ಬಾಂಗ್ಲಾದೇಶ 164 ರನ್‌ಗೆ ಆಲೌಟ್ | 5 ರನ್‌ಗೆ 4 ವಿಕೆಟ್ ಪಡೆದ ಜೇಡನ್ ಸೀಲ್ಸ್!
ಕಿಂಗ್‌ಸ್ಟನ್ : ವೇಗದ ಬೌಲರ್ ಜೇಡನ್ ಸೀಲ್ಸ್ (4-5)ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಆತಿಥೇಯ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡವು ಬಾಂಗ್ಲಾದೇಶ ತಂಡವನ್ನು ದ್ವಿತೀಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 164 ರನ್‌ಗೆ ಆಲೌಟ್ ಮಾಡಿದೆ.
ಮೊದಲ ದಿನದಾಟದಲ್ಲಿ ಮಳೆ ಹಾಗೂ ಮಂದ ಬೆಳಕಿನಿಂದಾಗಿ 30 ಓವರ್‌ಗಳ ಪಂದ್ಯ ಆಡಲು ಸಾಧ್ಯವಾಗಿತ್ತು. 2ನೇ ದಿನದಾಟವಾದ ರವಿವಾರ 2 ವಿಕೆಟ್‌ಗಳ ನಷ್ಟಕ್ಕೆ 69 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲಾದೇಶ ತಂಡದ ಪರ ಆರಂಭಿಕ ಬ್ಯಾಟರ್ ಶಾದ್‌ಮನ್ ಇಸ್ಲಾಂ(64 ರನ್, 137 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು.
ನಾಯಕ ಮೆಹದಿ ಹಸನ್(36 ರನ್) ಹಾಗೂ ಶಹಾದತ್ ಹುಸೈನ್(22 ರನ್)ಎರಡಂಕೆಯ ಸ್ಕೋರ್ ಗಳಿಸಿದರು. ಮೆಹದಿ ಹಾಗೂ ತೈಜುಲ್ ಇಸ್ಲಾಂ(16 ರನ್)7ನೇ ವಿಕೆಟ್‌ಗೆ 41 ರನ್ ಸೇರಿಸಿದರು.
ಸೀಲ್ಸ್ 16 ಓವರ್‌ಗಳಲ್ಲಿ ಕೇವಲ 5 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ಒಟ್ಟು 10 ಮೇಡನ್ ಓವರ್‌ಗಳನ್ನು ಎಸೆದರು. ಬಾಂಗ್ಲಾದೇಶದ ಬಾಲ ಕತ್ತರಿಸಿದ ಸೀಲ್ಸ್ 71.5 ಓವರ್‌ಗಳಲ್ಲಿ 164 ರನ್‌ಗೆ ಸರ್ವಪತನಗೊಳಿಸಿದರು.
ವಿಂಡೀಸ್ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದ್ದು, ನಾಯಕ ಕ್ರೆಸ್ ಬ್ರಾತ್‌ವೇಟ್(33 ರನ್)ಹಾಗೂ ಕೀಸಿ ಕಾರ್ಟಿ(19 ರನ್)ಎರಡಂಕೆಯ ಸ್ಕೋರ್ ಗಳಿಸಿದರು.