ಭಾರತ ವಿರುದ್ಧ ಪಂದ್ಯದಲ್ಲಿ ಬಾಬರ್ ಹೆದರಿದವರಂತೆ ಕಂಡು ಬಂದರು: ಮೊಯಿನ್ ಖಾನ್

Update: 2023-10-17 16:48 GMT

Photo: twitter/babarazam258

ಕರಾಚಿ: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಮ್‌ನಲ್ಲಿ ಶನಿವಾರ ಪಾಕಿಸ್ತಾನ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ 7 ವಿಕೆಟ್‌ಗಳಿಂದ ಸೋತ ಹಿನ್ನೆಲೆಯಲ್ಲಿ ಬಾಬರ್ ಆಝಮ್ ನಾಯಕತ್ವವನ್ನು ಟೀಕಿಸಿರುವ ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮೊಯಿನ್ ಖಾನ್, ಬಾಬರ್ ಓರ್ವ ಪುಕ್ಕಲ ನಾಯಕ. ಭಾರತ ವಿರುದ್ಧದ ಪಂದ್ಯದಲ್ಲಿ ಅವರು ಹೆದರಿಕೊಂಡವರಂತೆ ಕಂಡುಬಂದರು ಎಂದಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 42.5 ಓವರ್‌ಗಳಲ್ಲಿ ಕೇವಲ 191 ರನ್‌ಗೆ ಆಲೌಟಾಗಿತ್ತು. ಮುಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸುವ ಮೊದಲು ಬಾಬರ್ 58 ಎಸೆತಗಳಲ್ಲಿ 50 ರನ್ ಗಳಿಸಿದ್ದರು.

ಬಾಬರ್ ಬ್ಯಾಟಿಂಗ್ ನೈಜತೆಯಿಂದ ಕೂಡಿರಲಿಲ್ಲ. ಅವರು 50 ರನ್ ಗಳಿಸಲು 58 ಎಸೆತಗಳನ್ನು ಎದುರಿಸಿದರು. ಅವರು ಸ್ವಲ್ಪ ಮಟ್ಟಿಗಾದರೂ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬೇಕಿತ್ತು, ಎಂದು ಪಾಕಿಸ್ತಾನದ ಪರ 69 ಟೆಸ್ಟ್ ಹಾಗೂ 219 ಏಕದಿನ ಪಂದ್ಯಗಳನ್ನು ಆಡಿರುವ ಮೊಯಿನ್ ಖಾನ್ ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ನಾಯಕನಾದವನು ಹೆದರಿದವರಂತೆ ಕಂಡುಬಂದು ತನ್ನ ಆಟ ಆಡದೇ ಇದ್ದಾಗ ತಂಡದಲ್ಲಿರುವ ಇತರ ಆಟಗಾರರು ಅವರನ್ನೇ ಅನುಸರಿಸುತ್ತಾರೆ ಎಂದು ಮೊಯಿನ್ ಖಾನ್ ಹೇಳಿದ್ದಾರೆ.

ಭಾರತ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವು ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತ್ತು. ದೊಡ್ಡ ಮೊತ್ತ ಗಳಿಸುವ ವಿಶ್ವಾಸದಲ್ಲಿತ್ತು. ಆದರೆ ಕೇವಲ 36 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡು ನಾಟಕೀಯ ಕುಸಿತ ಕಂಡಿತ್ತು.

ಪಾಕ್ ಆಟಗಾರರು ಒತ್ತಡದಲ್ಲಿದ್ದಂತೆ ಕಂಡುಬಂದರು. ಅವರು ಸರಿಯಾದ ಹೊಡೆತವನ್ನು ಬಾರಿಸಲಿಲ್ಲ ಎನ್ನುವುದು ಸ್ಪಷ್ಟ. ನೀವು ಮೊದಲೇ ಹೆದರಿಕೊಂಡಿದ್ದರೆ ಹೊಡೆತವನ್ನು ಬಾರಿಸಿದರೆ ಔಟ್ ಆಗುತ್ತೇನೆಂದು ಯೋಚನೆ ಬರುತ್ತದೆ. ಯಾವುದೇ ಬ್ಯಾಟರ್‌ಗಳಲ್ಲಿ ಪಂದ್ಯ ಗೆಲ್ಲಬೇಕೆಂಬ ಛಲ ಕಂಡುಬರಲಿಲ್ಲ ಎಂದು ಮೊಯಿನ್ ಖಾನ್ ಹೇಳಿದರು.

ಭಾರತವು ಅ.19ರಂದು ಪುಣೆಯಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಪಾಕಿಸ್ತಾನವು ಅ. 20ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ.

ಬಾಬರ್ ಬಳಿ ಯಾವುದೇ ಪ್ಲ್ಯಾನ್ ಇಲ್ಲ: ಮಲಿಕ್

ಹಿರಿಯ ಆಲ್‌ರೌಂಡರ್ ಶುಐಬ್ ಮಲಿಕ್ ಕೂಡ ಬಾಬರ್ ನಾಯಕತ್ವವನ್ನು ಪ್ರಶ್ನಿಸಿದ್ದಾರೆ. ಅಗ್ರ ರ್ಯಾಂಕಿನ ತಂಡಗಳ ವಿರುದ್ಧ ಬಾಬರ್ ಬಿ ಹಾಗೂ ಸಿ ಪ್ಲ್ಯಾನ್ ಹೊಂದಿಲ್ಲ ಎಂದಿದ್ದಾರೆ.

ಬಾಬರ್ ಶೋವನ್ನು ನಡೆಸಿಕೊಡುತ್ತಿದ್ದಾರೆ. ಅದು ಅವರ ಜವಾಬ್ದಾರಿಯಾಗಿದೆ. ಆಟಗಾರರೊಂದಿಗೆ ಕುಳಿತು ಚರ್ಚಿಸಬೇಕು. ಬಿ ಹಾಗೂ ಸಿ ಪ್ಲ್ಯಾನ್‌ಗಳಿರಬೇಕು. ನೀವು ಬಲಿಷ್ಠ ತಂಡಗಳೆದುರು ಆಡುವಾಗ ಅವರು ನಿಮ್ಮ ಎ ಪ್ಲ್ಯಾನ್ ವಿರುದ್ಧ ಪ್ರತಿ ದಾಳಿ ನಡೆಸುತ್ತಾರೆ. ನಿಮ್ಮಲ್ಲಿ ಅದಕ್ಕೆ ಉತ್ತರ ಇರುವುದಿಲ್ಲ ಎಂದು ಮಲಿಕ್ ಹೇಳಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News