ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ಸಿತಾಂಶು ಕೋಟಕ್ ನೇಮಕಕ್ಕೆ ಬಿಸಿಸಿಐ ಚಿಂತನೆ

Update: 2025-01-16 15:02 GMT

ಸಿತಾಂಶು ಕೋಟಕ್ | NDTV 

ಮುಂಬೈ: ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿ ಹಾಗೂ ಆ ನಂತರ ಆಸ್ಟ್ರೇಲಿಯದಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವು ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ತಂಡದ ಸಹಾಯಕ ಸಿಬ್ಬಂದಿ ವಿಭಾಗವನ್ನು ಶಕ್ತಿಶಾಲಿಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಸಾಧನೆ ಮಾಡಿರುವ, ಭಾರತ ಎ ತಂಡದ ಮುಖ್ಯ ಕೋಚ್ ಆಗಿರುವ ಸಿತಾಂಶು ಕೋಟಕ್‌ರನ್ನು ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ನೇಮಿಸುವ ಸಾಧ್ಯತೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕೋಟಕ್ ನೇಮಕದ ಮೂಲಕ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಬೇಡಿಕೆಯನ್ನು ಬಿಸಿಸಿಐ ಈಡೇರಿಸಲು ಮುಂದಾಗಿದೆ. ಬಿಸಿಸಿಐ ಸಭೆಯಲ್ಲಿ ಗಂಭೀರ್ ಅವರು ಬ್ಯಾಟಿಂಗ್ ಕೋಚ್‌ಗಾಗಿ ಬೇಡಿಕೆ ಇಟ್ಟಿದ್ದರು. ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಆಸ್ಟ್ರೇಲಿಯಕ್ಕೆ ಪ್ರವಾಸ ಕೈಗೊಂಡಿದ್ದ ಭಾರತ ಎ ತಂಡಕ್ಕೆ ಕೋಟಕ್ ಮುಖ್ಯ ಕೋಚ್ ಆಗಿದ್ದರು. 2023ರ ಆಗಸ್ಟ್‌ನಲ್ಲಿ ಟಿ20 ಸರಣಿಯನ್ನಾಡಲು ಐರ್‌ ಲ್ಯಾಂಡ್‌ಗೆ ಪ್ರವಾಸ ಮಾಡಿದ್ದ ಜಸ್‌ಪ್ರಿತ್ ಬುಮ್ರಾ ನಾಯಕತ್ವದ ಭಾರತೀಯ ತಂಡಕ್ಕೆ ಕೋಟಕ್ ಅವರು ಪ್ರಧಾನ ಕೋಚ್ ಆಗಿದ್ದರು.

52ರ ಹರೆಯದ ಮಾಜಿ ಎಡಗೈ ಬ್ಯಾಟರ್ ಕೋಟಕ್ ಸೌರಾಷ್ಟ್ರ ತಂಡದ ನಾಯಕನಾಗಿದ್ದರು. 1992-93ರಿಂದ 2013ರ ತನಕ ದೇಶೀಯ ಕ್ರಿಕೆಟ್‌ನಲ್ಲಿ ಆಡಿದ್ದ ಕೋಟಕ್ ಅವರು 130 ಪ್ರಥಮ ದರ್ಜೆ ಪಂದ್ಯಗಳಲ್ಲಿ 41.76ರ ಸರಾಸರಿಯಲ್ಲಿ 15 ಶತಕ ಹಾಗೂ 55 ಅರ್ಧಶತಕಗಳ ಸಹಿತ 8061 ರನ್ ಗಳಿಸಿದ್ದಾರೆ.

ನಿವೃತ್ತಿಯ ನಂತರ ಪೂರ್ಣಕಾಲಿಕ ತರಬೇತುದಾರನಾಗಿರುವ ಕೋಟಕ್ ಅವರು ಸೌರಾಷ್ಟ್ರ ತಂಡಕ್ಕೆ ಕೋಚಿಂಗ್ ನೀಡಿದ್ದರು. ಆ ನಂತರ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಕೋಚ್ ಆಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಬಿಸಿಸಿಐನಿಂದ ಭಾರತ ಎ ತಂಡದ ಮುಖ್ಯ ಕೋಚ್ ಆಗಿ ನಿರಂತರವಾಗಿ ನೇಮಕಗೊಂಡಿದ್ದರು. ಭಾರತ ಎ ತಂಡವು ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ದೇಶಗಳಿಗೆ ತೆರಳಿತ್ತು. ಐಪಿಎಲ್ 2017ರಲ್ಲಿ ಗುಜರಾತ್ ಲಯನ್ಸ್ ತಂಡದ ಸಹಾಯಕ ಕೋಚ್ ಆಗಿದ್ದರು.

ಭಾರತದ ಬ್ಯಾಟಿಂಗ್ ಕೋಚ್ ಹುದ್ದೆಗೆ ಕೋಟಕ್ ಹೆಸರನ್ನು ಗಂಭೀರವಾಗಿ ಚರ್ಚಿಸಲಾಗುತ್ತಿದೆ. ಫೆಬ್ರವರಿಯಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಿಂದ ಹೊಸ ಬ್ಯಾಟಿಂಗ್ ಕೋಚ್ ನೇಮಕವಾಗಬಹುದು. ಈ ಕುರಿತಂತೆ ಬಿಸಿಸಿಐ, ಅಧಿಕೃತ ಪ್ರಕಟನೆ ನೀಡುವ ಸಾಧ್ಯತೆ ಇದೆ. ಸೀನಿಯರ್‌ಗಳ ಸಹಿತ ಭಾರತದ ಬಹುತೇಕ ಬ್ಯಾಟರ್‌ಗಳು ಹಿಂದಿನ ಎರಡು ಸರಣಿಯಲ್ಲಿ ರನ್ ಗಳಿಸಲು ಪರದಾಟ ನಡೆಸಿದ್ದಾರೆ. ಬ್ಯಾಟಿಂಗ್ ದೃಷ್ಟಿಕೋನದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸಹಾಯಕ ಸಿಬ್ಬಂದಿ ವರ್ಗವನ್ನು ಬಲಿಷ್ಠಗೊಳಿಸುವ ಅಗತ್ಯವಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಸದ್ಯ ಭಾರತದ ಕೋಚಿಂಗ್ ಸಿಬ್ಬಂದಿ ವಿಭಾಗದಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಲ್ಲದೆ ಮೊರ್ನೆ ಮೊರ್ಕೆಲ್(ಬೌಲಿಂಗ್ ಕೋಚ್), ಅಭಿಷೇಕ್ ನಾಯರ್(ಸಹಾಯಕ ಕೋಚ್), ರಯಾನ್ ಟೆನ್ ಡೊಶೆಟ್(ಸಹಾಯಕ ಕೋಚ್)ಹಾಗೂ ಟಿ.ದಿಲಿಪ್(ಫೀಲ್ಡಿಂಗ್)ಅವರಿದ್ದಾರೆ. ಆದರೆ ಬ್ಯಾಟಿಂಗ್ ಕೋಚ್ ಭರ್ತಿಯಾಗಿಲ್ಲ. ಅಭಿಷೇಕ್ ನಾಯರ್‌ಗೆ ಬ್ಯಾಟರ್‌ಗಳತ್ತ ಗಮನ ನೀಡುವ ಕೆಲಸ ವಹಿಸಲಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಸ್ಪೆಷಲಿಸ್ಟ್ ಅಗತ್ಯವಿದೆ ಎಂದು ಬಿಸಿಸಿಐ ಭಾವಿಸಿದೆ.

ಸ್ವದೇಶದಲ್ಲಿ ಇದೇ ಮೊದಲ ಬಾರಿ ನ್ಯೂಝಿಲ್ಯಾಂಡ್ ವಿರುದ್ಧ 0-3 ಅಂತರದಿಂದ ಸರಣಿ ಸೋತ ನಂತರ ಆಸ್ಟ್ರೇಲಿಯದಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 1-3 ಅಂತರದಿಂದ ಸೋಲುಂಡಿದೆ. ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಅವರು ಕಳಪೆ ಫಾರ್ಮ್‌ನಲ್ಲಿರುವ ಕಾರಣ ಸಹಾಯಕ ಸಿಬ್ಬಂದಿಯ ಪಾತ್ರವನ್ನು ಒರೆಗೆ ಹಚ್ಚಲಾಗುತ್ತಿದೆ.

ಜನವರಿ 11ರಂದು ಮುಂಬೈನಲ್ಲಿ ನಡೆದಿದ್ದ ಮರುಪರಿಶೀಲನ ಸಭೆಯಲ್ಲಿ ಸಹಾಯಕ ಸಿಬ್ಬಂದಿಯ ಪಾತ್ರದ ಕುರಿತಾಗಿ ಚರ್ಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News