ಪಾಕಿಸ್ತಾನದ ವಿರುದ್ಧ ಸರಣಿ ಕ್ಲೀನ್‌ಸ್ವೀಪ್‌ಗೈದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ
ರಾವಲ್ಪಿಂಡಿ : ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮಂಗಳವಾರ ಆರು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ಪಾಕಿಸ್ತಾನ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ಬಾಂಗ್ಲ್ಲಾದೇಶ ಸರಣಿಸ್ವೀಪ್‌ಗೈದಿದೆ.
ಗೆಲ್ಲಲು 185 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡವು ಕೊನೆಯ ದಿನವಾದ ಮಂಗಳವಾರ ವಿಕೆಟ್ ನಷ್ಟವಿಲ್ಲದೆ 42 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ಕೇವಲ 4 ವಿಕೆಟ್ ಕಳೆದುಕೊಂಡು ಇನ್ನುಳಿದ 145 ರನ್ ಗಳಿಸಿತು. ಶಾಕಿಬ್ ಅಲ್ ಹಸನ್(ಔಟಾಗದೆ 21) ಗೆಲುವಿನ ಬೌಂಡರಿ ಬಾರಿಸಿದರು. ಮುಶ್ಫಿಕುರ‌್ರಹೀಂ ಔಟಾಗದೆ 21 ರನ್ ಗಳಿಸಿದರು. ಆರಂಭಿಕ ಆಟಗಾರ ಝಾಕಿರ್ ಹಸನ್(40 ರನ್), ನಾಯಕ ನಜ್ಮುಲ್ ಹುಸೈನ್(38 ರನ್) ಹಾಗೂ ಮುಮಿನುಲ್ ಹಕ್(34 ರನ್)ಗಮನಾರ್ಹ ಕೊಡುಗೆ ನೀಡಿದರು. ಅಗ್ರ ಸರದಿಯ ಪ್ರತಿರೋಧ ಪಂದ್ಯದಲ್ಲಿ ತಿರುಗೇಟು ನೀಡುವ ಪಾಕ್‌ನ ವಿಶ್ವಾಸಕ್ಕೆ ಧಕ್ಕೆ ತಂದಿತು.
ಬಾಂಗ್ಲಾದೇಶವು ವಿದೇಶಿ ನೆಲದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಎರಡನೇ ಬಾರಿ ಸರಣಿಯನ್ನು ಗೆದ್ದ ಸಾಧನೆ ಮಾಡಿದೆ. ಈ ಮೊದಲು 2009ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಈ ಸಾಧನೆ ಮಾಡಿತ್ತು.
ಪ್ರವಾಸಿ ಬಾಂಗ್ಲಾದೇಶವು ಸರಣಿಯುದ್ದಕ್ಕೂ ಪ್ರಾಬಲ್ಯ ಮೆರೆದಿದ್ದು, ಮೊದಲ ಟೆಸ್ಟ್ ಪಂದ್ಯವನ್ನು 10 ವಿಕೆಟ್ ಅಂತರದಿಂದ ಗೆದ್ದುಕೊಂಡಿತ್ತು. 2ನೇ ಟೆಸ್ಟ್‌ನ ಮೊದಲ ದಿನದಾಟವು ಮಳೆಗಾಹುತಿಯಾಗಿದ್ದರೂ ಬಾಂಗ್ಲಾದೇಶವು ಕೇವಲ 4 ದಿನಗಳಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿದೆ.
ಸ್ವದೇಶದಲ್ಲಿ ಆಡಿರುವ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಕಳಪೆ ಪ್ರದರ್ಶನ ಮುಂದುವರಿದಿದೆ. 2021ರಲ್ಲಿ ರಾವಲ್ಪಿಂಡಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿದ ನಂತರ 10 ಪಂದ್ಯಗಳಲ್ಲಿ ಗೆಲುವನ್ನೇ ಕಂಡಿಲ್ಲ.
ಕಳೆದ ವರ್ಷ ನಾಯಕನಾಗಿ ನೇಮಕಗೊಂಡಿರುವ ಶಾನ್ ಮಸೂದ್ ಇದೀಗ ಸತತ ಎರಡನೇ ಸರಣಿ ಕ್ಲೀನ್‌ಸ್ವೀಪ್‌ಗೆ ಒಳಗಾಗಿದ್ದಾರೆ. ಈ ಹಿಂದೆ ಆಸ್ಟ್ರೇಲಿಯ ವಿರುದ್ಧ 0-3 ಅಂತರದಿಂದ ಕ್ಲೀನ್‌ಸ್ವೀಪ್‌ಗೆ ಒಳಗಾಗಿದ್ದರು.
ಲಿಟನ್ ದಾಸ್(138 ರನ್) ಪಂದ್ಯಶ್ರೇಷ್ಠ ಹಾಗೂ ಮೆಹದಿ ಹಸನ್ ಮಿರಾಝ್ ಸರಣಿಶ್ರೇಷ್ಠ(155 ರನ್, 10 ವಿಕೆಟ್)ಪ್ರಶಸ್ತಿಗೆ ಭಾಜನರಾದರು.