ಪಾಕ್ ವಿರುದ್ಧದ ಮೊದಲ ಟೆಸ್ಟ್ | ಬೃಹತ್ ಮೊತ್ತ ಕಲೆ ಹಾಕಿದ ಇಂಗ್ಲೆಂಡ್

Update: 2024-10-09 16:41 GMT
PC : NDTV

ಮುಲ್ತಾನ್ : ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್‌ರ ಅಜೇಯ ಶತಕಗಳ ನೆರವಿನಿಂದ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ ಬುಧವಾರ 3 ವಿಕೆಟ್‌ಗಳ ನಷ್ಟಕ್ಕೆ 492 ರನ್‌ಗಳನ್ನು ಗಳಿಸಿದೆ. ರೂಟ್ 176 ಮತ್ತು ಬ್ರೂಕ್ 141 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಇಂಗ್ಲೆಂಡ್ ಈಗ ಪಾಕಿಸ್ತಾನದ ಮೊದಲ ಇನಿಂಗ್ಸ್ ಮೊತ್ತಕ್ಕಿಂತ 64 ರನ್‌ಗಳ ಹಿನ್ನಡೆಯಲ್ಲಿದೆ.

ಮುಲ್ತಾನ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಬುಧವಾರ ಜೋ ರೂಟ್ ಒಂದು ದಾಖಲೆಯನ್ನೂ ಮುರಿದರು. ಅವರು ಅಲಿಸ್ಟೇರ್ ಕುಕ್‌ರ ಇಂಗ್ಲೆಂಡ್‌ನ ಅತ್ಯಧಿಕ ಟೆಸ್ಟ್ ರನ್‌ಗಳ ದಾಖಲೆಯನ್ನು ಹಿಂದಿಕ್ಕಿದರು. 33 ವರ್ಷದ ರೂಟ್‌ರ ಸ್ಕೋರ್ 71 ಆದಾಗ, ಅವರು ಕುಕ್‌ರ 12,472 ರನ್‌ಗಳ ದಾಖಲೆಯನ್ನು ಹಿಂದಿಕ್ಕಿದರು. ಇದರೊಂದಿಗೆ ಅವರು ಸಾರ್ವಕಾಲಿಕ ಐದನೇ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಆಟಗಾರನಾದರು.

ಅದೇ ವೇಳೆ, ಹ್ಯಾರಿ ಬ್ರೂಕ್ 141 ರನ್ ಗಳಿಸಿ ಅಜೇಯವಾಗಿ ಉಳಿದಿದ್ದಾರೆ.

ರೂಟ್ ಮತ್ತು ಬ್ರೂಕ್ ಮುರಿಯದ ನಾಲ್ಕನೇ ವಿಕೆಟ್‌ಗೆ 243 ರನ್‌ಗಳನ್ನು ಸೇರಿಸಿದ್ದಾರೆ. ನಿರ್ಜೀವ ಪಿಚ್‌ನಲ್ಲಿ ಈ ಜೋಡಿಯು ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಚಿಂದಿ ಉಡಾಯಿಸಿತು.

ಇದೇ ಪಿಚ್‌ನಲ್ಲಿ ಮೊದಲ ಎರಡು ದಿನಗಳಲ್ಲಿ ಪಾಕಿಸ್ತಾನಿ ಬ್ಯಾಟರ್‌ಗಳು ಇಂಗ್ಲೆಂಡ್ ಬೌಲರ್‌ಗಳನ್ನು ದಂಡಿಸಿದ್ದರು.

ರೂಟ್ 481 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದು, 12 ಬೌಂಡರಿಗಳನ್ನು ಸಿಡಿಸಿದ್ದಾರೆ. ಇದು ರೂಟ್‌ರ 35ನೇ ಟೆಸ್ಟ್ ಶತಕವಾಗಿದೆ.

ಬ್ರೂಕ್ ಕೂಡ 12 ಬೌಂಡರಿಗಳನ್ನು, ಜೊತೆಗೆ ಒಂದು ಸಿಕ್ಸ್ ಸಿಡಿಸಿದರು. ಇದು ಬ್ರೂಕ್‌ರ ಆರನೇ ಟೆಸ್ಟ್ ಶತಕವಾಗಿದೆ.

ಇದಕ್ಕೂ ಮುನ್ನ ರೂಟ್, ಬೆನ್ ಡಕೆಟ್ ಜೊತೆಗೆ ಮೂರನೇ ವಿಕೆಟ್‌ಗೆ 136 ರನ್‌ಗಳನ್ನು ಕೂಡಿಸಿದರು. ಡಕೆಟ್ 84 ರನ್‌ಗಳ ದೇಣಿಗೆ ನೀಡಿದರು.

ಪಾಕಿಸ್ತಾನದ ಮೂವರು ವೇಗದ ಬೌಲರ್‌ಗಳಾದ ಶಹೀನ್ ಶಾ ಅಫ್ರಿದಿ, ನಸೀಮ್ ಶಾ ಮತ್ತು ಜಮಾಲ್ ತಲಾ ಒಂದು ವಿಕೆಟ್ ಪಡೆದರು.

ಮುಂಚೂಣಿ ಸ್ಪಿನ್ನರ್ ಅಬ್ರಾರ್ 35 ಓವರ್‌ಗಳಲ್ಲಿ 174 ರನ್‌ಗಳನ್ನು ಕೊಟ್ಟು ಯಾವುದೇ ವಿಕೆಟ್ ಪಡೆಯಲಿಲ್ಲ.

ಇದಕ್ಕೂ ಮುನ್ನ ಝ್ಯಾಕ್ ಕ್ರಾಲಿ 13 ಬೌಂಡರಿಗಳನ್ನು ಒಳಗೊಂಡ 78 ರನ್‌ಗಳನ್ನು ಗಳಿಸಿದರು. ಅವರು ರೂಟ್‌ರೊಂದಿಗೆ ಎರಡನೇ ವಿಕೆಟ್‌ಗೆ 109 ರನ್‌ಗಳನ್ನು ಕೂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News