ಬೋರ್ಡರ್-ಗವಾಸ್ಕರ್ ಟ್ರೋಫಿಯಿಂದ ಕ್ಯಾಮರೂನ್ ಗ್ರೀನ್ ಹೊರಗೆ?

Update: 2024-10-10 16:15 GMT

ಕ್ಯಾಮರೂನ್ ಗ್ರೀನ್ | PC : PTI  

ಸಿಡ್ನಿ : ಭಾರತದ ವಿರುದ್ಧದ ಮಹತ್ವದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಗೆ ಮುನ್ನ ಆಸ್ಟ್ರೇಲಿಯ ದೊಡ್ಡ ಹಿನ್ನಡೆಯೊಂದನ್ನು ಅನುಭವಿಸಿದೆ. ಆಸ್ಟ್ರೇಲಿಯದಲ್ಲಿ ನಡೆಯುವ ಈ ಸರಣಿಯಲ್ಲಿ ತಾರಾ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಪಾಲ್ಗೊಳ್ಳುವ ಸಾಧ್ಯತೆ ಬಹುತೇಕ ದೂರವಾಗಿದೆ. ಸರಣಿಯು ನವೆಂಬರ್ 22ರಂದು ಆರಂಭಗೊಳ್ಳಲಿದೆ.

ಕ್ಯಾಮರೂನ್ ಗ್ರೀನ್ ಇತ್ತೀಚೆಗೆ ಗಾಯಗೊಂಡಿದ್ದು, ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೆ ತುರ್ತಾಗಿ ಒಳಗಾಗಬೇಕಾಗಿದೆ ಎಂದು ಹೇಳಲಾಗಿದೆ. ‘‘ಶಸ್ತ್ರಚಿಕಿತ್ಸೆಯು ತಾರ್ಕಿಕ ಆಯ್ಕೆಯಾಗಿದೆ. ಆದರೆ, ಅದು ಹಲವು ಚೇತರಿಕೆ ಕಾರ್ಯಕ್ರಮಗಳ ಪೈಕಿ ಒಂದಾಗಿದೆ. ಈ ನಿಟ್ಟಿನಲ್ಲಿ ಕ್ರಿಕೆಟ್ ಆಸ್ಟ್ರೇಲಿಯದ ವೈದ್ಯಕೀಯ ಮತ್ತು ನಿರ್ವಹಣೆ ತಂಡ ಸಕ್ರಿಯವಾಗಿದೆ’’ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೊ ವರದಿಯೊಂದು ತಿಳಿಸಿದೆ.

ಆಸ್ಟ್ರೇಲಿಯದ ಇಂಗ್ಲೆಂಡ್ ಪ್ರವಾಸದ ವೇಳೆ ಗ್ರೀನ್ ಗಾಯಗೊಂಡಿದ್ದಾರೆ.

ಚೆಸ್ಟರ್-ಲಿ-ಸ್ಟ್ರೀಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯ ಆಡಿದ ಬಳಿಕ ಅವರು ಬೆನ್ನು ನೋವಿಗೆ ಒಳಗಾಗಿದ್ದು, ಆಸ್ಟ್ರೇಲಿಯಕ್ಕೆ ಮರಳಿದ್ದಾರೆ.

ಅವರು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯದಲ್ಲಿ ಸ್ಕ್ಯಾನ್‌ಗೆ ಒಳಗಾಗಿದ್ದಾರೆ. ಈಗ ಮುಂದಿನ ಅತ್ಯುತ್ತಮ ಆಯ್ಕೆ ಯಾವುದು ಎಂಬ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯದ ವೈದ್ಯಕೀಯ ತಂಡ ಅಧ್ಯಯನ ನಡೆಸುತ್ತಿದೆ.

ಶಸ್ತ್ರಚಿಕಿತ್ಸೆಯೇ ಏಕೈಕ ದಾರಿ ಎಂಬುದಾಗಿ ತಂಡವು ನಿರ್ಧರಿಸಿದರೆ, ಇಡೀ ಬೇಸಿಗೆ ಅವಧಿಯಲ್ಲಿ ಅವರು ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆ.

ಗ್ರೀನ್ ಆಸ್ಟ್ರೇಲಿಯದ ಪರವಾಗಿ 28 ಟೆಸ್ಟ್‌ಗಳಲ್ಲಿ ಆಡಿದ್ದಾರೆ. ಅವರು 36.23ರ ಸರಾಸರಿಯಲ್ಲಿ 1377 ರನ್‌ಗಳನ್ನು ಗಳಿಸಿದ್ದಾರೆ ಮತ್ತು 35 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News