ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ನಲ್ಲಿ ಕಂಚು ; ಪ್ಯಾರಿಸ್ ಒಲಿಂಪಿಕ್ಸ್ ಗೆ ಶೂಟರ್ ರಿದಮ್ ಸಾಂಗ್ವಾನ್ ಅರ್ಹತೆ

Update: 2024-01-11 17:45 GMT

 ರಿದಮ್ ಸಾಂಗ್ವಾನ್ | Photo; olympics.com

ಹೊಸದಿಲ್ಲಿ: 2024ರ ಪ್ಯಾರಿಸ್ ಒಲಿಂಪಿಕ್ಸ್ ಗಾಗಿ ಕೋಟಾ ಸ್ಥಾನವನ್ನು ಗಿಟ್ಟಿಸಿಕೊಂಡ ಭಾರತದ 16ನೇ ಶೂಟರ್ ಎನಿಸಿಕೊಂಡಿರುವ ರಿದಮ್ ಸಾಂಗ್ವಾನ್ ಇತಿಹಾಸ ನಿರ್ಮಿಸಿದ್ದಾರೆ. ಜಕಾರ್ತದಲ್ಲಿ ಗುರುವಾರ ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ನಲ್ಲಿ 25 ಮೀ. ಸ್ಟೋರ್ಟ್ಸ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸುವ ಮೂಲಕ ರಿದಮ್ ಈ ಸಾಧನೆ ಮಾಡಿದ್ದಾರೆ.

ರಿದಮ್ ಗಳಿಸಿರುವ ಯಶಸ್ಸಿನಿಂದಾಗಿ ಭಾರತವು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇದೇ ಮೊದಲ ಬಾರಿ ಅತಿದೊಡ್ಡ ಶೂಟಿಂಗ್ ತಂಡವನ್ನು ಕಳುಹಿಸಿಕೊಡಲು ಸಜ್ಜಾಗಿದ್ದು, ಈ ಹಿಂದಿನ ದಾಖಲೆಯನ್ನು ಮುರಿದಿದೆ. 2020ರಲ್ಲಿ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ ಗೇಮ್ಸ್ನಲ್ಲಿ 15 ಶೂಟರ್ ಗಳನ್ನು ಕಳುಹಿಸಿಕೊಡಲಾಗಿತ್ತು.

ಇಂಡೋನೇಶ್ಯದ ಜಕಾರ್ತವು ಭಾರತೀಯ ಶೂಟರ್ಗಳಿಗೆ ಅದೃಷ್ಟದ ತಾಣವಾಗಿದ್ದು ಮೂವರು ಅತ್ಲೀಟ್‌ ಗಳಾದ ಇಶಾ ಸಿಂಗ್, ವರುಣ್ ತೋಮರ್(ಇಬ್ಬರೂ 10 ಮೀ. ಏರ್ ಪಿಸ್ತೂಲ್)ಹಾಗೂ ರಿದಮ್ ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ನಲ್ಲಿ ಒಲಿಂಪಿಕ್ಸ್ ಕೋಟಾವನ್ನು ಪಡೆದಿದ್ದಾರೆ. ಈ ಪ್ರಚಂಡ ಪ್ರದರ್ಶನವು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಶೂಟಿಂಗ್ ಕ್ರೀಡೆಯಲ್ಲಿ ಭಾರತದ ಶಕ್ತಿ ಹೆಚ್ಚುತ್ತಿರುವ ಸಂಕೇತವಾಗಿದೆ.

ಹರ್ಯಾಣದ 20ರ ಹರೆಯದ ರಿದಮ್ ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ನಲ್ಲಿ 25 ಮೀ. ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತವು ಪ್ಯಾರಿಸ್ ಕೋಟಾವನ್ನು ಪಡೆಯುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ಕಳೆದ ವರ್ಷ ಹಾಂಗ್ಝೌ ಏಶ್ಯನ್ ಗೇಮ್ಸ್ ನಲ್ಲಿ ಇಶಾ ಹಾಗೂ ಮನು ಭಾಕರ್ ಜೊತೆಗೆ ಚಿನ್ನದ ಪದಕವನ್ನು ಜಯಿಸಿದ್ದ ರಿದಮ್ ಇಂದು ಫೈನಲ್‌ ನಲ್ಲಿ 28 ಅಂಕ ಗಳಿಸಿ ಶೂಟಿಂಗ್‌ ನಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಿದರು.

ರಿದಮ್ ಮೂರನೇ ಸ್ಥಾನದೊಂದಿಗೆ ಕಂಚಿಗೆ ತೃಪ್ತಿಪಟ್ಟರೂ ಈ ಸ್ಥಾನ ಮಹತ್ವ ಪಡೆದಿದೆ. ಏಕೆಂದರೆ ಚಿನ್ನ ಹಾಗೂ ಬೆಳ್ಳಿ ಜಯಿಸಿದ್ದ ಕೊರಿಯಾದ ಯಾಂಗ್ ಜಿನ್(41) ಹಾಗೂ ಕಿಮ್ ಯೆಜಿ(32) ಒಲಿಂಪಿಕ್ಸ್ ಕೋಟಾ ಸ್ಥಾನಕ್ಕೆ ಅನರ್ಹರಾದರು.

ಈ ಸಾಧನೆಯೊಂದಿಗೆ ರಿದಮ್ ಈಗ ನಡೆಯುತ್ತಿರುವ ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ನಲ್ಲಿ ಮೂರನೇ ಪದಕ ಜಯಿಸಿದರು. ಈ ವಾರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಇಶಾ ಸಿಂಗ್ ಚಿನ್ನ ಗೆದ್ದಾಗ ರಿದಮ್ ಮೂರನೇ ಸ್ಥಾನ ಪಡೆದಿದ್ದರು. ಮಂಗಳವಾರ ನಡೆದಿದ್ದ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಅರ್ಜುನ್ ಸಿಂಗ್ ಚೀಮಾ ಜೊತೆಗೂಡಿ ರಿದಮ್ ಬೆಳ್ಳಿ ಪದಕ ಜಯಿಸಿದ್ದರು. ಇದರೊಂದಿಗೆ ಕ್ವಾಲಿಫೈಯರ್ಸ್ ನಲ್ಲಿ ಭಾರತದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ್ದರು.

ನಾನು ಕಂಚಿನ ಪದಕ ಗೆದ್ದಿರುವುದಕ್ಕೆ ನಿಜವಾಗಿಯೂ ಸಂತೋಷವಾಗಿದೆ. ಈ ಮೂಲಕ ನನ್ನ ದೇಶಕ್ಕಾಗಿ ಒಲಿಂಪಿಕ್ಸ್ ಕೋಟಾವನ್ನು ಪಡೆದಿದ್ದೇನೆ. ನನ್ನ ವೈಯಕ್ತಿಕ ಕೋಚ್ ವಿನೀತ್ ಕುಮಾರ್ಗೆ ಧನ್ಯವಾದ ಹೇಳಲು ಇಷ್ಟಪಡುವೆ. ಅವರಿಂದಾಗಿಯೇ ನಾನು ಇಂದು ಇಲ್ಲಿದ್ದೇನೆ. ನನ್ನ ಎಲ್ಲ ಬೆಂಬಲಿಗರಿಗೂ ಧನ್ಯವಾದ ಹೇಳಲು ಬಯಸುವೆ ಎಂದು ರಿದಮ್ ಹೇಳಿದ್ದಾರೆ.

ನೀವು ಗೆದ್ದಿರುವ ಮೂರು ಪದಕಗಳಲ್ಲಿ ಯಾವುದರ ಬಗ್ಗೆ ಹೆಮ್ಮೆ ಇದೆ ಎಂದು ಕೇಳಿದಾಗ ಎಲ್ಲ ಪದಕಗಳು ನನ್ನ ಹೃದಯಕ್ಕೆ ಹತ್ತಿರವಾಗಿವೆ. ಭಾರತಕ್ಕೆ ಒಲಿಂಪಿಕ್ಸ್ ಕೋಟಾ ಗಿಟ್ಟಿಸಲು ನೆರವಾಗಿರುವ ಗುರುವಾರ ಗೆದ್ದಿರುವ ಕಂಚಿನ ಪದಕ ಹೆಚ್ಚು ವಿಶೇಷವಾಗಿದೆ. ವಿನೀತ್ ಸರ್ಗೆ ಧನ್ಯವಾದ, ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದರು.

ರಿದಮ್ ಸೋಮವಾರ ಒಟ್ಟು 588 ಅಂಕ ಗಳಿಸಿ ಫೈನಲ್‌ ಗೆ ಅರ್ಹತೆ ಪಡೆದಿದ್ದರು. ತನ್ನ ಮೊದಲ 35 ಟಾರ್ಗೆಟ್‌ ಗಳಲ್ಲಿ 28ರಲ್ಲಿ ಗುರಿ ತಲುಪಿದರು. ಕೊರಿಯಾದ ಜೋಡಿಗಳ ನಂತರ ಮೂರನೇ ಸ್ಥಾನ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News