ಕ್ರಿಸ್ಮಸ್‌ಗಿಂತ ಮೊದಲು ನಡೆಯುವ 3ನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾಕ್ಕೆ ಸವಾಲಾಗಲಿದೆ ಆಸ್ಟ್ರೇಲಿಯ

Update: 2024-12-11 15:07 GMT

PC : PTI 

ಬ್ರಿಸ್ಬೇನ್ : ಇತ್ತೀಚೆಗಿನ ವರ್ಷಗಳಲ್ಲಿ ಕ್ರಿಸ್ಮಸ್‌ಗಿಂತ ಮೊದಲು ಹಾಗೂ ಆ ನಂತರ ಗಾಬಾ ಕ್ರೀಡಾಂಗಣದಲ್ಲಿ ನಡೆದಿರುವ ಟೆಸ್ಟ್ ಪಂದ್ಯಗಳಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡ ಮಿಶ್ರ ಫಲಿತಾಂಶವನ್ನು ಪಡೆದಿದೆ.

ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್(ಎಎಪಿ)ವರದಿಯ ಪ್ರಕಾರ, ಗಾಬಾ ಕ್ರೀಡಾಂಗಣವು ಕ್ರಿಸ್ಮಸ್ ನಂತರ ಕೇವಲ ಐದು ಟೆಸ್ಟ್ ಪಂದ್ಯಗಳ ಆತಿಥ್ಯವಹಿಸಿದ್ದು, ಆಸ್ಟ್ರೇಲಿಯವು ಕಳೆದ ಮೂರು ವರ್ಷಗಳಲ್ಲಿ ಆ ಐದು ಪಂದ್ಯಗಳಲ್ಲಿ 3ರಲ್ಲಿ ಸೋಲು ಅನುಭವಿಸಿದೆ. 2021ರಲ್ಲಿ ಭಾರತ ವಿರುದ್ಧ ಹಾಗೂ ಈ ವರ್ಷ ವೆಸ್ಟ್‌ಇಂಡೀಸ್ ವಿರುದ್ಧ ಸೋಲುಂಡಿದೆ. ಈ ಎರಡು ಪಂದ್ಯಗಳನ್ನು ಜನವರಿಯಲ್ಲಿ ಆಡಲಾಗಿತ್ತು.

ಇದಕ್ಕೆ ವ್ಯತಿರಿಕ್ತವಾಗಿ ಆಸ್ಟ್ರೇಲಿಯ ತಂಡವು ಕ್ರಿಸ್ಮಸ್‌ಗಿಂತ ಮೊದಲು 61 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಆಸ್ಟ್ರೇಲಿಯ ಕೇವಲ 7 ಬಾರಿ ಮಾತ್ರ ಸೋಲುಂಡಿತ್ತು. 2021ರಲ್ಲಿ ಭಾರತ ವಿರುದ್ಧ ಸೋಲುವ ತನಕ 1988ರಿಂದ ಗಾಬಾ ಕ್ರೀಡಾಂಗಣದಲ್ಲಿ ಸೋತಿರಲಿಲ್ಲ. ಬ್ರಿಸ್ಬೇನ್ ಕ್ರೀಡಾಂಗಣವು ಆಸ್ಟ್ರೇಲಿಯದ ಪಾಲಿಗೆ ಅದೃಷ್ಟದ ಅಂಗಣವಾಗಿದೆ.

ಗಾಬಾ ಕ್ರೀಡಾಂಗಣವು ಸಾಂಪ್ರದಾಯಿಕವಾಗಿ ವೇಗದ ಬೌಲಿಂಗ್ ಸ್ನೇಹಿ ಪಿಚ್ ಹೊಂದಿದ್ದು, ಆತಿಥೇಯ ತಂಡದ ವೇಗಿಗಳಿಗೆ ನೆರವಾಗಲಿದ್ದು, ಪ್ರವಾಸಿ ಬ್ಯಾಟರ್‌ಗಳಿಗೆ ಸವಾಲಾಗಲಿದೆ.

ಡಿಸೆಂಬರ್ 14ರಿಂದ ಆರಂಭವಾಗಲಿರುವ 3ನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಮಳೆಯ ಮುನ್ಸೂಚನೆಯು ಪಿಚ್‌ಗೆ ಇನ್ನಷ್ಟು ತಿರುವು ನೀಡಬಹುದು.

ವರ್ಷದ ವಿವಿಧ ಸಮಯ ಖಂಡಿತವಾಗಿಯೂ ಪಿಚ್ ಅನ್ನು ಭಿನ್ನವಾಗಿಸುತ್ತದೆ ಎಂದು ಗಾಬಾ ಪಿಚ್ ಕ್ಯುರೇಟರ್ ಡೇವಿಡ್ ಸ್ಯಾಂಡುರ್‌ಸ್ಕಿ ಹೇಳಿದ್ದಾರೆ.

ಪರ್ತ್ ಟೆಸ್ಟ್‌ನಲ್ಲಿ ಭಾರತ ಕ್ರಿಕೆಟ್ ತಂಡವು 295 ರನ್ ಅಂತರದಿಂದ ಗೆದ್ದ ನಂತರ ಅಡಿಲೇಡ್‌ನಲ್ಲಿ ನಡೆದ ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ತಂಡವು 10 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿ ಸರಣಿಯನ್ನು 1-1ರಿಂದ ಸಮಬಲಗೊಳಿಸಿತ್ತು. ಕೊನೆಯ 3 ಟೆಸ್ಟ್ ಪಂದ್ಯಗಳು ಸಾಂಪ್ರದಾಯಿಕ ಕೆಂಪು ಚೆಂಡಿನಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News