ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ದಾಖಲೆ ಜಯ - ಸೆಮೀಸ್ ಆಸೆ ಜೀವಂತ

Update: 2024-10-10 04:19 GMT

ಮೂರನೇ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಶ್ರೀಲಂಕಾ ತಂಡವನ್ನು 82 ರನ್ಗಳ ಭಾರೀ ಅಂತರದಿಂದ ಸೋಲಿಸಿದೆ. ಟಿ20 ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಇದು ಅತಿ ದೊಡ್ಡ ಅಂತರದ ಜಯವಾಗಿದೆ.

ಸೆಮಿಫೈನಲ್ ಹಂತಕ್ಕೇರುವ ಆಸೆ ಜೀವಂತ ಇರಿಸಿಕೊಳ್ಳುವ ನಿಟ್ಟಿನಲ್ಲಿ ಈ ಜಯ ಅನಿವಾರ್ಯವಾಗಿತ್ತು. ಈ ಅಗಾಧ ಅಂತರದ ಜಯದಿಂದಾಗಿ ಭಾರತ ತಂಡ ಎ ಗುಂಪಿನಲ್ಲಿ ಇದೀಗ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ಹಿಂದಿಕ್ಕಿದೆ. ಜತೆಗೆ ನಿವ್ವಳ ರನ್ ರೇಟ್ನಲ್ಲೂ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದೆ.

ಮೊದಲು ಬ್ಯಾಟ್ ಮಾಡಿದ ಭಾರತ, ಹರ್ಮನ್ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಾನಾ ಅವರ ಅರ್ಧಶತಕಗಳ ನೆರವಿನಿಂದ 172 ರನ್ಗಳನ್ನು ಕಲೆ ಹಾಕಿತು. ಆರಂಭದಲ್ಲೇ ಭಾರತೀಯ ಬೌಲರ್ಗಳು ಎದುರಾಳಿಗಳಿಗೆ ಆಘಾತ ನೀಡಿದರು. ಕೇವಲ 6 ರನ್ಗಳಾಗುಷ್ಟರಲ್ಲಿ 3 ವಿಕೆಟ್ ಕಳೆದುಕೊಂಡ ಶ್ರೀಲಂಕಾ 90 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ಅರುಂಧತಿ ರೆಡ್ಡಿ (19ಕ್ಕೆ 3) ಮತ್ತು ಆಶಾ ಶೋಭನಾ (19ಕ್ಕೆ 3) ಯಶಸ್ವಿ ಬೌಲರ್ಗಳೆನಿಸಿದರು.

ಎ ಗುಂಪಿನಲ್ಲಿ ಆಸ್ಟ್ರೇಲಿಯಾ ಆಡಿದ ಎಲ್ಲ 2 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿದ್ದರೆ, ಮೂರು ಪಂದ್ಯಗಳನ್ನು 2ನ್ನು ಗೆದ್ದಿರುವ ಭಾರತ ಎರಡನೇ ಸ್ಥಾನದಲ್ಲಿದೆ. ತಲಾ ಒಂದು ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದರೆ, ಎಲ್ಲ ಪಂದ್ಯಗಳನ್ನು ಸೋತಿರುವ ಶ್ರೀಲಂಕಾ ಕೊನೆಯ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News