2ನೇ ಏಕದಿನದಲ್ಲಿ ಭರ್ಜರಿ ಜಯ, ಬಾಂಗ್ಲಾ ವಿರುದ್ಧ ಸರಣಿ ಗೆದ್ದ ಅಫ್ಘಾನಿಸ್ತಾನ

Update: 2023-07-08 18:13 GMT

Photo: Twitter \ @ICC

ಢಾಕಾ: ಎರಡನೇ ಏಕದಿನ ಪಂದ್ಯವನ್ನು 142 ರನ್ ಅಂತರದಿಂದ ಗೆದ್ದುಕೊಂಡಿರುವ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.

ಶನಿವಾರ ಆರಂಭಿಕ ಬ್ಯಾಟರ್‌ಗಳಾದ ರಹ್ಮಾನುಲ್ಲಾ ಗುರ್ಬಾಝ್ (145 ರನ್,125 ಎಸೆತ, 13 ಬೌಂಡರಿ, 8 ಸಿಕ್ಸರ್) ಹಾಗೂ ಇಬ್ರಾಹೀಂ ಝದ್ರಾನ್(100 ರನ್,119 ಎಸೆತ, 9 ಬೌಂ.,1 ಸಿ.) ಶತಕ ಸಿಡಿಸಿದ ಕಾರಣ ಅಫ್ಘಾನ್ ಭರ್ಜರಿ ಜಯ ದಾಖಲಿಸಿದೆ. ಗುರ್ಬಾಝ್ ಹಾಗೂ ಝದ್ರಾನ್ ಮೊದಲ ವಿಕೆಟ್‌ಗೆ 256 ರನ್ ಜೊತೆಯಾಟ ನಡೆಸಿ ಅಫ್ಘಾನ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 331 ರನ್ ಗಳಿಸಲು ನೆರವಾದರು. 43.2ನೇ ಓವರ್‌ನಲ್ಲಿ ಬಾಂಗ್ಲಾದೇಶವನ್ನು 189 ರನ್‌ಗೆ ನಿಯಂತ್ರಿಸಿದ ಅಫ್ಘಾನ್ ಬೌಲರ್‌ಗಳಾದ ಫಾರೂಕಿ(3-22) , ಮುಜೀಬ್‌ವುರ್ರಹ್ಮಾನ್(3-40) ಹಾಗೂ ರಶೀದ್ ಖಾನ್(2-28) ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು.

ಈ ಗೆಲುವಿನ ಮೂಲಕ ಅಫ್ಘಾನ್ ತಂಡ ಕಳೆದ 7 ವರ್ಷಗಳಲ್ಲಿ ಬಾಂಗ್ಲಾ ನೆಲದಲ್ಲಿ ಏಕದಿನ ಸರಣಿ ಜಯಿಸಿದ 2ನೇ ಪ್ರವಾಸಿ ತಂಡ ಎನಿಸಿಕೊಂಡಿತು. ವಿಶ್ವ ಚಾಂಪಿಯನ್ ಇಂಗ್ಲೆಂಡ್ ಈ ಮೊದಲು ಈ ಸಾಧನೆ ಮಾಡಿತ್ತು. ಆತಿಥೇಯರ ಪರ ಮುಶ್ಫಿಕುರ್ರಹೀಂ(69 ರನ್)ಏಕಾಂಗಿ ಹೋರಾಟ ನೀಡಿದರು. ಆದರೆ ಅವರಿಗೆ ಉಳಿದ ಆಟಗಾರರಿಂದ ಬೆಂಬಲ ಸಿಗಲಿಲ್ಲ. ಬಾಂಗ್ಲಾ 72 ರನ್‌ಗೆ 6 ವಿಕೆಟ್ ಕಳೆದುಕೊಂಡಿತು. ಆಗ 7ನೇ ವಿಕೆಟ್‌ಗೆ 89 ರನ್ ಸೇರಿಸಿದ ಮೆಹಿದಿ ಹಸನ್(25 ರನ್) ಹಾಗೂ ಮುಶ್ಫಿಕುರ್ರಹೀಂ ತಂಡವನ್ನು ಅಧರಿಸಲು ಯತ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News