2ನೇ ಟಿ20 ಪಂದ್ಯ | ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ, ಸರಣಿ ಗೆದ್ದ ಭಾರತ

Update: 2024-10-09 17:50 GMT

PC: x/@Reddy_1610

ಹೊಸದಿಲ್ಲಿ : ವರುಣ್ ಚಕ್ರವರ್ತಿ(2-19) ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ಪ್ರದರ್ಶನ ಹಾಗೂ ನಿತಿಶ್ ಕುಮಾರ್ ರೆಡ್ಡಿ(74 ರನ್) ಹಾಗೂ ರಿಂಕು ಸಿಂಗ್(53 ರನ್)ಅರ್ಧಶತಕದ ಸಹಾಯದಿಂದ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧದ 2ನೇ ಅಂತರ್‌ರಾಷ್ಟ್ರೀಯ ಟಿ20 ಪಂದ್ಯವನ್ನು 86 ರನ್ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಗೆದ್ದುಕೊಂಡಿದೆ.

ಬುಧವಾರ ನಡೆದ 2ನೇ ಟಿ20 ಪಂದ್ಯದಲ್ಲಿ ಗೆಲ್ಲಲು 222 ರನ್ ಕಠಿಣ ಗುರಿ ಪಡೆದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ. ಬಾಂಗ್ಲಾದ ಪರ ಮಹ್ಮೂದುಲ್ಲಾ(41 ರನ್, 39 ಎಸೆತ) ಸರ್ವಾಧಿಕ ಸ್ಕೋರ್ ಗಳಿಸಿದರು.

ಭಾರತದ ಪರ ವರುಣ್, ನಿತಿಶ್ ಕುಮಾರ್(2-23)ತಲಾ ಎರಡು ವಿಕೆಟ್ ಪಡೆದರು. ಸುಂದರ್(1-4) ಅಭಿಷೇಕ್ ಶರ್ಮಾ(1-10), ರಿಯಾನ್ ಪರಾಗ್(1-16), ಅರ್ಷದೀಪ್ ಸಿಂಗ್(1-26) ಹಾಗೂ ಮಯಾಂಕ್ ಯಾದವ್(1-50) ತಲಾ ಒಂದು ವಿಕೆಟ್ ಪಡೆದರು.

►ನಿತಿಶ್, ರಿಂಕು ಅರ್ಧಶತಕ, ಭಾರತ 221 ರನ್

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ 9 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು.

ಭಾರತದ ಇನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್(10 ರನ್) ಎರಡು ಬೌಂಡರಿ ಗಳಿಸಿದರು. ಆದರೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಭಿಷೇಕ್ ಶರ್ಮಾ(15 ರನ್) ಹಾಗೂ ನಾಯಕ ಸೂರ್ಯಕುಮಾರ್ ಯಾದವ್(8 ರನ್) ಕೂಡ ಅಲ್ಪ ಮೊತ್ತಕ್ಕೆ ಔಟಾದರು. ಆಗ ಭಾರತ 6ನೇ ಓವರ್‌ನಲ್ಲಿ 41 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು.

4ನೇ ವಿಕೆಟ್‌ಗೆ 108 ರನ್ ಜೊತೆಯಾಟ ನಡೆಸಿದ ನಿತಿಶ್ ರೆಡ್ಡಿ(74 ರನ್, 34 ಎಸೆತ)ಹಾಗೂ ರಿಂಕು ಸಿಂಗ್(53 ರನ್, 29 ಎಸೆತ)ಭಾರತ ಚೇತರಿಸಿಕೊಳ್ಳುವಲ್ಲಿ ನೆರವಾದರು.

ಹಾರ್ದಿಕ್ ಪಾಂಡ್ಯ(32 ರನ್, 19 ಎಸೆತ)ಭಾರತದ ಇನಿಂಗ್ಸ್‌ ಗೆ ಶಕ್ತಿ ತುಂಬಿದರು.

ರಿಶಾದ್ ಹುಸೈನ್(3-55)ಯಶಸ್ವಿ ಬೌಲರ್ ಎನಿಸಿಕೊಂಡರು. ತಸ್ಕಿನ್ ಅಹ್ಮದ್(2-16), ಮುಸ್ತಫಿಝುರ್ರಹ್ಮಾನ್(2-36) ಹಾಗೂ ತಂಝಿಮ್ ಹಸನ್(2-50) ತಲಾ 2 ವಿಕೆಟ್‌ಗಳನ್ನು ಪಡೆದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News