ಏಶ್ಯನ್ ಗೇಮ್ಸ್: ಬಾಂಗ್ಲಾ ವಿರುದ್ಧ ಭಾರತದ ಫುಟ್ಬಾಲ್ ತಂಡಕ್ಕೆ ಜಯ, ನಾಕೌಟ್ ಆಸೆ ಜೀವಂತ

Update: 2023-09-21 17:45 GMT

ಸುನೀಲ್ ಚೆಟ್ರಿ| Photo: X 

ಹಾಂಗ್ಝೌ: ಏಶ್ಯನ್ ಗೇಮ್ಸ್-2023 ಕ್ರೀಡಾಕೂಟದಲ್ಲಿ ಪುರುಷರ ಫುಟ್ಬಾಲ್ ವಿಭಾಗದಲ್ಲಿ ಬಾಂಗ್ಲಾದೇಶ ವಿರುದ್ಧ 1-0 ಗೋಲು ಅಂತರದಿಂದ ಗೆಲುವು ದಾಖಲಿಸಿದ ಭಾರತ ನಾಕೌಟ್ ಹಂತದ ಪ್ರವೇಶವನ್ನು ಜೀವಂತವಾಗಿರಿಸಿದೆ.

85ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ನಾಯಕ ಸುನೀಲ್ ಚೆಟ್ರಿ ಗೆಲುವಿನ ರೂವಾರಿ ಎನಿಸಿದರು. ಈ ಮೂಲಕ ಭಾರತ ತಂಡ 3 ಅಂಕಗಳನ್ನು ಕಲೆ ಹಾಕಿದೆ.

ಎ ಗುಂಪಿನ ಪಂದ್ಯದಲ್ಲಿ ಆರಂಭದಿಂದಲೂ ಇತ್ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದ್ದು, ಮೊದಲಾರ್ಧದಲ್ಲಿ ಗೋಲು ದಾಖಲಾಗಲಿಲ್ಲ.. 2ನೇ ಅವಧಿಯಲ್ಲೂ ನಿಖರ ಪೈಪೋಟಿ ಕಂಡು ಬಂತು. ಕೊನೆಯಲ್ಲಿ ಬಾಂಗ್ಲಾ ಸವಾಲನ್ನು ಮೆಟ್ಟಿ ನಿಲ್ಲುವಲ್ಲಿ ಭಾರತ ಯಶಸ್ವಿಯಾಯಿತು.

ಎರಡು ದಿನಗಳ ಹಿಂದೆ ನಡೆದ ಮೊದಲ ಪಂದ್ಯದಲ್ಲಿ ಭಾರತವು ಆತಿಥೇಯ ಚೀನಾದ ವಿರುದ್ಧ 1-5 ಅಂತರದಿಂದ ಹೀನಾಯವಾಗಿ ಸೋತಿತ್ತು. ನಾಕೌಟ್ ಪ್ರವೇಶಿಸಲು ಮ್ಯಾನ್ಮಾರ್ ವಿರುದ್ಧ ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲೂ ಭಾರತ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.ಮ್ಯಾನ್ಮಾರ್ ತಾನಾಡಿದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 1-0 ಅಂತರದಿಂದ ಸೋಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News