ರೋʼಹಿಟ್ʼ ಪಡೆಯ ಭರ್ಜರಿ ಆಟ, ಡಚ್ಚರಿಗೆ 411 ಗುರಿ
ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ ಗೆಲುವಿಗೆ 411 ರನ್ ಗಳ ಕಠಿಣ ಗುರಿ ನೀಡಿದೆ.
ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ ಬಾರತ ತಂಡ ನೆದರ್ಲ್ಯಾಂಡ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಶ್ರೇಯಸ್ ಐಯ್ಯರ್ ಹಾಗೂ ಕೆ ಎಲ್ ರಾಹುಲ್ ಸ್ಟೋಟಕ ಶತಕ ಹಾಗೂ ಡಚ್ಚರ ವಿರುದ್ದ ಬ್ಯಾಟ್ ಬೀಸಿದ ಭಾರತೀಯ ಎಲ್ಲ ಬ್ಯಾಟರ್ಗಳ ಅರ್ಧಶತಕದ ನೆರವಿನಿಂದ ಭಾರತ ಬೃಹತ್ ಮೊತ್ತ ದಾಖಲಿಸಿತು.
ಡಚ್ಚರ ವಿರುದ್ದ ಟಾಸ್ ಗೆದ್ದ ರೋಹಿತ್ ಪಡೆ ಬ್ಯಾಟಿಂಗ್ ಆಯ್ದುಕೊಂಡು ಸ್ಟೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಓಪನರ್‌ಗಳಾದ ನಾಯಕ ರೋಹಿತ್ ಶರ್ಮಾ 8 ಬೌಂಡರಿ 2 ಸಿಕ್ಸರ್ ಸಹಿತ 61 ರನ್ ಪೇರಿಸಿದರೆ, ಶುಭ್ಮನ್ ಗಿಲ್ 3 ಬೌಂಡರಿ 4 ಭರ್ಜರಿ ಸಿಕ್ಸರ್ ನೆರವಿನಿಂದ 51 ರನ್ ಪೇರಿಸಿದರು.
ರೋಹಿತ್ – ಗಿಲ್ ಭರ್ಜರಿ ಬ್ಯಾಟಿಂಗ್ ದಾಳಿಗೆ ಕಡಿವಾಣ ಹಾಕಿದ ಬಾಸ್ ಡೆ ಲೀಡ್ ಹಾಗೂ ಮೀಕರನ್ ಜೋಡಿ ಓಪನರ್ ಗಳಿಬ್ಬರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 5 ಬೌಂಡರಿ 1 ಸಿಕ್ಸರ್ ಸಹಿತ 51 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭ ವಾನ್ ಡೆರ್ ಮರ್ವೆ ಎಸೆತದಲ್ಲಿ ಬೌಲ್ಡ್ ಆದರು. ದಾಖಲೆಯ ಶತಕಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು ಇದರಿಂದ ನಿರಾಶರಾದರು. ಆರಂಭಿಕ ಮೂವರು ಬ್ಯಾಟರ್ ಗಳ ಭರ್ಜರಿ ಬ್ಯಾಟಿಂಗ್ ಬಳಿಕ ಡಚ್ ಬೌಲರ್ ಗಳನ್ನು ಕಾಡಿದ ಶ್ರೇಯಸ್ ಐಯ್ಯರ್ 94 ಎಸೆತಗಳಲ್ಲಿ 10 ಬೌಂಡರಿ 5 ಸಿಕ್ಸರ್ ಸಹಿತ ವಿಶ್ವಕಪ್ ನ ಚೊಚ್ಚಲ ಶತಕದ ಮೂಲಕ ಸ್ಟೋಟಕ 128 ರನ್ ಬಾರಿಸಿದರು. ಅವರಿಗೆ ಸಾಥ್ ನೀಡಿದ್ದ ಕೆ ಎಲ್ ರಾಹುಲ್ 11 ಬೌಂಡರಿ 4 ಸಿಕ್ಸರ್ ಸಹಿತ 102 ರನ್ ಗಳಿಸುವ ಮೂಲಕ ವಿಶ್ವಕಪ್ ದ್ವಿತೀಯ ಶತಕ ಬಾರಿಸಿ ಸಂಭ್ರಮಿಸಿದರು.
ನೆದರ್ಲ್ಯಾಂಡ್ಸ್ ಪರ ಬಾಸ್ ಡೆ ಲೀಡ್ 2 ವಿಕೆಟ್ ಪಡೆದರೆ, ಪೌಲ್ ಮೀಕರನ್, ವಾನ್ ಡರ್ ಮರ್ವೆ ತಲಾ ಒಂದು ವಿಕೆಟ್ ಕಬಳಿಸಿದರು.