ಎರಡು ಬೆಳ್ಳಿ ಪದಕಗಳನ್ನು ನೀಡಲು ಸಾಧ್ಯವಿಲ್ಲ, ಆದರೆ..: ವಿನೇಶ್ ಫೋಗಟ್ ಮೇಲ್ಮನವಿ ಕುರಿತು ಐಒಸಿ ಹೇಳಿದ್ದೇನು?

Update: 2024-08-10 13:17 GMT

ಪ್ಯಾರಿಸ್: ಒಂದೇ ತೂಕದ ವಿಭಾಗದಲ್ಲಿ ಎರಡು ಬೆಳ್ಳಿ ಪದಕಗಳನ್ನು ನೀಡಲು ಅವಕಾಶವಿಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (IOC) ಅಧ್ಯಕ್ಷ ಥಾಮಸ್ ಬ್ಯಾಕ್ ಸ್ಪಷ್ಟಪಡಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡ ಬೆನ್ನಿಗೆ, ಈ ಸ್ಪಷ್ಟನೆ ಹೊರ ಬಿದ್ದಿದೆ.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬ್ಯಾಕ್, ಫೈನಲ್ ಪಂದ್ಯದಲ್ಲಿ ಪರಾಭವಗೊಂಡಿರುವ ಎದುರಾಳಿಯೊಂದಿಗೆ ವಿನೇಶ್ ಫೋಗಟ್ ಅವರಿಗೂ ಬೆಳ್ಳಿ ಪದಕ ನೀಡಲು ಅವಕಾಶವಿದೆಯೆ ಎಂಬ ಪ್ರಶ್ನೆಗಳ ಕುರಿತು ಅವರು ಪ್ರತಿಕ್ರಿಯಿಸುತ್ತಿದ್ದರು.

“ನೀವು ಸಾಮಾನ್ಯವಾಗಿ ಇಬ್ಬರು ಕ್ರೀಡಾಪಟುಗಳಿಗೆ ಒಂದೇ ವಿಭಾಗದಲ್ಲಿ ಎರಡು ಬೆಳ್ಳಿ ಪದಕಗಳನ್ನು ನೀಡಲು ಅವಕಾಶವಿದೆಯೆ ಎಂದು ಪ್ರಶ್ನಿಸಿದರೆ, ನನ್ನ ಉತ್ತರ ಇಲ್ಲ ಎಂದಾಗಿದೆ” ಎಂದು ಬ್ಯಾಕ್ ಹೇಳಿದ್ದಾರೆ. ಆದರೆ, ಪ್ರತಿ ಪ್ರಕರಣವನ್ನೂ ವೈಯಕ್ತಿಕವಾಗಿ ಪರಿಶೀಲಿಸಬೇಕಿದ್ದು, ಅಂತಾರಾಷ್ಟ್ರೀಯ ಒಕ್ಕೂಟವು ಪಾಲಿಸಬೇಕಾದ ನಿಯಮಾವಳಿಗಳಿವೆ ಹಾಗೂ ಈ ಕುರಿತ ನಿರ್ಧಾರವನ್ನು ಅಂತಾರಾಷ್ಟ್ರೀಯ ಒಕ್ಕೂಟವಾದ ಸಂಯುಕ್ತ ವಿಶ್ವ ಕುಸ್ತಿ ಒಕ್ಕೂಟ ಕೈಗೊಳ್ಳಲಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

50 ಕೆಜಿ ಕುಸ್ತಿ ವಿಭಾಗದ ಫೈನಲ್ ವರೆಗೆ ಅಮೋಘ ಪ್ರದರ್ಶನ ನೀಡಿದ್ದ ವಿನೇಶ್ ಫೋಗಟ್, ಫೈನಲ್ ಪಂದ್ಯಕ್ಕೂ ಮುನ್ನ ಬೆಳಗ್ಗೆ ತಮ್ಮ ದೇಹದ ತೂಕ 100 ಗ್ರಾಮ್ ನಷ್ಟು ಹೆಚ್ಚಾಗಿದ್ದರಿಂದ ಫೈನಲ್ ಪಂದ್ಯದಿಂದ ಅನರ್ಹಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News