ಉತ್ತಮ ಪ್ರದರ್ಶನ ಮುಂದುವರಿಸಿದ ಅತ್ಲೀಟ್ ಗಳು, 60ಕ್ಕೇರಿದ ಭಾರತದ ಪದಕದ ಗಳಿಕೆ
ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಭಾರತದ ಪದಕ ಗಳಿಕೆ 60ಕ್ಕೆ ತಲುಪಿದ್ದು ಭಾರತೀಯರು ಮಿಷನ್ 100 ಸಾಧಿಸುವ ವಿಶ್ವಾಸದಲ್ಲಿದ್ದಾರೆ. 9ನೇ ದಿನವಾದ ಸೋಮವಾರ ಅತ್ಲೀಟ್ ಗಳು ಪದಕ ಬೇಟೆ ಮುಂದುವರಿಸಿದ್ದು, ಅತ್ಲೆಟಿಕ್ಸ್ ವಿಭಾಗದಲ್ಲಿ ಭಾರತವು ಮೂರು ಬೆಳ್ಳಿ ಹಾಗೂ ಒಂದು ಕಂಚು ಜಯಿಸಿತು. ಭಾರತ ಸೋಮವಾರ ಒಟ್ಟು 7 ಪದಕಗಳನ್ನು ಗೆದ್ದುಕೊಂಡಿದೆ.
ಭಾರತದ ಪಾರುಲ್ ಚೌಧರಿ ಮಹಿಳೆಯರ 3,000 ಮೀ. ಸ್ಟೀಪಲ್ಚೇಸ್ನಲ್ಲಿ ಬೆಳ್ಳಿ ಜಯಿಸಿದರೆ, ಪ್ರೀತಿ ಲಾಂಬಾ ಕಂಚು ಜಯಿಸಿದರು. ಆ್ಯನ್ಸಿ ಸೋಜನ್ ಮಹಿಳೆಯರ ಲಾಂಗ್ಜಂಪ್ನಲ್ಲಿ ಬೆಳ್ಳಿಗೆ ಮುತ್ತಿಟ್ಟರು. 4-400 ಮೀ. ಮಿಕ್ಸೆಡ್ ರಿಲೇಯಲ್ಲಿ ಭಾರತವು ಎರಡನೇ ಸ್ಥಾನ ಪಡೆಯಿತು. ಇದಕ್ಕೂ ಮೊದಲು ಸುತೀರ್ಥ ಮುಖರ್ಜಿ ಹಾಗೂ ಅಹಿಕಾ ಮುಖರ್ಜಿ ಮಹಿಳೆಯರ ಡಬಲ್ಸ್ ನಲ್ಲಿ ಕಂಚು ಜಯಿಸಿ ಗೇಮ್ಸ್ ನಲ್ಲಿ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾರತಕ್ಕೆ 3ನೇ ಪದಕ ಗೆದ್ದುಕೊಟ್ಟರು. ಭಾರತವು ಸ್ಕೇಟಿಂಗ್ ನಲ್ಲಿ 2 ಕಂಚು ಜಯಿಸಿತು. ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತದ ಪುರುಷರ ಹಾಕಿ ತಂಡ ಸೆಮಿ ಫೈನಲ್ ಗೆ ಪ್ರವೇಶಿಸಿತು.
► ಭಾರತದ 4-400 ಮೀ. ರಿಲೇ ತಂಡಕ್ಕೆ ಬೆಳ್ಳಿ
ಏಶ್ಯನ್ ಗೇಮ್ಸ್ ನಲ್ಲಿ 100 ಮೀ. ಹರ್ಡಲ್ಸ್ ನಲ್ಲಿ ಜ್ಯೋತಿ ಯರ್ರಾಜಿಯವರು ಕಂಚಿನ ಪದಕದಿಂದ ಬೆಳ್ಳಿ ಪದಕಕ್ಕೆ ಭಡ್ತಿ ಪಡೆದ ಮರುದಿನ ಭಾರತವು ಅದೇ ರೀತಿಯ ಮತ್ತೊಂದು ಘಟನೆಗೆ ಸಾಕ್ಷಿಯಾಯಿತು. ಸೋಮವಾರ 3ನೇ ಸ್ಥಾನ ಪಡೆದಿದ್ದ ಭಾರತದ 4-400 ಮೀ. ಮಿಕ್ಸೆಡ್ ರಿಲೇ ತಂಡವು 2ನೇ ಸ್ಥಾನಕ್ಕೆ ಭಡ್ತಿ ಪಡೆಯಿತು.
ಮುಹಮ್ಮದ್ ಅಜ್ಮಲ್, ವಿಥಿ ರಾಮರಾಜ್, ರಾಜೇಶ್ ರಮೇಶ್ ಹಾಗೂ ಶುಭಾ ವೆಂಕಟೇಶನ್ ಅವರನ್ನೊಳಗೊಂಡ ಮಿಕ್ಸೆಡ್ ಟೀಮ್ 4-400 ಮೀ.ರಿಲೇ ತಂಡಕ್ಕೆ ಇಂದು ಅದೃಷ್ಟ ಖುಲಾಯಿಸಿದ್ದು 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಭಡ್ತಿ ಪಡೆಯಿತು.
ಇದಕ್ಕೂ ಮೊದಲು ಭಾರತೀಯ ತಂಡವು 3:14.34 ಸೆಕೆಂಡ್ ನಲ್ಲಿ ಗುರಿ ತಲುಪಿ ಕಂಚಿನ ಪದಕ ಜಯಿಸಿತು. ಆದರೆ ಭಾರತವನ್ನು ಹಿಂದಿಕ್ಕಿ 3:14.25 ಸೆಕೆಂಡ್ನಲ್ಲಿ ಗುರಿ ತಲುಪಿದ್ದ ಶ್ರೀಲಂಕಾ 2ನೇ ಸ್ಥಾನ ಪಡೆದು ಬೆಳ್ಳಿ ಗೆದ್ದಿತ್ತು. ಆದರೆ ಲಂಕಾ ಕ್ರೀಡಾಳುಗಳ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ಶ್ರೀಲಂಕಾ ಅತ್ಲೀಟ್ಗಳು ಗೆರೆಯನ್ನು ಮೀರಿದ್ದರಿಂದ ಅನರ್ಹಗೊಂಡರು. ಈಹಿನ್ನೆಲೆಯಲ್ಲಿ 3:24.85 ಸೆಕೆಂಡ್ನಲ್ಲಿ ಗುರಿ ತಲುಪಿ 4ನೇ ಸ್ಥಾನ ಪಡೆದಿದ್ದ ಕಝಕ್ಸ್ತಾನ 3ನೇ ಸ್ಥಾನಕ್ಕೆ ಭಡ್ತಿ ಪಡೆದು ಕಂಚು ಜಯಿಸಿದೆ. ಬಹರೈನ್ ಓಟಗಾರರು 3:14.02 ಸೆಕೆಂಡ್ನಲ್ಲಿ ಗುರಿ ತಲುಪಿ ಚಿನ್ನ ಗೆದ್ದುಕೊಂಡರು.
► ಟೇಬಲ್ ಟೆನಿಸ್: ಭಾರತಕ್ಕೆ ಐತಿಹಾಸಿಕ ಕಂಚು
ಅಹಿಕಾ ಮುಖರ್ಜಿ ಹಾಗೂ ಸುತೀರ್ಥ ಮುಖರ್ಜಿ ಅವರನ್ನೊಳಗೊಂಡ ಭಾರತದ ಟೇಬಲ್ ಟೆನಿಸ್ ಜೋಡಿ ಏಶ್ಯನ್ ಗೇಮ್ಸ್ ನಲ್ಲಿ ಸೋಮವಾರ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿತು. ಭಾರತವು ಏಶ್ಯನ್ ಗೇಮ್ಸ್ ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಇದೇ ಮೊದಲ ಬಾರಿ ಪದಕ ಗೆದ್ದುಕೊಂಡು ಇತಿಹಾಸ ನಿರ್ಮಿಸಿದೆ.
ಪಶ್ಚಿಮಬಂಗಾಳದ ಅಹಿಕಾ ಹಾಗೂ ಸುತೀರ್ಥ ಸೆಮಿ ಫೈನಲ್ ಗೆ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿದ್ದರು. ಎರಡು ದಶಕಗಳ ಹಿಂದೆ ಚಿಕ್ಕಂದಿನಲ್ಲೇ ಏಶ್ಯನ್ ಗೇಮ್ಸ್ ನಲ್ಲಿ ಆಡುವ ಕನಸು ಕಂಡಿದ್ದರು. ಇದೀಗ ಪದಕ ಗೆಲ್ಲುವ ಮೂಲಕ ತಮ್ಮ ಕನಸನ್ನು ತಮ್ಮದೇ ಶೈಲಿಯಲ್ಲಿ ಈಡೇರಿಸಿಕೊಂಡರು.
ಸೋಮವಾರ ನಡೆದ ಸೆಮಿ ಫೈನಲ್ ನಲ್ಲಿ ಅಹಿಕಾ ಹಾಗೂ ಸುತೀರ್ಥ ಉತ್ತರ ಕೊರಿಯಾದ ಚಾ ಸುಯೊಂಗ್ ಹಾಗೂ ಪಾಕ್ ಸುಯೊಂಗ್ ವಿರುದ್ಧ ಸೋಲುಂಡಿದ್ದಾರೆ. ಕೊರಿಯಾ ಜೋಡಿಯು 7-11, 11-8, 7-11, 11-8, 11-9, 5-11,11-2 ಅಂತರದಿಂದ ಗೆಲುವು ದಾಖಲಿಸಿದೆ.
ನಾವಿಬ್ಬರು ಸಹೋದರಿಯರಲ್ಲ. ಆದರೆ, ನಮ್ಮದು ಒಂದೇ ರೀತಿಯ ಸರ್ ನೇಮ್ ಇದೆ. ನಾವಿಬ್ಬರೂ ಚಿಕ್ಕಂದಿನಿಂದಲೂ ಪರಿಚಿತರು, ಒಟ್ಟಿಗೆ ಆಡುತ್ತಿದ್ದೇವೆ. ಹೀಗಾಗಿ ಇಬ್ಬರಿಗೂ ಅರ್ಥ ಮಾಡಿಕೊಳ್ಳಲು ಸುಲಭವಾಗಿದೆ. ಆಕೆ ನನ್ನ ಮನಸ್ಸನ್ನು, ನಾನು ಆಕೆಯ ಮನಸ್ಸನ್ನು ಪರಸ್ಪರ ಅರಿತುಕೊಂಡು ಆಡುವೆವು. ವಿಶ್ವಶ್ರೇಷ್ಠ ಆಟಗಾರ್ತಿಯರ ವಿರುದ್ಧ ಆಡುತ್ತಿರುವ ಕುರಿತು ಹಾಗೂ ಸೋಲಿನ ಬಗ್ಗೆ ನಮಗೆ ಚಿಂತೆ ಇಲ್ಲ ಎಂದು ಅಹಿಕಾ ಹೇಳಿದ್ದಾರೆ.
ಅವರಿಬ್ಬರು(ಅಹಿಕಾ ಹಾಗೂ ಸುತೀರ್ಥ)ಒಂದೇ ಕ್ಲಬ್ ನಲ್ಲಿ ಆಡುತ್ತಿದ್ದರು. ಅವರಿಬ್ಬರ ಸ್ನೇಹ 20 ವರ್ಷಗಳ ಹಳೆಯದು. ಅವರಿಬ್ಬರು ತಮ್ಮನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ.ಹೀಗಾಗಿ ಅವರ ಬಾಂಧವ್ಯ ಗಟ್ಟಿಯಾಗಿದೆ ಎಂದು ಕೋಚ್ ಮಮತಾ ಪ್ರಭು ಹೇಳಿದ್ದಾರೆ.
► 3,000 ಮೀ. ಸ್ಟೀಪಲ್ಚೇಸ್: ಪಾರುಲ್ ಚೌಧರಿಗೆ ಬೆಳ್ಳಿ, ಪ್ರೀತಿಗೆ ಕಂಚು
ಹಾಂಗ್ ಝೌ: ಏಶ್ಯನ್ ಗೇಮ್ಸ್ ನಲ್ಲಿ ಸೋಮವಾರ ನಡೆದ ಮಹಿಳೆಯರ 3,000 ಮೀ. ಸ್ಟೀಪಲ್ಚೇಸ್ ಸ್ಪರ್ಧೆಯಲ್ಲಿ ಭಾರತದ ಪಾರುಲ್ ಚೌಧರಿ ಬೆಳ್ಳಿ ಪದಕ ಗೆದ್ದುಕೊಂಡರೆ, ಚೌಧರಿಯ ಸಹ ಆಟಗಾರ್ತಿ ಪ್ರೀತಿ ಕಂಚಿನ ಪದಕ ಜಯಿಸಿದರು.
9:27.63 ಸೆಕೆಂಡ್ ನಲ್ಲಿ ಗುರಿ ತಲುಪಿದ ಪಾರುಲ್ ಬೆಳ್ಳಿ ಪದಕ ಜಯಿಸಿದರು. ಪಾರುಲ್ ಗೆ ಪೈಪೋಟಿ ನೀಡಿದ್ದ ಪ್ರೀತಿ ಜೀವನಶ್ರೇಷ್ಠ ಸಾಧನೆಯೊಂದಿಗೆ( 9:43.32 ಸೆಕೆಂಡ್) ಕಂಚಿಗೆ ತೃಪ್ತಿಪಟ್ಟರು.
ಬಹರೈನಿನ ವಿಲ್ಫ್ರೆಡ್ ಮುಟಿಲ್ ಯಾವಿ ಚಿನ್ನದ ಪದಕ ಜಯಿಸಿದರು. 9:18.28 ಸೆಕೆಂಡ್ ನಲ್ಲಿ ಗುರಿ ತಲುಪಿದ ವಿಲ್ಫ್ರೆಡ್ ಗೇಮ್ಸ್ ನಲ್ಲಿ ದಾಖಲೆ ನಿರ್ಮಿಸಿದರು.
ಈ ವರ್ಷದ ಆಗಸ್ಟ್ ನಲ್ಲಿ ಬುಡಾಪೆಸ್ಟ್ ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ 9:15.31 ಸೆಕೆಂಡಿನಲ್ಲಿ ಗುರಿ ತಲುಪಿದ್ದ ಪಾರುಲ್ 3000 ಮೀ. ಸ್ಟೀಪಲ್ಚೇಸ್ ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಈ ಮೂಲಕ 2024ರ ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು.
► ಮಹಿಳೆಯರ ಲಾಂಗ್ ಜಪ್: ಬೆಳ್ಳಿ ಜಯಿಸಿದ ಆ್ಯನ್ಸಿ ಸೋಜನ್
ಹಾಂಗ್ ಝೌ : ಏಶ್ಯನ್ ಗೇಮ್ಸ್ ನಲ್ಲಿ ಸೋಮವಾರ ಮಹಿಳೆಯರ ಲಾಂಗ್ಜಂಪ್ನಲ್ಲಿ ಭಾರತದ ಕ್ರೀಡಾಪಟು ಆ್ಯನ್ಸಿ ಸೋಜನ್ ಬೆಳ್ಳಿ ಪದಕ ಗೆದ್ದುಕೊಂಡರು. ಸೋಜನ್ ಫೈನಲ್ ನಲ್ಲಿ ತನ್ನ 5ನೇ ಪ್ರಯತ್ನದಲ್ಲಿ 6.63 ಮೀ.ದೂರಕ್ಕೆ ಜಿಗಿದು ಎರಡನೇ ಸ್ಥಾನ ಗಿಟ್ಟಿಸಿಕೊಂಡರು.
ಆ್ಯನ್ಸಿ ಎರಡು ಬಾರಿ ತನ್ನ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಉತ್ತಮಪಡಿಸಿಕೊಂಡರು. ಚೀನಾದ ಶಿಖಿ ಕ್ಸಿಯೊಂಗ್ (6.73 ಮೀ.)ಚಿನ್ನದ ಪದಕ ಜಯಿಸಿದರು. ವಿಯೆಟ್ನಾಂನ ಯಾನ್ ಯುಇ (6.50 ಮೀ.)ಕಂಚಿನ ಪದಕ ಗೆದ್ದುಕೊಂಡರು. ಆ್ಯನ್ಸಿ 3ನೇ ಪ್ರಯತ್ನದಲ್ಲಿ ತನ್ನ ವೈಯಕ್ತಿಕ ಶ್ರೇಷ್ಠ ಪ್ರದರ್ಶನ(6.56 ಮೀ.)ನೀಡಿದರು. ಇದನ್ನು ತನ್ನ 5ನೇ ಪ್ರಯತ್ನದಲ್ಲಿ ಉತ್ತಮಪಡಿಸಿಕೊಂಡರು.
ಸ್ಪರ್ಧೆಯಲ್ಲಿದ್ದ ಭಾರತದ ಇನ್ನೋರ್ವ ಲಾಂಗ್ಜಂಪ್ ತಾರೆ ಶೈಲಿ ಸಿಂಗ್ 6.48 ಮೀ. ದೂರಕ್ಕೆ ಜಿಗಿದು 5ನೇ ಸ್ಥಾನ ಪಡೆದು ನಿರಾಶದಾಯಕ ಪ್ರದರ್ಶನ ನೀಡಿದರು. ಪುರುಷರ 200 ಮೀ. ಓಟದಲ್ಲಿ ಭಾರತದ ಅಮ್ಲಾನ್ ಬೊರ್ಗೊಹೈನ್ 20.98 ಸೆಕೆಂಡ್ನಲ್ಲಿ ಗುರಿ ತಲುಪಿ 6ನೇ ಸ್ಥಾನ ಪಡೆದರು. ಜಪಾನಿನ ಕೊಕಿ (20.60 ಸೆ.)ಚಿನ್ನ ಜಯಿಸಿದರು. ಸೌದಿ ಅರೇಬಿಯದ ಮುಹಮ್ಮದ್ ಅಬ್ದುಲ್ಲಾ(20.63 ಸೆ.)ಬೆಳ್ಳಿ ಪದಕ ಜಯಿಸಿದರೆ ಚೈನೀಸ್ ತೈಪೆಯ ಯಾಂಗ್ ಚುನ್-ಹಾನ್(20.74)ಕಂಚು ಗೆದ್ದುಕೊಂಡರು.