ಕೋಚ್ ಆಯ್ಕೆ | ಕುತೂಹಲ ಹುಟ್ಟಿಸಿದ ಸೌರವ್ ಗಂಗುಲಿಯ ಸಂದೇಶ
ಮುಂಬೈ : ಭಾರತೀಯ ಕ್ರಿಕೆಟ್ ತಂಡದ ಮುಂದಿನ ಪ್ರಧಾನ ಕೋಚ್ ನ ಶೋಧ ಕಾರ್ಯ ನಡೆಯುತ್ತಿದೆ. ಈ ಭಾರೀ ಬೇಡಿಕೆಯ ಹುದ್ದೆಗೆ ಹಲವು ಹೆಸರುಗಳು ಕೇಳಿಬರುತ್ತಿವೆ.
ಹಾಲಿ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ರ ಅವಧಿಯು ಮುಂಬರುವ ಟಿ20 ಕ್ರಿಕೆಟ್ ವಿಶ್ವಕಪ್ ಬಳಿಕ ಕೊನೆಗೊಳ್ಳುತ್ತದೆ. ಈ ಹುದ್ದೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಹಲವರನ್ನು ಸಂಪರ್ಕಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ವಿದೇಶಿ ಕೋಚ್ ಗಳು ಈ ಹುದ್ದೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಿಲ್ಲ ಎನ್ನಲಾಗಿದೆ. ಈ ಕ್ಷಣದಲ್ಲಿ, ಗೌತಮ್ ಗಂಭೀರ್ ಮತ್ತು ಆಶಿಶ್ ನೆಹ್ರಾ ಈ ಹುದ್ದೆಗೆ ನೆಚ್ಚಿನ ಅಭ್ಯರ್ಥಿಗಳು ಎನ್ನಲಾಗಿದೆ.
ಈ ನಡುವೆ, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಸಂದೇಶವೊಂದು ಕುತೂಹಲಕ್ಕೆ ಕಾರಣವಾಗಿದೆ.
‘‘ವ್ಯಕ್ತಿಯೊಬ್ಬನ ಜೀವನದಲ್ಲಿ ಕೋಚ್ ಮಹತ್ವದ ಪಾತ್ರ ವಹಿಸುತ್ತಾರೆ. ಅವರ ಮಾರ್ಗದರ್ಶನ ಮತ್ತು ನಿರಂತರ ತರಬೇತಿಯು ಮೈದಾನದ ಒಳಗೆ ಮತ್ತು ಹೊರಗೆ ವ್ಯಕ್ತಿಯ ಭವಿಷ್ಯವನ್ನು ರೂಪಿಸುತ್ತದೆ. ಹಾಗಾಗಿ, ಕೋಚನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿ’’ ಎಂಬುದಾಗಿ ಗಂಗುಲಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿತ್ತು. ಆದರೆ, ದ್ರಾವಿಡ್ ರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಬಿಸಿಸಿಐ ಅವಸರ ಮಾಡುತ್ತಿಲ್ಲ. ಭಾರತೀಯ ಕ್ರಿಕೆಟಿಗರು ಈಗ ಟಿ20 ವಿಶ್ವಕಪ್ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಕೋಚ್ ಆಯ್ಕೆ ವಿಳಂಬವಾದರೆ ಮುಂಬರುವ ಕೆಲವು ಪ್ರವಾಸಗಳಲ್ಲಿ ನ್ಯಾಶನಲ್ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯ ಕೋಚ್ ಗಳು ಭಾರತೀಯ ತಂಡದ ಜೊತೆಗೆ ಹೋಗಬಹುದು ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.