ಬ್ಯಾಡ್ಮಿಂಟನ್: ಸುಕಾಂತ್ ಕದಮ್, ಸುಹಾಸ್ ಯತಿರಾಜ್, ತರುಣ್‌ಗೆ ಜಯ

Update: 2024-08-29 16:29 GMT

ಸುಕಾಂತ್ ಕದಮ್( Photo: X | @Anmolkakkar27), ಸುಹಾಸ್ ಯತಿರಾಜ್

ಪ್ಯಾರಿಸ್ : ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಗುರುವಾರ ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರರಾದ ಸುಕಾಂತ್ ಕದಮ್, ಸುಹಾಸ್ ಯತಿರಾಜ್ ಮತ್ತು ತರುಣ್ ಪುರುಷರ ಸಿಂಗಲ್ಸ್ ಎಸ್‌ಎಲ್‌4 ವಿಭಾಗದ ಗುಂಪು ಹಂತದ ಪಂದ್ಯಗಳಲ್ಲಿ ವಿಜಯಿಗಳಾಗಿದ್ದಾರೆ.

ಕದಮ್ ಆರಂಭಿಕ ಹಿನ್ನಡೆಯನ್ನು ಮೆಟ್ಟಿನಿಂತು ಅಂತಿಮವಾಗಿ ಜಯ ಸಾಧಿಸಿದರೆ, ಯತಿರಾಜ್ ಸುಲಲಿತ ಜಯ ಸಂಪಾದಿಸಿದರು. ಆದರೆ, ತರುಣ್ ಕಠಿಣ ಪರಿಶ್ರಮದಿಂದ ವಿಜಯ ಗಳಿಸಿದರು.

ಹತ್ತರ ವಯಸ್ಸಿನಲ್ಲಿ ಕ್ರಿಕೆಟ್ ಮೈದಾನದಲ್ಲಿ ಬಿದ್ದು ತೀವ್ರ ಮಂಡಿ ಗಾಯಕ್ಕೆ ಒಳಗಾಗಿರುವ 31 ವರ್ಷದ ಸುಕಾಂತ್, ಮಲೇಶ್ಯದ ಮುಹಮ್ಮದ್ ಅಮೀನ್ ಬುರ್ಹಾನುದ್ದೀನ್ ವಿರುದ್ಧದ ಬಿ ಗುಂಪಿನ ಪಂದ್ಯದಲ್ಲಿ ಮೊದಲ ಗೇಮ್‌ನಲ್ಲಿ ಸೋಲನುಭವಿಸಿದರು. ಆದರೆ, ಅಂತಿಮವಾಗಿ ಅವರು ತನ್ನ ಎದುರಾಳಿಯನ್ನು 17-21, 21-15, 22-20 ಗೇಮ್‌ಗಳಿಂದ ಸೋಲಿಸಿದರು.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಸುಹಾಸ್ ಯತಿರಾಜ್, ಎ ಗುಂಪಿನ ಪಂದ್ಯದಲ್ಲಿ ಇಂಡೋನೇಶ್ಯದ ಹಿಕ್ಮತ್ ರಮ್ದಾನಿಯನ್ನು ಸುಲಲಿತವಾಗಿ ಸೋಲಿಸಿದರು. ಅವರು ತನ್ನ ಎದುರಾಳಿಯನ್ನು ಕೇವಲ 22 ನಿಮಿಷಗಳಲ್ಲಿ 21-7, 21-5 ಗೇಮ್‌ ಗಳಿಂದ ಮಣಿಸಿದರು.

ತನ್ನ ಎರಡನೇ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ತರುಣ್ ಡಿ ಗುಂಪಿನ ಪಂದ್ಯದಲ್ಲಿ ಬ್ರೆಝಿಲ್‌ನ ಒಲಿವೇರ ರೋಜರಿಯೊ ಜೂನಿಯರ್ ಝೇವಿಯರ್‌ರನ್ನು 21-17, 21-19 ಗೇಮ್‌ಗಳಿಂದ ಪರಾಭವಗೊಳಿಸಿದರು.

ಎಸ್‌ಎಲ್‌4 ವಿಭಾಗದಲ್ಲಿ ಕಾಲುಗಳಲ್ಲಿ ವೈಕಲ್ಯ ಹಾಗೂ ಓಡುವುದು ಮತ್ತು ನಡೆಯುವಾಗ ಸ್ವಲ್ಪ ಸಮತೋಲನ ಸಮಸ್ಯೆ ಹೊಂದಿರುವ ಅಥ್ಲೀಟ್‌ಗಳು ಸ್ಪರ್ಧಿಸುತ್ತಾರೆ.

ಮಿಶ್ರ ಡಬಲ್ಸ್‌ನ ಎಸ್‌ಎಲ್‌3-ಎಸ್‌ಯು5 ವಿಭಾಗದ ಎ ಗುಂಪಿನ ಪಂದ್ಯವೊಂದರಲ್ಲಿ, ಭಾರತದ ನಿತೇಶ್ ಕುಮಾರ್ ಮತ್ತು ತುಳಸೀಮತಿ ಮುರುಗೇಶನ್ ಜಯ ಸಾಧಿಸಿದ್ದಾರೆ. ಅವರು ತಮ್ಮದೇ ದೇಶದ ಸುಹಾಸ್ ಯತಿರಾಜ್ ಮತ್ತು ಪಾಲಕ್ ಕೊಹ್ಲಿ ಜೋಡಿಯನ್ನು 31 ನಿಮಿಷಗಳಲ್ಲಿ 21-14, 21-17 ಗೇಮ್‌ಗಳಲ್ಲಿ ಸೋಲಿಸಿದ್ದಾರೆ.

ಆದರೆ, ಭಾರತದ ಮನ್‌ದೀಪ್ ಕೌರ್ ಮತ್ತು ಮಾನಸಿ ಜೋಶಿ ಮಹಿಳೆಯರ ಸಿಂಗಲ್ಸ್ (ಎಸ್‌ಎಲ್‌3 ವಿಭಾಗ) ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.

ಮಾನಸಿ ಜೋಶಿಯನ್ನು ಎ ಗುಂಪಿನ ಪಂದ್ಯವೊಂದರಲ್ಲಿ ಇಂಡೋನೇಶ್ಯದ ಕೋನಿಟಾ ಇಖ್ತಿಯಾರ್ ಸ್ಯಕುರೊ 16-21, 21-13, 21-18 ಗೇಮ್‌ಗಳಿಂದ ಹಿಮ್ಮೆಟ್ಟಿಸಿದರು.

ಮನ್‌ದೀಪ್ ಕೌರ್‌ರನ್ನು ಬಿ ಗುಂಪಿನ ಪಂದ್ಯದಲ್ಲಿ ನೈಜೀರಿಯದ ಮರಿಯಮ್ ಎನಿಯೋಲಾ ಬೊಲಾಯಿ 21-8, 21-14 ನೇರ ಗೇಮ್‌ಗಳಿಂದ ಮಣಿಸಿದರು.

ಮಿಶ್ರ ಡಬಲ್ಸ್ ಎಸ್‌ಎಚ್‌6 ವಿಭಾಗದ ಪಂದ್ಯವೊಂದರಲ್ಲಿ ಶಿವರಾಜನ್ ಸೊಲೈಮಲೈ ಮತ್ತು ನಿತ್ಯಾ ಶ್ರೀ ಜೋಡಿ ಕೂಡ ಅಮೆರಿಕದ ಮೈಲ್ಸ್ ಕ್ರಾಯೆವ್‌ಸ್ಕಿ ಮತ್ತು ಜಾಯ್ಸಿ ಸೈಮನ್ ಜೋಡಿ ವಿರುದ್ಧ ಪರಾಭವಗೊಂಡಿದೆ. ಭಾರತೀಯ ಜೋಡಿಯು 35 ನಿಮಿಷಗಳಲ್ಲಿ 21-23, 11-21 ಗೇಮ್‌ಗಳಿಂದ ಸೋಲನುಭವಿಸಿತು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News