ಟೀಮ್ ಇಂಡಿಯಾ ಕೋಚ್ ಆಗಿ ಗಂಭೀರ್ ನೇಮಕ ಬಹುತೇಕ ಖಚಿತ: ವರದಿ
ಹೊಸದಿಲ್ಲಿ: ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮೂರನೇ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದುಕೊಂಡ ನಂತರ ಭಾರತದ ಮಾಜಿ ನಾಯಕ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಬಹುತೇಕ ಖಚಿತವಾಗಿದ್ದು ಶೀಘ್ರವೇ ಈ ಕುರಿತು ಪ್ರಕಟನೆ ಹೊರಬೀಳಲಿದೆ ಎಂದು ವರದಿಯಾಗಿದೆ.
ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ಸೋಮವಾರ ಕೊನೆಗೊಂಡಿದೆ. ಇತ್ತೀಚೆಗೆ ಕೊನೆಗೊಂಡ ಐಪಿಎಲ್ ನಲ್ಲಿ ಅಮೋಘ ಯಶಸ್ಸು ಸಾಧಿಸಿದ ನಂತರ ಮುಖ್ಯ ಕೋಚ್ ಹುದ್ದೆಗೆ ಗಂಭೀರ್ ಅವರ ಹೆಸರು ಕ್ರಿಕೆಟ್ ವಲಯದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ.
ರವಿವಾರ ಕೆಕೆಆರ್ ತಂಡ ಐಪಿಎಲ್ ಟ್ರೋಫಿ ಜಯಿಸಿದ ನಂತರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಗಂಭಿರ್ ರನ್ನು ಭೇಟಿ ಮಾಡಿದ್ದರು. ಈ ಭೇಟಿಯು ಗಂಭೀರ್ ಅವರು ಕೋಚ್ ಆಗಿ ನೇಮಕವಾಗಲಿದ್ದಾರೆ ಎಂಬ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.
ಕ್ರಿಕ್ಬಝ್ ನಲ್ಲಿ ಇತ್ತೀಚೆಗೆ ಬಂದಿರುವ ವರದಿಯ ಪ್ರಕಾರ ಗಂಭೀರ್ ಮುಖ್ಯ ಕೋಚ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತ. ಅನೇಕ ವಿಚಾರಗಳಿಗೆ ಸಂಬಂಧಿಸಿ ಮಾತುಕತೆ ನಡೆಯುತ್ತಿದೆ ಎಂದು ಹೇಳಿದೆ.
ಗಂಭೀರ್ ನೇಮಕಾತಿ ಒಪ್ಪಂದ ಬಹುತೇಕ ಮುಗಿದಿದೆ. ಈ ಕುರಿತ ಪ್ರಕಟನೆ ಶೀಘ್ರವೇ ನಡೆಯಲಿದೆ ಎಂದು ಬಿಸಿಸಿಐ ಉನ್ನತ ಪದಾಧಿಕಾರಿಗಳಿಗೆ ಆಪ್ತರಾಗಿರುವ ಐಪಿಎಲ್ ಫ್ರಾಂಚೈಸಿಯ ಮಾಲಕರೊಬ್ಬರು ತಿಳಿಸಿದ್ದಾರೆ.
ಬಿಸಿಸಿಐನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚೆನ್ನಾಗಿ ಅರಿತಿರುವ ಉನ್ನತ ವೀಕ್ಷಕವಿವರಣೆಗಾರರೊಬ್ಬರು, ಗಂಭೀರ್ ಅವರನ್ನು ಕೋಚ್ ಆಗಿ ನೇಮಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮೂರನೇ ಅವಧಿಗೆ ಕೋಚ್ ಆಗಿ ಮುಂದುವರಿಯಲು ನನಗೆ ಆಸಕ್ತಿ ಇಲ್ಲ ಎಂದು ದ್ರಾವಿಡ್ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ. ಆಸ್ಟ್ರೇಲಿಯದ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್ ಹಾಗೂ ಜಸ್ಟಿನ್ ಲ್ಯಾಂಗರ್ ಭಾರತದ ಕೋಚ್ ಹುದ್ದೆಯ ಆಫರ್ ಅನ್ನು ತಿರಸ್ಕರಿಸಿದ್ದಾಗಿ ಹೇಳಿದ್ದರು.