ವಿಶ್ವಕಪ್‌ನಲ್ಲಿ ಫೀನಿಕ್ಸ್‌ನಂತೆ ಎದ್ದು ಬಂದ ಆಸ್ಟ್ರೇಲಿಯ

Update: 2023-11-19 17:53 GMT

Photo:x//@cricketworldcup

ಅಹಮದಾಬಾದ್‌ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಆತಿಥೇಯ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯ ಪಯಣ ವಿಶ್ವಕಪ್‌ನಲ್ಲಿ ಅಷ್ಟೇನೂ ಚೆನ್ನಾಗಿರಲಿಲ್ಲ. ಆರಂಭಿಕ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದ ಆಸ್ಟ್ರೇಲಿಯ ವಿಶ್ವಕಪ್‌ನಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಅನುಮಾನವಿತ್ತು. ಆದರೆ ಲೀಗ್‌ ಮುಗಿಸಿದ ಆಸ್ಟ್ರೇಲಿಯದ ವಿಶ್ವಕಪ್‌ ಪಯಣ ಕ್ರಿಕೆಟ್‌ ಜಗತ್ತೇ ಅಚ್ಚರಿಯನ್ನುಂಟು ಮಾಡಿತು.

ಅ.8ರಂದು ಭಾರತದ ವಿರುದ್ಧ ವಿಶ್ವಕಪ್‌ ಪಯಣ ಆರಂಭಿಸಿದ ಆಸ್ಟ್ರೇಲಿಯ 6 ವಿಕೆಟ್‌ ಗಳಿಂದ ಸೋಲೊಪ್ಪಿಕೊಂಡಿತು. ಬಳಿಕ ಅ.12ಕ್ಕೆ ದಕ್ಷಿಣ ಆಫ್ರಿಕ ವಿರುದ್ಧ 134 ರನ್‌ ಗೆ ಸೋತಿತು. ಆಗಷ್ಟೇ ಭಾರತ ವಿರುದ್ಧ ಸರಣಿ ಮುಗಿಸಿದ್ದ ಆಸ್ಟ್ರೇಲಿಯ ತಂಡದ ಕಳಪೆ ಪ್ರದರ್ಶನ ಅದು ಮುಂದಿನ ಹಂತಕ್ಕೆ ತೇರ್ಗಡೆಯಾಗುವುದೇ ಎನ್ನುವ ಪ್ರಶ್ನೆ ಹುಟ್ಟುಹಾಕಿತ್ತು. ಬಳಿಕ ಅ.16ರಂದು ಶ್ರೀಲಂಕ ವಿರುದ್ಧ 5 ವಿಕೆಟ್‌ಗಳಿಂದ ಗೆದ್ದ ಆಸ್ಟ್ರೇಲಿಯ ವಿಶ್ವಕಪ್‌ನಲ್ಲಿ ಫೀನಿಕ್ಸ್‌ ಹಕ್ಕಿಯಂತೆ ಎದ್ದು ನಿಂತಿತು. ಬಳಿಕ ಒಂದೇ ಒಂದು ಪಂದ್ಯ ಸೋಲದ, ನಿಧಾನವಾಗಿ ರಕ್ಷಣಾತ್ಮಕ ಆಟ ಪ್ರದರ್ಶಿಸಿದ ಆಸ್ಟ್ರೇಲಿಯಾ ಹಂತ ಹಂತವಾಗಿ ವಿಶ್ವಕಪ್‌ ನಲ್ಲಿ ತಾನೂ ಬಲಿಷ್ಟ ತಂಡ ಎಂದು ತೋರಿಸಿಕೊಟ್ಟಿತು. 

ಪ್ರಸಕ್ತ ವಿಶ್ವಕಪ್‌ನಲ್ಲಿ ಒನ್‌ ಮ್ಯಾನ್‌ ಆರ್ಮಿಯಂತೆ ನಿಂತು ಅಫ್ಘಾನಿಸ್ತಾನದ ವಿರುದ್ಧ ಅಬ್ಬರದ 201 ರನ್‌ ಗಳೊಂದಿಗೆ ದ್ವಿಶತಕ ಬಾರಿಸಿ ಪಂದ್ಯ ಗೆಲ್ಲಿಸಿಕೊಟ್ಟ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಸ್ಟ್ರೇಲಿಯದ ರನ್‌ ಬೋರ್ಗರೆತಕ್ಕೆ ಮುನ್ನುಡಿ ಹಾಕಿಕೊಟ್ಟರು. ಬಳಿಕ ಬಾಂಗ್ಲಾದೇಶದ ವಿರುದ್ಧ 177 ರನ್‌ ಗಳಿಸಿದ ಮಿಷೆಲ್‌ ಮಾರ್ಶ್‌ ಆಸ್ಟ್ರೇಲಿಯ ತಂಡದೊಳಗಿರುವ ಆಲ್‌ ರೌಂಡರ್‌ಗಳನ್ನು ಕ್ರಿಕೆಟ್‌ ಜಗತ್ತಿಗೆ ತೋರಿಸಿಕೊಟ್ಟಿತು. ಭಾರತದ ವಿರುದ್ಧ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯ ಬ್ಯಾಟರ್ ಟ್ರಾವೆಸ್‌ ಹೆಡ್‌ ಬಗ್ಗೆ ಭಾರತ ತಂಡ ನಿರೀಕ್ಷೆಯೇ ಇಟ್ಟುಕೊಂಡಿರಲಿಲ್ಲ. ಆದರೆ ತಂಡ ಆಘಾತಕ್ಕೊಳಗಾದಾಗ ಹೆಡ್‌ ಟು ಹೆಡ್‌ ಕೊಟ್ಟು ಆಟ ಪ್ರದರ್ಶಿಸಿದ ಟ್ರಾವೆಸ್‌ ಹೆಡ್‌ ಆಸ್ಟ್ರೇಲಿಯಗೆ 6 ನೇ ವಿಶ್ವಕಪ್‌ ಗೆಲ್ಲಲು ಕಾರಣರಾದರು. 

ಇತ್ತೀಚಿಗಷ್ಟೇ ಮಾಧ್ಯಮವೊಂದಕ್ಕೆ ಸಂದರ್ಶ ನೀಡಿದ್ದ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌, ಆಸ್ಟ್ರೇಲಿಯ ತಂಡವನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಒತ್ತಡ ನಿಭಾಯಿಸುವುದು ಹೇಗೆಂದು ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಭಾರತ ಕ್ರಿಕೆಟ್‌ ತಂಡಕ್ಕೆ ಕಿವಿಮಾತು ಹೇಳಿದ್ದರು. ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಒತ್ತಡಕ್ಕೆ ಸಿಲುಕಿದಾಗ, ತಂಡದ ಬ್ಯಾಟರ್‌ಗಳು ಅದನ್ನು ನಿಭಾಯಿಸಿದ ರೀತಿ ಯುವರಾಜ್‌ ಸಿಂಗ್‌ ಮಾತು ಅಕ್ಷರಶಃ ನಿಜವಾಗಿಸಿತು. 47 ರನ್‌ ಗೆ 3 ಪ್ರಮುಖ ವಿಕೆಟ್‌ ಕಳೆದುಕೊಂಡಿದ್ದ ತಂಡದವನ್ನು ಟ್ರಾವೆಸ್‌ ಹೆಡ್‌ ದಡಕ್ಕೆ ತಲುಪಿಸಿದ ಮರು ಹೋರಾಟದ ಹಾದಿ ಭಾರತದ ವಿಶ್ವಕಪ್‌ ಕನಸನ್ನು ಭಗ್ನವಾಗಿಸಿತು. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News