ಏಶ್ಯ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್‌ಶಿಪ್: ಐತಿಹಾಸಿಕ ಪದಕ ಖಚಿತಪಡಿಸಿದ ಭಾರತದ ಮಹಿಳಾ ತಂಡ

Update: 2024-02-16 17:14 GMT

Photo | PTI

ಕೌಲಾಲಂಪುರ: ಹಾಂಕಾಂಗ್ ತಂಡವನ್ನು ಕ್ವಾರ್ಟರ್ ಫೈನಲ್‌ನಲ್ಲಿ 3-0 ಅಂತರದಿಂದ ಮಣಿಸಿರುವ ಭಾರತದ ಮಹಿಳಾ ಶಟ್ಲರ್‌ಗಳು ಏಶ್ಯ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಚೊಚ್ಚಲ ಪದಕ ಖಚಿತಪಡಿಸಿದರು.

ಗ್ರೂಪ್ ಹಂತದಲ್ಲಿ ಅಗ್ರ ಶ್ರೇಯಾಂಕದ ಚೀನಾಕ್ಕೆ ಸೋಲುಣಿಸಿ ಶಾಕ ನೀಡಿದ ನಂತರ ಶುಕ್ರವಾರ ನಡೆದ ಅಂತಿಮ-8ರ ಪಂದ್ಯದಲ್ಲಿ ಭಾರತವು ಹಾಂಕಾಂಗ್ ವಿರುದ್ಧ ಸವಾರಿ ಮಾಡಿತು. ಡಬಲ್ ಒಲಿಂಪಿಯನ್ ಪಿ.ವಿ. ಸಿಂಧು, ಅಶ್ಮಿತಾ ಚಲಿಹಾ ಹಾಗೂ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ತನಿಶಾ ಕ್ರಾಸ್ಟೋ ಭಾರತಕ್ಕೆ 3-0 ಅಂತರದಿಂದ ಗೆಲುವು ತಂದುಕೊಟ್ಟರು.

ಭಾರತವು ಮುಂದಿನ ಸುತ್ತಿನಲ್ಲಿ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಜಯಶಾಲಿಯಾಗುವ ಅಗ್ರ ಶ್ರೇಯಾಂಕದ ಜಪಾನ್ ಅಥವಾ ಚೀನಾ ತಂಡವನ್ನು ಎದುರಿಸಲಿದೆ. ದೀರ್ಘ ಸಮಯದಿಂದ ಕಾಡುತ್ತಿದ್ದ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ವಾಪಸಾಗಿರುವ ಸಿಂಧು ಕೆಳ ರ‍್ಯಾಂಕಿನ ಲೊ ಸಿನ್ ಯಾನ್ ಹ್ಯಾಪ್ಪಿ ವಿರುದ್ಧ 21-7, 16-21, 21-12 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.

ಮಹಿಳೆಯರ ಡಬಲ್ಸ್‌ನಲ್ಲಿ ತನಿಶಾ ಹಾಗೂ ಅಶ್ವಿನಿ 35 ನಿಮಿಷಗಳ ಹೋರಾಟದಲ್ಲಿ ಯುಂಗ್ ಟಿಂಗ್ ಹಾಗೂ ಯುಂಗ್ ಪುಯ್‌ರನ್ನು 21-10, 21-14 ಗೇಮ್‌ಗಳ ಅಂತರದಿಂದ ಸೋಲಿಸಿತು. ಅಶ್ಮಿತಾ ಮಹಿಳೆಯರ ಸಿಂಗಲ್ಸ್‌ನಲ್ಲಿ ಯಂಗ್ ಸಮ್ ಯೀ ವಿರುದ್ಧ 21-12, 21-13 ಗೇಮ್‌ಗಳ ಅಂತರದಿಂದ ಜಯ ಸಾಧಿಸಿ ಭಾರತವು 3-0 ಅಂತರದಿಂದ ಜಯ ಸಾಧಿಸುವಲ್ಲಿ ನೆರವಾದರು. ಮಾತ್ರವಲ್ಲಿ ಭಾರತವು ಕನಿಷ್ಠ ಕಂಚಿನ ಪದಕವನ್ನು ದೃಢಪಡಿಸಿತು.

ಇದು ಮಹಿಳಾ ತಂಡದ ಉತ್ತಮ ಫಲಿತಾಂಶವಾಗಿದ್ದು, ಅವರ ಪ್ರದರ್ಶನವು ನನಗೆ ಸಂತಸ ತಂದಿದೆ ಎಂದು ತಂಡದೊಂದಿಗಿರುವ ಮಾಜಿ ರಾಷ್ಟ್ರೀಯ ಕೋಚ್ ವಿಮಲ್ ಕುಮಾರ್ ಹೇಳಿದ್ದಾರೆ. ಭಾರತದ ಪುರುಷರ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News