷರ 3,000 ಮೀ. ಸ್ಟೀಪಲ್ ಚೇಸ್ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿ ಇತಿಹಾಸ ನಿರ್ಮಿಸಿದ್ದಾರೆ.

ರಾಷ್ಟ್ರೀಯ ದಾಖಲೆ ಹೊಂದಿರುವ 29ರ ಹರೆಯದ ಸಾಬ್ಳೆ 8 ನಿಮಿಷ 19.50 ಸೆಕೆಂಡ್ನಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಪ್ರಸಕ್ತ ಗೇಮ್ಸ್ನಲ್ಲಿ ಅತ್ಲೆಟಿಕ್ಸ್ನಲ್ಲಿ ಸ್ವರ್ಣ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡರು.

ಸಾಬ್ಳೆ ಬಂಗಾರದ ಬೇಟೆಯಾಡಿದ್ದಲ್ಲದೆ ಗೇಮ್ಸ್ ನಲ್ಲಿ ನೂತನ ದಾಖಲೆ ನಿರ್ಮಿಸಿದರು. 2018ರ ಜಕಾರ್ತ ಗೇಮ್ಸ್ ನಲ್ಲಿ ಇರಾನ್ನ ಹುಸೇನ್ ಕೀಹಾನಿ ನಿರ್ಮಿಸಿದ್ದ ಏಶ್ಯನ್ ಗೇಮ್ಸ್ ದಾಖಲೆ(8 ನಿಮಿಷ, 22.79 ಸೆಕೆಂಡ್)ಯನ್ನು ಮುರಿದರು. 2010ರ ಏಶ್ಯನ್ ಗೇಮ್ಸ್ ನಲ್ಲಿ ಸುಧಾ ಸಿಂಗ್ ಮಹಿಳೆಯರ 3,000 ಮೀ. ಸ್ಟೀಪಲ್ಚೇಸ್ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಹೆಪ್ಟಾತ್ಲೀಟ್ ಸ್ವಪ್ನಾ ಬರ್ಮನ್ ಜಾವೆಲಿನ್ ಎಸೆತದ ಸ್ಪರ್ಧೆಯ ನಂತರ ಪದಕ ಸ್ಪರ್ಧೆಯಿಂದ ಹೊರ ನಡೆದರು. ಹಾಲಿ ಚಾಂಪಿಯನ್ ಆಗಿದ್ದ ಸ್ವಪ್ನಾ ಕೇವಲ 45.13 ಮೀ.ದೂರಕ್ಕೆ ಜಾವೆಲಿನ್ ಎಸೆದರು. 52.55 ಮೀ. ಸ್ವಪ್ನಾ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಸ್ವಪ್ನಾ 2018ರಲ್ಲಿ ಏಶ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಹೆಪ್ಟಾತ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಹಾದಿಯಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನ ಜಯಿಸಿದ್ದರು. ಒಟ್ಟಾರೆ ಸ್ವಪ್ನಾ 4,840 ಅಂಕ ಗಳಿಸಿ 4ನೇ ಸ್ಥಾನ ಪಡೆದರು. ಪ್ರತಿಸ್ಪರ್ಧಿ ಚೀನಾದ ಜಿಂಗ್ ಲಿಯುಗಿಂತ 11 ಅಂಕದಿಂದ ಹಿಂದುಳಿದರು. ಭಾರತದ ಇನ್ನೋರ್ವ ಸ್ಪರ್ಧಿ ನಂದಿನಿ ಅಗಸರ ವೈಯಕ್ತಿಕ ಶ್ರೇಷ್ಠ(39.88)ಪ್ರದರ್ಶನ ನೀಡಿದ್ದು, 5ನೇ ಸ್ಥಾನ ಪಡೆದರು. ಇದಕ್ಕೂ ಮೊದಲು ಭಾರತದ ಅಮ್ಲಾನ್ ಬೊರ್ಗೊಹೈನ್ 21.08 ಸೆಕೆಂಡ್ನಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಪುರುಷರ 200 ಮೀ.ಹೀಟ್ಸ್ನಲ್ಲಿ ಸೆಮಿ ಫೈನಲ್ ತಲುಪಿದರು. ಇದೇ ವೇಳೆ ಜ್ಯೋತಿ ಯರ್ರಾಜಿ ಮಹಿಳೆಯರ 200 ಮೀ. ಓಟದಲ್ಲಿ ಫೈನಲ್ ತಲುಪುವಲ್ಲಿ ವಿಫಲರಾದರು. ಜ್ಯೋತಿ 23.78 ಸೆಕೆಂಡ್ನಲ್ಲಿ ಗುರಿ ತಲುಪಿದರು.

ಕನ್ನಡತಿ ಅದಿತಿ ಅಶೋಕ್ ಗೆ ಬೆಳ್ಳಿ


ಹಾಂಗ್ಝೌ: ಭಾರತದ ಗಾಲ್ಫರ್ ಅದಿತಿ ಅಶೋಕ್ ಏಶ್ಯನ್ ಗೇಮ್ಸ್ನ ಮಹಿಳೆಯರ ಗಾಲ್ಫ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಸ್ಪರ್ಧೆಯ ಕೊನೆಯ ದಿನವಾದ ರವಿವಾರ ಅದಿತಿ ಅಶೋಕ್ಗೆ ದೊಡ್ಡ ಸವಾಲಾಗಿ ಕಂಡುಬಂದಿದ್ದು ಫೈನಲ್ನಲ್ಲಿ ಎಡವಿದರು. ಚಿನ್ನದ ಪದಕ ಥಾಯ್ಲೆಂಡ್ನ ಅರ್ಪಿಚಾಯಾ ಯುಬೋಲ್ ಪಾಲಾಯಿತು. ಅದಿತಿ 7 ಸ್ಟ್ರೋಕ್ ಮುನ್ನಡೆಯೊಂದಿಗೆ ಫೈನಲ್ಗೆ ಪ್ರವೇಶಿಸಿದ್ದು ಸುಲಭದ ಗೆಲುವಿನ ವಿಶ್ವಾಸದಲ್ಲಿದ್ದರು. ಆದರೆ ಭಾರತದ ಗಾಲ್ಫರ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ದಕ್ಷಿಣ ಕೊರಿಯಾದ ಹಿಯುಂಜೊ ಯೂ ಕೂಡ ಉತ್ತಮ ಪ್ರದರ್ಶನದೊಂದಿಗೆ ಕಂಚು ಜಯಿಸಿದರು. ಸ್ಪರ್ಧಾವಳಿಯಲ್ಲಿದ್ದ ಭಾರತದ ಪ್ರಣವಿ ಅರಸ್ ಹಾಗೂ ಅವನಿ ಪ್ರಶಾಂತ್ ಟೀಮ್ ವಿಭಾಗದಲ್ಲಿ ಕ್ರಮವಾಗಿ 75 ಹಾಗೂ 76 ಅಂಕ ಗಳಿಸಿ ಭಾರತ ತಂಡವು ಒಟ್ಟಾರೆ 4ನೇ ಸ್ಥಾನ ಪಡೆಯಲು ನೆರವಾದರು. ಬೆಂಗಳೂರಿನ 2 ಬಾರಿಯ ಚಾಂಪಿಯನ್ ಅದಿತಿ ಪ್ರಸಕ್ತ ಗೇಮ್ಸ್ ನಲ್ಲಿ ಕೂದಲೆಳೆ ಅಂತರದಿಂದ ಚಿನ್ನದ ಪದಕ ವಂಚಿತರಾದರು. ಟೋಕಿಯೊ ಒಲಿಂಪಿಕ್ಸ್ನಲ್ಲಿ 4ನೇ ಸ್ಥಾನ ಪಡೆದಿದ್ದ ಅದಿತಿ ಪದಕ ವಂಚಿತರಾಗಿದ್ದರು. ಏಶ್ಯನ್ ಗೇಮ್ಸ್ನಲ್ಲಿ ಅದಿತಿ ಗೆದ್ದಿರುವ ಬೆಳ್ಳಿ ಪದಕ ಭಾರತೀಯ ಮಹಿಳಾ ಗಾಲ್ಫ್ನಲ್ಲಿನ ಮಹತ್ವದ ಸಾಧನೆಯಾಗಿದೆ. ಏಶ್ಯನ್ ಗೇಮ್ಸ್ನಲ್ಲಿ ಮಹಿಳಾ ಗಾಲ್ಫ್ನಲ್ಲಿ ಭಾರತವು ಮೊತ್ತ ಮೊದಲ ಬಾರಿ ಪದಕ ಜಯಿಸಿದೆ. ಈ ಹಿಂದೆ ಭಾರತವು 1982 ಹಾಗೂ 2002ರಲ್ಲಿ ಪುರುಷರ ಗಾಲ್ಫ್ನಲ್ಲಿ ವೈಯಕ್ತಿಕ ಚಿನ್ನದ ಪದಕ ಜಯಿಸಿತ್ತು.

ಪುರುಷರ ಲಾಂಗ್ಜಂಪ್: ಎಂ.ಶ್ರೀಶಂಕರ್ ಗೆ ಬೆಳ್ಳಿ

ಹಾಂಗ್ಝೌ:ಏಶ್ಯನ್ ಗೇಮ್ಸ್ನ ಪುರುಷರ ಲಾಂಗ್ಜಂಪ್ ಫೈನಲ್ನಲ್ಲಿ ತನ್ನ 4ನೇ ಪ್ರಯತ್ನದಲ್ಲಿ 8.19 ಮೀ.ದೂರಕ್ಕೆ ಜಿಗಿದ ಮುರಳಿ ಶ್ರೀಶಂಕರ್ ಬೆಳ್ಳಿ ಪದಕವನ್ನು ಗೆದ್ದುಕೊಂಡರು.

ಚೀನಾ ವಿರುದ್ಧ ಸೋಲು: ಬೆಳ್ಳಿ ಜಯಿಸಿದ ಭಾರತದ ಬ್ಯಾಡ್ಮಿಂಟನ್ ತಂಡ


ಹಾಂಗ್ಝೌ: ಭಾರತೀಯ ಬ್ಯಾಡ್ಮಿಂಟನ್ ತಂಡ ಬೆಳ್ಳಿ ಪದಕದೊಂದಿಗೆ ಏಶ್ಯನ್ ಗೇಮ್ಸ್ನಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ.

ರವಿವಾರ ನಡೆದ ಫೈನಲ್ನಲ್ಲಿ ಭಾರತವು ಆತಿಥೇಯ ತಂಡ ಚೀನಾದ ವಿರುದ್ಧ 2-3 ಅಂತರದಿಂದ ವೀರೋಚಿತ ಸೋಲುಂಡಿದೆ. ನಿರ್ಣಾಯಕ ಗೇಮ್ನಲ್ಲಿ ಚೀನಾದ ವೆಂಗ್ ಹಾಂಗ್ಯಾಂಗ್ ಅವರು ಭಾರತದ ಮಿಥುನ್ ಮಂಜುನಾಥ್ರನ್ನು ಮಣಿಸಿದರು. ಈ ಮೂಲಕ ಚೀನಾಕ್ಕೆ ಚಿನ್ನ ಗೆದ್ದುಕೊಟ್ಟರು.

ಭಾರತದ ಬ್ಯಾಡ್ಮಿಂಟನ್ ತಂಡ ಇದೇ ಮೊದಲ ಬಾರಿ ಏಶ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿ ಶ್ರೇಷ್ಠ ಪ್ರದರ್ಶನ ನೀಡಿದೆ.

ವಿಶ್ವದ ನಂ.7ನೇ ಆಟಗಾರ ಪ್ರಣಯ್ ಬೆನ್ನುನೋವಿನಿಂದ ಸ್ಪರ್ಧೆಯಿಂದ ಹೊರಗುಳಿದಿರುವುದು ಭಾರತದ ಗೆಲುವಿನ ಮೇಲೆ ಪ್ರಭಾವ ಬೀರಿತು. ಲಕ್ಷ್ಯ ಸೇನ್ ಮೊದಲ ಸಿಂಗಲ್ಸ್ನಲ್ಲಿ ಹೋರಾಡಿದರು. ಡಬಲ್ಸ್ ಜೋಡಿ ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು.

ಟ್ರ್ಯಾಪ್ ಶೂಟಿಂಗ್ ಇವೆಂಟ್

ಚಿನ್ನ, ಬೆಳ್ಳಿ ಜಯಿಸಿದ ಭಾರತದ ಶೂಟರ್ ಗಳು

ಹಾಂಗ್ಝೌ: ಏಶ್ಯನ್ ಗೇಮ್ಸ್ನಲ್ಲಿ ಮತ್ತೊಂದು ಸ್ಮರಣೀಯ ಪ್ರದರ್ಶನ ನೀಡಿದ ಭಾರತೀಯ ಶೂಟಿಂಗ್ ತಂಡವು ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಪುರುಷರ ಹಾಗೂ ಮಹಿಳೆಯರ ಟೀಮ್ ವಿಭಾಗದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಬಾಚಿಕೊಂಡಿದೆ. ರವಿವಾರ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಹಾಗೂ ರೆರಾವರ್ ಸಿಂಗ್ ಸಂಧು ಅವರನ್ನೊಳಗೊಂಡ ಭಾರತದ ಪುರುಷರ ತಂಡವು ಟ್ರ್ಯಾಪ್ ಶೂಟಿಂಗ್ ಸ್ಪರ್ಧಾವಳಿಯಲ್ಲಿ ಪಾರಮ್ಯ ಮೆರೆಯಿತು. ಮನಿಶಾ ಕೀರ್, ಪ್ರೀತಿ ರಜಕ್ ಹಾಗೂ ರಾಜೇಶ್ವರಿ ಕುಮಾರಿ ಮಹಿಳೆಯರ ಟ್ರ್ಯಾಪ್ ಟೀಮ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದರು. ಈ ಮೂಲಕ ಏಶ್ಯನ್ ಗೇಮ್ಸ್ನಲ್ಲಿ ಭಾರತವು ಅತ್ಯಮೋಘ ಪ್ರದರ್ಶನ ನೀಡಲು ಕಾಣಿಕೆ ನೀಡಿದರು. ಭಾರತೀಯ ಪುರುಷರ ತಂಡವು ಅರ್ಹತಾ ಸುತ್ತಿನಲ್ಲಿ ಒಟ್ಟು 361 ಸ್ಕೋರ್ ಗಳಿಸಿದೆ. ಈ ಅಮೋಘ ಪ್ರದರ್ಶನವು ಚಿನ್ನದ ಪದಕ ಗೆದ್ದುಕೊಟ್ಟಿತು. 359 ಅಂಕ ಗಳಿಸಿದ ಕುವೈಟ್ ತಂಡವು ಬೆಳ್ಳಿ ಜಯಿಸಿದರೆ, ಆತಿಥೇಯ ಚೀನಾ ತಂಡವು 354 ಅಂಕ ಗಳಿಸಿ ಕಂಚು ಗೆದ್ದುಕೊಂಡಿದೆ. ಭಾರತೀಯ ಮಹಿಳೆಯರ ಟ್ರ್ಯಾಪ್ ಶೂಟಿಂಗ್ ತಂಡ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಒಟ್ಟು 337 ಅಂಕ ಗಳಿಸಿ ಬೆಳ್ಳಿ ಪದಕ ಗೆದ್ದುಕೊಂಡಿದೆ. ಭಾರತವು ಚೀನಾದ ನಂತರ 2ನೇ ಸ್ಥಾನ ಪಡೆಯಿತು. ಚೀನಾವು 357 ಅಂಕ ಗಳಿಸಿ ವಿಶ್ವ ಹಾಗೂ ಗೇಮ್ಸ್ ದಾಖಲೆ ನಿರ್ಮಿಸಿ ಚಿನ್ನ ಜಯಿಸಿತು.



ಕಝಕ್ಸ್ತಾನದ ಶೂಟರ್ಗಳು 336 ಅಂಕ ಕಲೆ ಹಾಕಿ ಕಂಚು ಗೆದ್ದುಕೊಂಡರು. ಮಹಿಳೆಯರ ಟ್ರ್ಯಾಪ್ ಟೀಮ್ ಬೆಳ್ಳಿ ಪದಕ ಗೆಲ್ಲಲು ನೆರವಾಗಿದ್ದ ಮನೀಶಾ ಕೀರ್ ವೈಯಕ್ತಿಕ ವಿಭಾಗದಲ್ಲಿ ಫೈನಲ್ಗೆ ತಲುಪಿದ್ದಾರೆ. 114 ಅಂಕದೊಂದಿಗೆ ಇತರ ಮೂವರು ಸ್ಪರ್ಧಿಯೊಂದಿಗೆ ಟೈ ಸಾಧಿಸಿದರು. ಶೂಟ್ ಆಫ್ ಮೂಲಕ ಫೈನಲ್ನಲ್ಲಿ ಸ್ಥಾನ ಪಡೆದರು. ಕ್ರಮವಾಗಿ 122 ಹಾಗೂ 120 ಅಂಕ ಗಳಿಸಿದ್ದ ಕಿನ್ಯನ್ ಚೆನೈ ಹಾಗೂ ರೆರಾವರ್ ಸಿಂಗ್ ಸಂಧು ಪುರುಷರ ವೈಯಕ್ತಿಕ ಸ್ಪರ್ಧಾವಳಿಯಲ್ಲಿ ಫೈನಲ್ಗೆ ಅರ್ಹತೆ ಪಡೆದರು.

ಕಿನಾನ್ ಚೆನೈಗೆ ಕಂಚು


 



ಪುರುಷರ ಟ್ರ್ಯಾಪ್ ಶೂಟಿಂಗ್ನ ವೈಯಕ್ತಿಕ ವಿಭಾಗದ ಫೈನಲ್ನಲ್ಲಿ ಭಾರತದ ಶೂಟರ್ ಡೇರಿಯಸ್ ಕಿನಾನ್ ಚೆನೈ ಕಂಚಿನ ಪದಕ ಜಯಿಸಿದರು. ಈ ಮೂಲಕ ಭಾರತದ ಪದಕದ ಸಂಖ್ಯೆ ಹೆಚ್ಚಿಸಿದರು. ಗಮನಾರ್ಹ ಪ್ರದರ್ಶನ ನೀಡಿದ ಚೆನೈ ಒಟ್ಟು 32 ಅಂಕ ಗಳಿಸಿ ಕಂಚು ಜಯಿಸಿದರು. ರೆರಾವರ್ ಸಿಂಗ್ 5ನೇ ಸ್ಥಾನ ಪಡೆದರು. ಚೀನಾದ ಯಿಂಗ್ ಕಿ 46 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದರು. ಕುವೈಟ್ನ ತಲತ್ ಅಲ್ರಶೀದಿ 45 ಅಂಕದ ಮೂಲಕ ಬೆಳ್ಳಿ ಜಯಿಸಿದರು. ಕಿನಾನ್ ಕಂಚಿನ ಪದಕದ ಮೂಲಕ ಭಾರತವು ಪ್ರಸಕ್ತ ಏಶ್ಯನ್ ಗೇಮ್ಸ್ನಲ್ಲಿ ಶೂಟಿಂಗ್ ಸ್ಪರ್ಧೆಯಲ್ಲಿ 22ನೇ ಪದಕ ಜಯಿಸಿದೆ. ಇದು ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾರತದ ಶೂಟರ್ಗಳ ಸರ್ವಶ್ರೇಷ್ಠ ಪ್ರದರ್ಶನವಾಗಿದೆ.ಮಹಿಳೆಯರ ಟ್ರ್ಯಾಪ್ ಶೂಟಿಂಗ್ನ ವೈಯಕ್ತಿಕ ವಿಭಾಗದ ಫೈನಲ್ನಲ್ಲಿ ಭಾರತದ ಮನೀಶಾ ಕೀರ್ 16 ಅಂಕ ಗಳಿಸಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕೂದಲೆಳೆ ಅಂತರದಿಂದ ಪದಕ ವಂಚಿತರಾದರು.


ಪುರುಷರ 1,500 ಮೀ. ಫೈನಲ್

ಅಜಯ್ಗೆ ಬೆಳ್ಳಿ, ಜಿನ್ಸನ್ ಗೆ ಕಂಚು

ಹಾಂಗ್ಝೌ, ಅ.1: ಏಶ್ಯನ್ ಗೇಮ್ಸ್ನ ಪುರುಷರ 1,500 ಮೀ. ಓಟದ ಫೈನಲ್ನಲ್ಲಿ ಅಜಯ್ ಕುಮಾರ್ ಸರೋಜ್ ಬೆಳ್ಳಿ ಪದಕವನ್ನು ಜಯಿಸಿದರೆ, 2018ರಲ್ಲಿ ಚಿನ್ನದ ಪದಕ ವಿಜೇತ ಹಾಲಿ ಚಾಂಪಿಯನ್ ಜಿನ್ಸನ್ ಜಾನ್ಸನ್ ಕಂಚಿಗೆ ತೃಪ್ತಿಪಟ್ಟರು. ಅಜಯ್ 3:38.94 ನಿಮಿಷದಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದರೆ, ಜಿನ್ಸನ್ 3:39.74 ಸೆಕೆಂಡ್ನಲ್ಲಿ ಗುರಿ ತಲುಪಿ 3ನೇ ಸ್ಥಾನ ಪಡೆದರು. ಖತರ್ನ ಮುಹಮ್ಮದ್ ಅಲ್ಗಾರ್ನಿ (3:38.36) ಮೊದಲ ಸ್ಥಾನ ಪಡೆದರು. ಅಲಹಾಬಾದ್ ಅತ್ಲೀಟ್ ಅಜಯ್ 1,500 ಮೀ. ಓಟದಲ್ಲಿ ಇದೇ ಮೊದಲ ಬಾರಿ ಏಶ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದಿದ್ದಾರೆ.

ಹರ್ಮಿಲನ್ ಗೆ ಬೆಳ್ಳಿ


ಏಶ್ಯನ್ ಗೇಮ್ಸ್ನ ಮಹಿಳೆಯರ 1,500 ಮೀ. ಓಟದಲ್ಲಿ ಭಾರತದ ಓಟಗಾರ್ತಿ ಹರ್ಮಿಲನ್ ಬೆಳ್ಳಿ ಪದಕ ಜಯಿಸಿದರು. ಹರ್ಮಿಲನ್ 4:12.74 ಸೆಕೆಂಡ್ನಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆದರು. ಹರ್ಮಿಲನ್ ಅವರ ತಂದೆ ಹಾಗೂ ತಾಯಿ ಇಬ್ಬರೂ ಓಟಗಾರರಾಗಿದ್ದಾರೆ. ಹರ್ಮಿಲನ್ ತಂದೆ ಅಮನ್ದೀಪ್ ಬೈನ್ಸ್ 1500 ಮೀ. ಓಟದಲ್ಲಿ ದಕ್ಷಿಣ ಏಶ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದಿದ್ದಾರೆ. ಹರ್ಮಿಲನ್ ತಾಯಿ ಮಾಧುರಿ ಸಕ್ಸೇನಾ ಅವರು 2002ರ ಏಶ್ಯನ್ ಗೇಮ್ಸ್ನಲ್ಲಿ 800 ಮೀ.ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಕಂಚಿನಿಂದ ಬೆಳ್ಳಿಗೆ ಭಡ್ತಿ ಪಡೆದ ಜ್ಯೋತಿ


ಹಾಂಗ್ಝೌ, ಅ.1:ಭಾರತದ ಸ್ಟಾರ್ ಅತ್ಲೀಟ್ ಜ್ಯೋತಿ ಯರ್ರಾಜಿ ಏಶ್ಯನ್ ಗೇಮ್ಸ್ ನಲ್ಲಿ ರವಿವಾರ ನಡೆದ 100 ಮೀ.ಹರ್ಡಲ್ಸ್ ನಲ್ಲಿ 12.91 ಸೆಕೆಂಡ್ನಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. 2ನೇ ಸ್ಥಾನ ಪಡೆದಿದ್ದ ಚೀನಾದ ಸ್ಪರ್ಧಿ ಯು ಯಾನಿ ಫೈನಲ್ನಲ್ಲಿ ಸತತ 2 ಬಾರಿ ತಪ್ಪು ಆರಂಭ ಪಡೆದ ಕಾರಣ ಅನರ್ಹರಾದರು. ಈ ಹಿನ್ನೆಲೆಯಲ್ಲಿ ಜ್ಯೋತಿಗೆ ಕಂಚಿನ ಪದಕದಿಂದ ಬೆಳ್ಳಿ ಪದಕಕ್ಕೆ ಭಡ್ತಿ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News