ಬಾಂಗ್ಲಾ - ದಕ್ಷಿಣ ಆಫ್ರಿಕಾ ಟೆಸ್ಟ್‌ನಲ್ಲಿ ವಿಚಿತ್ರ ಕ್ಷಣ | ಒಂದೇ ಎಸೆತದಲ್ಲಿ 10 ರನ್!

Update: 2024-10-30 16:15 GMT

ಚಟ್ಟೋಗ್ರಾಮ್ : ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಚಿತ್ರ ಕ್ಷಣವೊಂದಕ್ಕೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.

ಕೇವಲ ಒಂದು ಎಸೆತದ ನಂತರ, ಬ್ಯಾಟರ್ ಚೆಂಡನ್ನು ಹೊಡೆಯುವ ಮೊದಲೇ ಬಾಂಗ್ಲಾದೇಶದ ಸ್ಕೋರ್‌ ಬೋರ್ಡ್‌ ನಲ್ಲಿ 10 ರನ್ ಜಮೆಯಾಗಿದೆ.

ಬಾಂಗ್ಲಾದೇಶ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಈ ವಿಚಿತ್ರ ಘಟನೆಯೊಂದು ನಡೆದಿದೆ.

ದಕ್ಷಿಣ ಆಫ್ರಿಕಾದ ಸ್ಟಾರ್ ವೇಗದ ಬೌಲರ್ ಕಾಗಿಸೊ ರಬಾಡ ಎಸೆದ ಚೆಂಡನ್ನು ಬಾಂಗ್ಲಾದೇಶದ ಆರಂಭಿಕ ಶಾದ್‌ಮಾನ್ ಇಸ್ಲಾಮ್ ಟಚ್ ಮಾಡದೆ ಬಿಟ್ಟರು. ಆದರೆ, ರಬಾಡ ಎಸೆದ ಎರಡನೇ ಎಸೆತವು ನೋ ಬಾಲ್ ಆಗಿತ್ತು. ವಿಕೆಟ್‌ ಕೀಪರ್ ಕೈಲ್ ವೆರ್ರೆನ್ನೆ ಚೆಂಡನ್ನು ತಡೆಯಲು ಯತ್ನಿಸಿದರು. ಆದರೆ ಚೆಂಡು ಬೌಂಡರಿ ಗೆರೆ ದಾಟಿತು. ಆಗ ಒಂದೇ ಎಸೆತದಲ್ಲಿ ಒಟ್ಟು 5 ರನ್ ಬಂತು.

ಆದರೆ ಇದಕ್ಕೂ ಮೊದಲು ಬಾಂಗ್ಲಾದೇಶ ತನ್ನ ಇನಿಂಗ್ಸ್ ಆರಂಭಿಸುವ ಮೊದಲೇ ದಕ್ಷಿಣ ಆಫ್ರಿಕಾಕ್ಕೆ ಐದು ರನ್ ದಂಡ ವಿಧಿಸಲಾಗಿತ್ತು. ದಕ್ಷಿಣ ಆಫ್ರಿಕಾದ ಕೆಳ ಸರದಿಯ ಬ್ಯಾಟರ್ ಎಸ್. ಮುತ್ತುಸ್ವಾಮಿ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಪದೇ ಪದೇ ಪಿಚ್ ಮೇಲೆ ಓಡಿ ಪಿಚ್ ಸಂರಕ್ಷಣೆಗೆ ಸಂಬಂಧಿಸಿದ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದರು. ಇದಕ್ಕಾಗಿ ಐದು ರನ್ ದಂಡ ವಿಧಿಸಲಾಗಿದೆ.

ಹೀಗಾಗಿ ಬಾಂಗ್ಲಾದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ ಮೊದಲ ಚೆಂಡನ್ನು ಎದುರಿಸುವ ಮೊದಲೇ ಸ್ಕೋರ್‌ ಪಟ್ಟಿಯಲ್ಲಿ 5 ರನ್ ಜಮೆಯಾಗಿತ್ತು. ರಬಾಡ ಅವರ ನೋಬಾಲ್ ಎಸೆತದಿಂದಾಗಿ ಬಾಂಗ್ಲಾ ರನ್ ಖಾತೆಗೆ ಐದು ರನ್ ಸೇರಿದೆ. ಬಾಂಗ್ಲಾದೇಶ ತಂಡ ಬ್ಯಾಟಿಂಗ್ ಆರಂಭಿಸುವ ಮೊದಲೇ 10 ರನ್ ಗಳಿಸಿದೆ. ಆದರೆ ಬಾಂಗ್ಲಾದೇಶ ತಂಡ ದಕ್ಷಿಣ ಆಫ್ರಿಕಾದ ಬೌಲರ್‌ಗಳ ಒತ್ತಡಕ್ಕೆ ಸಿಲುಕಿ 3ನೇ ದಿನದಾಟದಂತ್ಯಕ್ಕೆ 38 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News